ಮಂಗಳೂರು, ಮಾ.20 : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿ ದ.ಕ. ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ಆರು ಮಂದಿ ನಿರ್ಲಕ್ಷಿತ (ಲೈಂಗಿಕ ಕಾರ್ಯಕರ್ತೆಯರು) ಮಹಿಳೆಯರು ತಮ್ಮ ವೃತ್ತಿಯಿಂದ ಹೊರಬಂದು ಗೌರವಯುತ ಜೀವನ ಸಾಗಿಸಲು ಅನುಕೂಲವಾಗುವ ಪುನರ್ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಎ.ಬಿ.ಇಬ್ರಾಹೀಂ, ಜಿಲ್ಲೆಯಲ್ಲಿ ಪುನರ್ವಸತಿ ಯೋಜನೆಯಡಿ ಸ್ವ ಉದ್ಯೋಗ ಕೈಗೊಳ್ಳಲು ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ಆರು ಮಂದಿ ಮಹಿಳೆಯರಿಗೆ 10 ದಿನಗಳೊಳಗೆ ಸಾಲ ಮಂಜೂರು ಮಾಡುವಂತೆ ಲೀಡ್ ಬ್ಯಾಂಕ್ ಪ್ರತಿನಿಧಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು. ನಿರ್ಲಕ್ಷಿತ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳಿಂದ ಒದಗಿಸಲಾಗುವ ನೆರವು ಸಾಲ ಸೌಲಭ್ಯಗಳನ್ನು ವಿಳಂಬ ಮಾಡದೆ ಒದಗಿಸುವ ಮೂಲಕ ಅವರು ಗೌರವಯುತ ಜೀವನ ನಡೆಸಲು ಸಹಕರಿಸಬೇಕೆಂದು ಅವರು ಮನವಿ ಮಾಡಿದರು. ಜಿಲ್ಲೆಯಲ್ಲಿ ಹಿಂದೂ ಕುಸ್ಟ್ ನಿವಾರನ್ ಎಂಬ ಸರಕಾರೇತರ ಸಂಸ್ಥೆಯಡಿ 1,509 ಮಂದಿ ನಿರ್ಲಕ್ಷಿತ ಮಹಿಳೆಯರು ನೋಂದಾಯಿಸಿಕೊಂಡಿದ್ದರೂ, 6 ಮಂದಿ ಮಾತ್ರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ನಿರ್ಲಕ್ಷಿತ ಮಹಿಳೆಯರಿಗೆ ಲಭ್ಯವಿರುವ ಪುನರ್ವಸತಿ ಯೋಜನೆಗಳ ಕುರಿತಂತೆ ಸೂಕ್ತ ರೀತಿಯಲ್ಲಿ ಸರಕಾರೇತರ ಸಂಸ್ಥೆಗಳ ಜೊತೆಯಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಬೇಕೆಂದು ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವರ್ಷದಿಂದ ವರ್ಷಕ್ಕೆ ನಿರ್ಲಕ್ಷಿತ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸಮಾಜದಲ್ಲಿ ಅವರಿಗಿರುವ ಸ್ಥಾನಮಾನದ ಹಿನ್ನೆಲೆಯಲ್ಲಿ ಅವರನ್ನು ಪುನರ್ವಸತಿ ಯೋಜನೆಗಾಗಿ ನೋಂದಣಿ ಮಾಡಿಸಿಕೊಳ್ಳಲು ಕಷ್ಟವಾಗುತ್ತಿದೆ. ನಿರ್ಲಕ್ಷಿತ ಮಹಿಳೆಯರಲ್ಲಿ ಗುರುತಿನ ಪತ್ರ ಅಥವಾ ಯಾವುದೇ ರೀತಿಯ ದಾಖಲಾತಿಗಳು ಇಲ್ಲದಿರುವುದರಿಂದ ಬ್ಯಾಂಕ್‌ಗಳಿಂದ ಅವರಿಗೆ ವಿವಿಧ ಯೋಜನೆಗಳನ್ನು ಒದಗಿಸಲು ಅಸಾಧ್ಯವಾಗುತ್ತಿದೆ ಎಂದು ಹಿಂದು ಕುಸ್ಟ್ ನಿವಾರನ್ ಸಂಸ್ಥೆಯ ಸಮಾಲೋಚಕಿ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ನಿರ್ಲಕ್ಷಿತ ಮಹಿಳೆಯರನ್ನು ಗುರುತಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಡ್ಸ್ ಮತ್ತು ಹಿಂದು ಕುಸ್ಟ್ ನಿವಾರನ್ ಸಂಘವು ಸದಸ್ಯರಿಗೆ ನೀಡುವ ಗುರುತಿನ ಪತ್ರವನ್ನೇ ಅಧಿಕೃತ ಗುರುತಿನ ಚೀಟಿಯನ್ನಾಗಿಸಿ ಅವರಿಗೆ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತದಿಂದ ಇಂದೇ ಅನುಮತಿ ನೀಡುವುದಾಗಿ ಸಭೆಯಲ್ಲಿ ತಿಳಿಸಿದರು.
ಪ್ರತೀ ವರ್ಷ ಸಂಸ್ಥೆಗೆ ಯುವ ಸದಸ್ಯರ ನೋಂದಣಿ ಹೆಚ್ಚಾಗುತ್ತಿದೆ. ಹಿಂದೆ ಬೀದಿ ಆಧಾರಿತ ವೃತ್ತಿಪರ ನಿರ್ಲಕ್ಷಿತ ಮಹಿಳೆಯರನ್ನು ಗುರುತಿಸಲಾಗುತ್ತಿತ್ತು. ಆದರೆ ಇದೀಗ ಮೊಬೈಲ್ ಹಾಗೂ ಲಾಡ್ಜ್‌ಗಳಲ್ಲಿ ಸ್ನೇಹ ರೂಪದಲ್ಲೇ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ನಿರ್ಲಕ್ಷಿತ ಮಹಿಳೆಯರನ್ನು ಗುರುತಿಸಲು ಕಷ್ಟಕರವಾಗುತ್ತಿದೆ. ಮಾತ್ರವಲ್ಲದೆ, ಸಮಾಜದ ಹಿಂಜರಿಕೆ ಹಾಗೂ ಭಯದಿಂದಾಗಿ ಇಂತಹ ಮಹಿಳೆಯರು ಪುನರ್ವಸತಿ ಸೌಲಭ್ಯಗಳನ್ನು ಪಡೆಯಲು ಮುಂದಾಗುತ್ತಿಲ್ಲ ಎಂದು ಸಂಸ್ಥೆಯ ಸಮಾಲೋಚಕಿ ಸಭೆಯಲ್ಲಿ ತಿಳಿಸಿದರು. ಸರಕಾರದಿಂದ ನಿರ್ಲಕ್ಷಿತ ಮಹಿಳೆಯರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಂತಹ ಮಹಿಳೆಯರು ಪುನರ್ವಸತಿ ಯೋಜನೆಯನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವಂತೆ ಜಿಲ್ಲಾಧಿಕಾರಿ ಈ ಸಂದರ್ಭ ಸಲಹೆ ನೀಡಿದರು.
ನಿರ್ಲಕ್ಷಿತ ಮಹಿಳೆಯರ ಪುನರ್ವಸತಿ ಯೋಜನೆಯಡಿ 18ರಿಂದ 40 ವರ್ಷ ಪ್ರಾಯದ ಕರ್ನಾಟಕದ ನಿವಾಸಿಗಳು ಫಲಾನುಭವಿಗಳಾಗಿದ್ದು, ತಮ್ಮ ವೃತ್ತಿಯಿಂದ ಹೊರಬಂದು ಗೌರವಯುತ ಜೀವನ ನಡೆಸಲು ಮುಂದೆ ಬರುವವರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಶೇ.30ರಷ್ಟು ಸಬ್ಸಿಡಿ ರೂಪದಲ್ಲಿ ಗರಿಷ್ಠ 1.50 ಲಕ್ಷ ರೂ. ಸಾಲ ಸೌಲಭ್ಯವನ್ನು ಈ ಯೋಜನೆಯಡಿ ನೀಡಲಾಗುತ್ತಿದೆ ಎಂದು ದ.ಕ.ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗರ್ಟ್ರೂಡ್ ವೇಗಸ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂಬತ್ತು ಮಂದಿಗೆ 2,70,000 ರೂ. ಗುರಿ ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಸಿರುವ ಆರು ಮಂದಿಯಲ್ಲಿ ಒಬ್ಬರು ದಿನಸಿ ವ್ಯಾಪಾರ ಹಾಗೂ ಇತರ ಐವರಿಗೆ ಬಟ್ಟೆ ವ್ಯಾಪಾರಕ್ಕೆ ಸಾಲ ಮಂಜೂ ರಾತಿಗೆ ಅನುಮೋದಿಸಲಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಗಣೇಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.