ಮಂಗಳೂರು,ಮಾರ್ಚ್.23 : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಎಂಬ ಕಾರ್ಯಕ್ರಮದ 8 ನೇ ವಾರದ ಸ್ವಚ್ಚತಾ ಅಭಿಯಾನವನ್ನು ನಗರದ ರಥಬೀದಿಯಲ್ಲಿ ಪರಿಸರದಲ್ಲಿ ಕೈಗೊಳ್ಳಲಾಯಿತು. ಮಂಗಳೂರು ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾದ ಸ್ವಾಮಿಜೀ ಜಿತಕಾಮಾನಂದಜಿಯವರ ಸಮ್ಮುಖದಲ್ಲಿ ಹೈದ್ರಾಬಾದ್ ರಾಮಕೃಷ್ಣ ಮಠದ ಸ್ವಾಮಿ ಅನುಪಮಾನಂದಜಿ ಅಭಿಯಾನಕ್ಕೆ ಚಾಲನೆ ನೀಡಿದರು. ಕಡಪಾ ರಾಮಕೃಷ್ಣ ಮಿಷನ್ನಿನ ಸ್ವಾಮಿಜೀ ಪ್ರಜ್ಞಾನಾಥಾನಂದಜಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನೂರಾರು ವಿದ್ಯಾರ್ಥಿಗಳು, ಆಶ್ರಮದ ಭಕ್ತರು ಹಾಗೂ ಹಿತೈಷಿಗಳು ಸ್ವಚ್ಚತಾ ಕಾರ್ಯ ಕೈಗೊಂಡರು.
ಎಸ್ ಡಿ ಎಂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಥಬೀದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಿದರು. ಹಾಗೂ ಮನೆ ಮನೆಗೆ ತೆರಳಿ ಶುಚಿತ್ವದ ಕುರಿತು ಜಾಗೃತಿ ಉಂಟುಮಾಡುವ ವಿಶೇಷ ಕಾರ್ಯವನ್ನು ಕೈಗೊಂಡರು. ನಾರಾಯಣ ಗುರು ಕಾಲೇಜಿನ ವಿದ್ಯಾರ್ಥಿಗಳು ಟೆಂಪಲ್ ಸ್ಕ್ವೇರ್ ನಿಂದ ಪ್ರಾರಂಭಿಸಿ ರಥಬೀದಿಯ ಕೊನೆಯವರೆಗೂ ಬೀದಿಯ ಇಕ್ಕೆಲಗಳನ್ನು ಹಾಗೂ ಪುಟ್ ಪಾತ್ ಗಳನ್ನು ಶುಚಿಗೊಳಿಸಿದರು.
ಇದೇ ಪರಿಸರದಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಅಲ್ಲಿದ್ದ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವೊಂದನ್ನು (ಕಲಾಮಂದಿರ) ನವೀಕರಣಗೊಳಿಸಲಾಯಿತು. ಅಲ್ಲಲ್ಲಿ ಮುರಿದುಬೀಳುತ್ತಿದ್ದ ಕಂಬಗಳನ್ನು, ಮೆಟ್ಟಿಲುಗಳನ್ನು ದುರಸ್ತಿ ಮಾಡಲಾಯಿತು. ನಂತರ ಕಟ್ಟಡವನ್ನು ನೀರಿನಿಂದ ತೊಳೆದು ಪಾಚಿಮುಕ್ತವನ್ನಾಗಿಸಿ ಇಡೀ ಕಲಾಮಂದಿರವನ್ನು ಅಂದವಾಗಿ ಬಣ್ಣ ಹಚ್ಚಿ ಸುಂದರಗೊಳಿಸಲಾಯಿತು. ನಮ್ಮ ಸ್ವಯಂಸೇವಕರ ತಂಡವು ಅದೇ ಕಲಾಮಂದಿರದ ಬಳಿ ವರ್ಷಾಂತರಗಳಿಂದ ಶೇಖರಗೊಂಡಿದ್ದ ಕಸದ ರಾಶಿ ಹಾಗೂ ಮಣ್ಣನ್ನು ಜೆ. ಸಿ. ಬಿ. ಯಂತ್ರದ ಮೂಲಕ ತೆರವುಗೊಳಿಸಿ ನೆಲವನ್ನು ಸಮತಟ್ಟುಗೊಳಿಸಲಾಯಿತು. ತದನಂತರ ಇಡೀ ಕ್ಯಾಂಪಸ್ ನ್ನು ಶುಚಿಗೊಳಿಸಲಾಯಿತು.
ಸ್ಥಳಿಯ ರಾಮಕೃಷ್ಣ ಮಿಷನ್ನಿನ ಸ್ವಾಮೀಜಿ ಹಾಗೂ ಬ್ರಹ್ಮಚಾರಿಗಳು ಸ್ವತ: ಸ್ವಚ್ಚತಾಕಾರ್ಯದಲ್ಲಿ ಪಾಲ್ಗೊಂಡು ಸ್ವಯಂಸೇವಕರಿಗೆ ಸ್ಪೂರ್ತಿ ನೀಡಿದರು. ವಿದ್ಯಾರ್ಥಿಗಳಿಗೆ ರಾಮಕೃಷ್ಣ ಮಿಷನ್ನಿನಲ್ಲಿ ಸ್ವಚ್ಚ ಮನಸ್ಸು ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರವಚನ ಧ್ಯಾನ ಉಪನ್ಯಾಸ ಹಾಗೂ ವಿಶೇಷ ವಿಡಿಯೋ ಶೋ ಜರುಗಿದವು.