ಕನ್ನಡ ವಾರ್ತೆಗಳು

ಮಹಿಳೆಯನ್ನು ಲೈಂಗಿಕ ವ್ರತ್ತಿ ಕೂಪಕ್ಕೆ ತಳ್ಳುವ ವ್ಯಕ್ತಿ ಅಥವಾ ವ್ಯವಸ್ಥಿತ ಜಾಲವನ್ನು ಆರೋಪಿಗಳನ್ನಾಗಿ ಪರಿಗಣಿಸಬೇಕು; ಜಿಲ್ಲಾ ನ್ಯಾಯಾಧೀಶರು

Pinterest LinkedIn Tumblr

ಉಡುಪಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಉಡುಪಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಶನ್‌ ಸೊಸೈಟಿ, ಬೆಂಗಳೂರು, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ, ಬೆಂಗಳೂರು, ಸಹಭಾಗಿತ್ವದಲ್ಲಿ ನಿರ್ಲಕ್ಷಿತ ಮಹಿಳೆಯರ ಮೇಲೆ ಆಗುವ ದೌರ್ಜನ್ಯ ತಡೆ ಹಾಗೂ ಲಿಂಗ ಸಂವೇದನಾಶೀಲತೆಯ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಗುರುವಾರ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ  ಶಿವಶಂಕರ್‌ . ಬಿ. ಅಮರಣ್ಣವರ್‌, ನಿರ್ಲಕ್ಷಿತ ಮಹಿಳೆಯರ ಮೇಲೆ ಆಗುವ ದೌರ್ಜನ್ಯ ತಡೆ ಕುರಿತಂತೆ ಕಾರ್ಯಾಗಾರಗಳು ಅತ್ಯಗತ್ಯ. ನಾವು ದಿನನಿತ್ಯ ಬಳಸುವ ಹತಾರುಗಳನ್ನು ಹರಿತವಾಗಿಟ್ಟುಕೊಳ್ಳುವಂತೆ ನಮ್ಮ ಮನಸ್ಸು, ಬುದ್ದಿ ಮತ್ತು ಸಂವೇದನೆಯನ್ನು ಸೂಕ್ಷ್ಮವಾಗಿಟ್ಟುಕೊಳ್ಳುವುದು ಮುಖ್ಯ. ಈ ದಿಸೆಯಲ್ಲಿ ಈ ಸಂವೇದನಾ ಕಾರ್ಯಾಗಾರವು ನೆರವಾಗುತ್ತವೆ.

Udupi_District_Police-1 Udupi_District_Police-2 Udupi_District_Police-3

 

ಸಮಾಜದಲ್ಲಿ ಲೈಂಗಿಕ ವೃತ್ತಿಯ ಬಗ್ಗೆ ಇರುವ ಕಳಂಕದಿಂದಾಗಿ ನಿರ್ಲಕ್ಷಿತರಾಗಿರುವ ಮಹಿಳೆಯರ ಮೇಲಾಗುವ ದೌರ್ಜನ್ಯ ಹೆಣ್ಣು ಮಕ್ಕಳ ಘನತೆಯ ಮೇಲಾಗುವ ದೌರ್ಜನ್ಯವಾಗಿದ್ದು, ಅದನ್ನು ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ ಎಂಬುದಾಗಿ ತಿಳಿಸಿದರು. ಅನೈತಿಕ ಮಾನವ ಸಾಗಾಟ ಕಾಯ್ದೆ ಅನ್ವಯ ಶೋಷಿತ ಲೈಂಗಿಕ ವೃತ್ತಿ ನಿರತ ಮಹಿಳೆಯನ್ನು ನೊಂದ ಮಹಿಳೆಯನ್ನಾಗಿ ನೋಡಲಾಗುತ್ತದೆ. ಅವರನ್ನು ಈ ವೃತ್ತಿಯಲ್ಲಿ ತೊಡಗಿಸಿ,ಸಂಪಾದನೆಯನ್ನು ಮಾಡುವ ವ್ಯಕ್ತಿ ಅಥವಾ ವ್ಯವಸ್ಥಿತ ಜಾಲವನ್ನು ಆರೋಪಿಗಳನ್ನಾಗಿ ಪರಿಗಣಿಸಬೇಕು ಎಂಬುದಾಗಿ ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನದ ಪ್ರತಿಪಾದನೆ ವಿಭಾಗದ ನಿರ್ದೇಶಕ ಅಶೋಕಾನಂದ,  ಲೈಂಗಿಕ ವೃತ್ತಿ ಮತ್ತು ವೃತ್ತಿ ನಿರತ ಮಹಿಳೆಯರ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡಿದರು. ಕಳಂಕ ಮತ್ತು ತಾರತಮ್ಯಕ್ಕೆ ಒಳಗಾಗಿರುವ ಲೈಂಗಿಕ ವೃತ್ತಿಯನ್ನು ನಿಯಂತ್ರಿಸಬಹುದೇ ಹೊರತು, ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಲೈಂಗಿಕ ವೃತ್ತಿಗೆ ತನ್ನನ್ನು ತೊಡಗಿಸಿಕೊಳ್ಳುವ ಮಹಿಳೆ ಬಡತನ, ಶೋಷಣೆ, ವಂಚನೆ, ಹಿಂಸೆ ಮತ್ತು ಮಾನವ ಕಳ್ಳ ಸಾಗಾಟಗಳಿಗೆ ಬಲಿಯಾಗಿ ಬರುತ್ತಾಳೆ. ವೃತ್ತಿಗೆ ಬಂದ ನಂತರವೂ ಆರ್ಥಿಕವಾಗಿ ನಿರಂತರ ಶೋಷಣೆಗೆ ಒಳಗಾಗುತ್ತಾಳೆ. ಗಿರಾಕಿ, ಗೂಂಡಾ,ಕುಟುಂಬ,ಸಂಗಾತಿ ಮೊದಲಾದವರಿಂದ ದೈಹಿಕವಾಗಿ ಹಿಂಸೆಗೆ ಮತ್ತು ಶೋಷಣೆಗೆ ಒಳಗಾಗುತ್ತಾಳೆ. ಕಳಂಕ ಮತ್ತು ತಾರತಮ್ಯಕ್ಕೆ ಗುರಿಯಾದ ಅವಳ ಮತ್ತು ಅವಳ ಮಕ್ಕಳ ಬದುಕು ನಿರ್ಲಕ್ಷ್ಯಕ್ಕೆ ತುತ್ತಾಗುತ್ತದೆ. ಈ ಅಂಶಗಳನ್ನು ಗಮನಿಸಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ದಿಗೆ ವ್ಯವಸ್ಥೆ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜ ಮಾನವೀಯವಾಗಿ ಸ್ಪಂದಿಸಬೇಕಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಉಡುಪಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗಳು ಜಂಟಿಯಾಗಿ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನಾರ್ಹ ಎಂಬುದಾಗಿ ತಿಳಿಸಿದರು.

ನಂತರ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ನಿಖಿಲ್ ಶೆಟ್ಟಿ, ಕೆಹೆಚ್‌ಪಿಟಿ ಯ ಉಪನಿರ್ದೇಶಕರುಗಳಾದ ಕೆ.ವಿ.ಬಾಲಸುಬ್ರಹ್ಮಣ್ಯ, ಶ್ರೀಮತಿ ಸುನಿತಾ, ಎನ್‌ಎಲ್‌ಎಸ್‌ಐಯು ನ ಸೆಂಟರ್‌ ಫಾರ್‌ ವಿಮೆನ್‌ ಅಂಡ್‌ ಲಾ ಇದರ ಸಂಶೋಧಕಿ ಮತ್ತು ವಕೀಲೆ ಶ್ರೀಮತಿ ಸುಮಿತ್ರಾ  ಆಚಾರ್ಯರವರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಧಿವೇಶನಗಳನ್ನು ನಡೆಸಿಕೊಟ್ಟರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ ಸ್ವಾಗತಿಸಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್‌ ಕುಮಾರ್‌  ವಂದಿಸಿದರು.

Write A Comment