ಮಂಗಳೂರು,ಮಾರ್ಚ್.19 : ಮರಳು ಸಾಗಾಟದ ಲಾರಿಯಡಿ ಸಿಲುಕಿದ ಸೈಕಲ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬುಧವಾರ ಪಡೀಲ್ ಓವರ್ ಬ್ರಿಡ್ಜ್ ಬಳಿ ನಡೆದಿದೆ. ಮೃತ ದುರ್ದೈವಿಯನ್ನು ಬಜಾಲ್ ನಿವಾಸಿ ಬಸವ ರಾಜ್(50) ಎಂದು ಗುರುತಿಸಲಾಗಿದೆ. ಜೆಪ್ಪಿನಮೊಗರು ಖಾಸಗಿ ಶಾಲೆಯೊಂದರ ವಾಚ್‍ಮೆನ್ ಆಗಿ ಕಾರ್ಯನಿರ್ವಹಿಸುತ್ತಿ ದ್ದ ಬಸವರಾಜ್, ನಿನ್ನೆ ಬಜಾಲ್‍ನ ತನ್ನ ಮನೆಗೆ ಹೋಗುವ ಸಂದರ್ಭ ಈ ದುರಂತ ಸಂಭವಿಸಿದೆ.
ಪಾಣೆ ಮಂಗಳೂರಿನಿಂದ ಮರಳು ತುಂಬಿಸಿಕೊಂಡು ಅತ್ಯಂತ ವೇಗವಾಗಿ ಬರುತ್ತಿದ್ದ ಮರಳು ಸಾಗಾಟದ ಲಾರಿ, ಚಾಲಕನ ನಿಯಂತ್ರಣಕ್ಕೆ ಸಿಗದೆ, ಪಡೀಲ್ ಓವರ್ ಬ್ರಿಡ್ಜ್ ಬಳಿ ಸೈಕಲ್ ಸವಾರ ಬಸವರಾಜ್‍ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಸೈಕಲ್ ಮಾರು ದೂರ ಹೋಗಿ ಬಿದ್ದಿದ್ದರೆ, ಹಿಂಬದಿಯ ಚಕ್ರದಡಿ ಸಿಲುಕಿದ ಬಸವರಾಜ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. ಈ ಭಾಗದಲ್ಲಿ ಅಕ್ರಮ ಮರಳು ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವೇಗವಾಗಿ ಕಾನೂನನ್ನು ಗಾಳಿಗೆ ತೂರಿ ಸಾಗುತ್ತಿದ್ದಾರೆ ಎಂದು ಸಾರ್ವಜನಿಕರು ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಘಟನಾ ಸ್ಥಳ ಪರಿಶೀಲಿಸಿದ ಕಂಕನಾಡಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.