ಉಡುಪಿ: ತಾಲೂಕಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜಕಾರ್ಯ ವಿಭಾಗದ ವತಿಯಿಂದ ರಾಜ್ಯಮಟ್ಟದ ಬುಡಕಟ್ಟು ಸಂಸ್ಕೃತಿ ಸಮ್ಮಿಲನ ‘ತೋರಣ-2015’ ಕಾಲೇಜಿನ ತೆರೆದ ರಂಗಮಂದಿರದಲ್ಲಿ ಜರುಗಿತು.
ಸರಕಾರಿ ಕಾಲೇಜೊಂದರಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮವನು ಹಮ್ಮಿಕೊಂಡಿರುವುದು ಎಲ್ಲರಿಗೂ ಮಾದರಿಯಾಗಿತ್ತು, ಕಾರ್ಯಕ್ರಮದಲ್ಲಿ ಹಾಸನ ಅಂಗಡಿಹಳ್ಳಿಯ ಹಕ್ಕಿಪಿಕ್ಕಿ ಸಮುದಾಯ, ಕುಂದಾಪುರದ ಕೊರಗ ಸಮುದಾಯ, ಉತ್ತರಕನ್ನಡ ಜಿಲ್ಲೆಯ ಸಿದ್ಧಿ ಸಮುದಾಯ, ಯಲ್ಲಾಪುದ ಗೌಳಿ ಸಮುದಾಯ ಹಾಗೂ ಸಾಗರದ ಹಸಲರು ಸಮುದಾಯದವರು ಭಾಗವಹಿಸಿದ್ದರು. ತಮ್ಮ ಸಮುದಾಯ ಬೆಳೆದು ಬಂದ ಹಾದಿ, ವಿಶಿಷ್ಟತೆಗಳು, ಆಚರಣೆಗಳನ್ನು ಪರಿಚಯಿಸುವ ಜೊತೆಗೆ ತಮ್ಮ ಸಮುದಾಯದ ಸಾಂಸ್ಕ್ರತಿಕ ಚಟುವಟಿಕೆಗಳನ್ನು ಅನಾವರಣಗೊಳಿಸಿದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬುಡಕಟ್ಟು ಜನಾಂಗವನ್ನು ಶಿಕ್ಷಣ ಹಾಗೂ ಇನ್ನಿತರ ಸೌಲಭ್ಯದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವುದಲ್ಲದೇ ಅವರ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ವಸಂತರಾಜ ಶೆಟ್ಟಿ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಸಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಎನ್.ಎಸ್.ಎಸ್. ಕೋಶದ ಸಂಪರ್ಕಾಧಿಕಾರಿ ಡಾ| ಗಣನಾಥ ಎಕ್ಕಾರು, ಡಾ| ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ಸಿ, ಸೂರ್ತಿಧಾಮದ ಕಾರ್ಯನಿರ್ವಹಣಾಧಿಕಾರಿ ಡಾ| ಕೇಶವ ಕೋಟೇಶ್ವರ, ಭದ್ರಾವತಿಯ ಸರ್. ಎಂ.ವಿ. ಸರಕಾರಿ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ| ಸಬಿತಾ ಬನ್ನಾಡಿ, ಹೊನ್ನಾವರ ಸ.ಪ್ರ.ದ. ಕಾಲೇಜಿನ ಪ್ರಾಧ್ಯಾಪಕ ರಾಜೇಂದ್ರ ಕೆ, ಅಕ್ಷರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವಿ. ಗಣೇಶ್ ಉಪಸ್ಥಿತರಿದ್ದು ಶುಭ ಹಾರೈಸಿದರು.