ಕೊಳ್ಳೇಗಾಲ,ಮಾರ್ಚ್.20 : ತಾಲೂಕಿನ ಹನೂರು ಕ್ಷೇತ್ರದಲ್ಲಿ ಇನ್ನೂ ಹೆಸರಿಡದ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಹುಟ್ಟಿದ ಆರು ತಿಂಗಳಲ್ಲೇ ಬಾಧಿಸುವ ಈ ಕಾಯಿಲೆ, ರೋಗಿಯನ್ನು ಜವರಾಯನ ಬಳಿಗೆ ಕರೆದೊಯ್ಯುವ ಮಹಾಮಾರಿ. ಈ ಮಹಾಮಾರಿ ಈಗಾಗಲೇ ತಾಲೂಕಿನ ಕುರಟ್ಟಿಹೊಸೂರು ಗ್ರಾಮದ 3 ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ಇನ್ನೂ 10ಕ್ಕೂ ಹೆಚ್ಚು ಮಕ್ಕಳಿಗೆ ಕಾಯಿಲೆ ಉಲ್ಬಣಗೊಳ್ಳುತ್ತಿದೆ. ಗ್ರಾಮದ ಮುನಿಮಾದ ಶೆಟ್ಟಿ ಅವರ ಪುತ್ರಿಯರಾದ ಚಿನ್ನಮುನಿಯಮ್ಮ (18 ವರ್ಷ) ಮತ್ತು ಅಯ್ಯಮ್ಮ, ಗಣೇಶ್ ಎಂಬುವರ ಪುತ್ರ ನಾಗಪ್ಪ (13 ವರ್ಷ) ಈ ಕಾಯಿಲೆಯಿಂದ ಅಸುನೀಗಿದ್ದಾರೆ.
ಹುಟ್ಟಿದ 6 ತಿಂಗಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ, ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಪ್ರಾರಂಭದಲ್ಲಿ ಮುಖ, ಕೈಕಾಲುಗಳಲ್ಲಿ ಸಣ್ಣ ಕಪ್ಪು ಕಲೆಗಳು ಕಾಣಿಸಿಕೊಂಡು, ನಂತರ ಅದು ಇಡೀ ಶರೀರ ವ್ಯಾಪಿಸುತ್ತದೆ. ನಂತರ ಮುಖದಲ್ಲಿ ಸಣ್ಣ ಸಣ್ಣ ಗುಳ್ಳೆಗಳಾಗಿ, ಮೊದಲು ರೋಗಿಯನ್ನು ಕುರೂಪಿಯನ್ನಾಗಿಸುತ್ತದೆ.
ಕಾಯಿಲೆ ಪೀಡಿತ ಮಕ್ಕಳು ಒಂದು ವರ್ಷದಿಂದ 18 ವರ್ಷಗಳ ತನಕ ಬದುಕಿದ ನಿದರ್ಶನಗಳಿವೆ. ಈ ಕಾಯಿಲೆಯಿಂದ ಗುಣಮುಖರನ್ನಾಗಿಸಲು ಪೊಷಕರು ಮಕ್ಕಳನ್ನು ಮೈಸೂರು, ಬೆಂಗಳೂರಿನ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಕೂಡಿಸಿದ್ದಾರೆ. ಆದರೆ ರೋಗ ಮಾತ್ರ ವಾಸಿಯಾಗಿಲ್ಲ. ವೈದ್ಯರು ಇದು ಚರ್ಮದ ಕ್ಯಾನ್ಸರ್ ಎಂದು ಹೇಳುತ್ತಿದ್ದಾರೆ ಎನ್ನುವುದು ಪೋಷಕರ ಹೇಳಿಕೆ. ಈ ರೋಗದ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನೂ ತಲೆ ಕೆಡಿಸಿಕೊಂಡಿಲ್ಲ.