ಕನ್ನಡ ವಾರ್ತೆಗಳು

ಪಿಕಪ್ ವಾಹನದ ಡ್ಯಾಶ್ ಬೋರ್ಡ್‌ನಿಂದ 2 ಲಕ್ಷ ರೂ. ಎಗರಿಸಿದ ಆರೋಪಿ ಸೆರೆ

Pinterest LinkedIn Tumblr

supari_amount_robery

ಕಾರ್ಕಳ,ಮಾರ್ಚ್.20 : ಅಡಿಕೆ ಮಾರಾಟ ಮಾಡಿ ಊರಿಗೆ ತೆರಳುತ್ತಿದ್ದಾಗ ವಾಹನದಲ್ಲಿಟ್ಟ 2 ಲಕ್ಷ ರೂ. ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಕಾರ್ಕಳ ಠಾಣಾ ಪೊಲೀಸರು ಬಂಧಿಸಿದ್ದಾರೆ.  ಶಿವಮೊಗ್ಗದ ಮಾಲ್ವೆಯ ಪ್ರವೀಣ್ ಎಂ.ಕೆ(25) ಬಂಧಿತ ಆರೋಪಿ. ನಕಲಿ ಕೀ ಉಪಯೋಗಿಸಿ ಈ ಕೃತ್ಯ ವೆಸಗಿದ್ದಾನೆಂದು ತಿಳಿದುಬಂದಿದೆ.

ಶಿವಮೊಗ್ಗ ಸಾಗರದ ನೆಹರು ನಗರ 1ನೇ ತಿರುವಿನ ನಿವಾಸಿ ಅಬ್ದುಲ್ ಸಮದ್(28) ಪ್ರಕರಣದ ದೂರುದಾರರು. ಶಿವಮೊಗ್ಗ ಸಾಗರದ ಜನ್ನತ್ ನಿವಾಸಿ ಇಮ್ರಾನ್ ಎಂಬವರಿಗೆ ಸೇರಿದ ಮಹೇಂದ್ರ ಪಿಕಪ್ ವಾಹನ ನಂಬ್ರ ಕೆಎ 17 ಟಿಆರ್ 3881ರಲ್ಲಿ ಇಮ್ರಾನ್ ಎಂಬವರಿಗೆ ಸೇರಿದ 1600 ಕೆ.ಜಿ ತೂಕದ ಅಡಿಕೆಯನ್ನು ಚಾಲಕರಾದ ಸಲೀಂ ಹಾಗೂ ಅಜೀಂ ಎಂಬವ ರೊಂದಿಗೆ ಮಂಗಳೂರಿನ ಫರಂಗಿಪೇಟೆ ಎಂಬಲ್ಲಿನ ಫರಂಗಿಪೇಟೆ ಅಡಿಕೆ ಸೆಂಟರ್ ಅಂಗಡಿಯಲ್ಲಿ ಮಾರಾಟ ಮಾಡಿದ್ದರು.

ಅಡಿಕೆ ಮಾರಾಟದಿಂದ ಬಂದಿದ್ದ 2 ಲಕ್ಷ ನಗದನ್ನು ಪಿಕಪ್ ವಾಹನದ ಡ್ಯಾಶ್ ಬೋರ್ಡ್ನಲ್ಲಿರುವ ಬಾಕ್ಸ್ನಲ್ಲಿಟ್ಟು ಸಾಗರದ ಕಡೆಗೆ ಪ್ರಯಾಣ ಮುಂದುವರಿಸಿದ್ದರು. ಕಾರ್ಕಳ ಹಿರ್ಗಾನ ಎಣ್ಣೆಹೊಳೆ ಎಂಬಲ್ಲಿ ಸಮದ್ ಮೂತ್ರ ವಿಸರ್ಜನೆಗೆಂದು ವಾಹನದಿಂದ ಕೆಳಗಿಳಿದಿದ್ದು, ಮರಳಿ ಅದೇ ವಾಹನ ಏರಿ ಡ್ಯಾಶ್ ಬೋರ್ಡ್ನಲ್ಲಿದ್ದ ಚಾಚಣಿಗೆ ತೆಗೆಯುವ ಸಮಯದಲ್ಲಿ ಅಡಿಕೆ ಮಾರಾಟ ಮಾಡಿದ 2 ಲಕ್ಷ ರೂ. ಕಳವು ಆಗಿರುವುದು ಅವರ ಗಮನಕ್ಕೆ ಬಂದಿದೆ. ಚಾಲಕರಾದ ಸಲೀಂ ಮತ್ತು ಅಜೀಂ ಅವರು ವಾಹನದಲ್ಲಿದ್ದು ಅವರಿಬ್ಬರು ಕಳವು ಕೃತ್ಯದಲ್ಲಿ ಶಾಮೀಲಾಗಿರಬಹುದೆಂದು ಅಬ್ದುಲ್ ಸಮದ್ ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ನಡೆದಿರುವುದೇ ಬೇರೆ: ಆರೋಪಿ ಪ್ರವೀಣ ಎಂ.ಕೆ ಕಳೆದ ಕೆಲ ತಿಂಗಳುಗಳ ಹಿಂದೆ ನಗದು ಕಳವು ಆಗಿರುವ ಪಿಕಪ್ ವಾಹನದಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದನಲ್ಲದೇ ಅಬ್ದುಲ್ ಸಮದ್ ಜೊತೆಯಲ್ಲಿ ಅಡಿಕೆ ಮಾರಾಟ ಮಾಡಲೆಂದು ಮಂಗಳೂರಿನ ಫರಂಗಿ ಪೇಟೆಗೂ ಬಂದಿದ್ದನು. ಅಡಿಕೆ ಮಾರಾಟದಿಂದ ಲಕ್ಷಾಂತರ ರೂ. ಅಬ್ದುಲ್ ಸಮದ್ ಕೈ ಸೇರುತ್ತಿರುವುದು, ಅದನ್ನು ಅವರು ಅದೇ ವಾಹನದಲ್ಲಿ ಸಂರಕ್ಷಣೆ ಮಾಡುವ ವಿವರವೆಲ್ಲವನ್ನು ಆರೋಪಿ ಸಂಗ್ರಹಿಸಿದ್ದನು. ಈ ಎಲ್ಲಾ ಬೆಳವಣಿಗೆಯ ನಡುವೆ ವಾಹನದ ಕೀ ಪಡೆದಿದ್ದ ಆರೋಪಿ ಅದ್ಯಾಗೋ ನಕಲಿ ಕೀ ತಯಾರಿಸಿ ತನ್ನಲ್ಲಿ ಭದ್ರವಾಗಿ ಇಟ್ಟುಕೊಂಡಿದ್ದನು.

ಅಡಿಕೆ ಮಾರಾಟದ ಜೀಪು ಮಂಗಳೂರು ಫರಂಗಿಪೇಟೆಯತ್ತ ಸಾಗುತ್ತಿರುವ ಮಾಹಿತಿ ಪಡೆದ ಆರೋಪಿ ತನ್ನ ಬೈಕ್ನಲ್ಲಿ ಮಂಗಳೂರು ಕಡೆ ಪ್ರಯಾಣ ಬೆಳೆಸಿದ್ದಾನೆ. ಗುರುಪುರ ಕೈಕಂಬ ಬಳಿಯ ಹೋಟೆಲೊಂದರಲ್ಲಿ ಎಂದಿನಂತೆ ಉಪಹಾರ ಸೇವಿಸಲು ಪಿಕಪ್ ಮಹೇಂದ್ರ ವಾಹನ ನಿಲ್ಲಿರುವ ಬೆನ್ನಲ್ಲೇ ಆರೋಪಿ ತನ್ನ ಕೈಚಳಕ ತೋರಿಸಿದ್ದಾನೆ. ಎರಡು ದಿನಗಳ ಕಾಲ ಆರೋಪಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿರುವುದು ಹಾಗೂ ಕೃತ್ಯ ಎಸಗುವ ಸಂಚಿನ ಬಗ್ಗೆ ತನ್ನ ಸಹಚರನೊಬ್ಬನಲ್ಲಿ ಹೇಳಿಕೊಂಡಿರುವುದು ಪ್ರಕರಣದ ಸತ್ಯಾಂಶ ಬಯಲಿಗೆ ಬರಲು ಸಾಧ್ಯವಾಯಿತು. ಇದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅದೇಶದಂತೆ ಅಡಿಷನಲ್ ಎಸ್ಪಿ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್ಪಿ ವಿನಯ್ ಎಸ್.ನಾಯಕ್ ನಿರ್ದೇಶನದಲ್ಲಿ ಕಾರ್ಕಳ ಪೊಲೀಸ್ ವೃತ್ತನಿರೀಕ್ಷಕ ಜಿ.ಎಂ.ನಾಯ್ಕರ್ ಹಾಗೂ ಸಿಬ್ಬಂದಿಗಳಾದ ಪ್ರಧಾನ ಪೊಲೀಸ್ ಪೇದೆಗಳಾದ ರಾಜೇಶ್.ಪಿ. ಏಕನಾಥ, ಪೊಲೀಸ್ ಪೇದೆಗಳಾದ ಸಂಜಯ್, ಅರುಣ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Write A Comment