ಕೊಣಾಜೆ: ಮುಡಿಪು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರವಾಸ ಕುರಿತಾಗಿ ಭುಗಿಲೆದ್ದ ವಿವಾದ ಬಜರಂಗದಳದ ಕಾರ್ಯಕರ್ತರ ದಾಂಧಲೆಯ ಸಮಯವನ್ನು ಬಳಸಿಕೊಂಡು ಮುಡಿಪು ಸಮೀಪದ ಸಂಬಾರ್‌ತೋಟ ಮಸೀದಿಗೆ ಕಲ್ಲು ಎಸೆದು ಹಾನಿ ಮಾಡಿ ಪರಿಸರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಕಾರು ಚಾಲಕ ಮಂಚಿ ನಿವಾಸಿ ವಿಜೇತ(20)ನನ್ನು ಕೊಣಾಜೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ಅದಾಗಲೇ ನ್ಯಾಯಾಂಗ ಬಂಧನಕ್ಕೊಳಗಾದ ಇತರ ಆರೋಪಿಗಳಾದ ರಮೇಶ್, ತಿಲಕ್, ಹರಿಪ್ರಸಾದ್, ಪ್ರವೀಣ್, ದಿನೇಶ್ ಹಾಗೂ ವಿವೇಕಾನಂದನ ಜತೆಯಲ್ಲಿ ಆತ್ಮೀಯನಾಗಿದ್ದ. ಶನಿವಾರ ಮುಡಿಪುವಿನಲ್ಲಿ ಬಜರಂಗದಳದ ಕಾರ್ಯಕರ್ತರು ಸೇರಿರುವ ಬಗ್ಗೆ ಮಾಹಿತಿ ಪಡೆದು ಸಂಬಾರ್‌ತೋಟದ ಮಸೀದಿಯ ಮುಂಭಾಗದಲ್ಲಿ ಕಾರು ನಿಲ್ಲಿಸಿ ಮಸೀದಿಗೆ ಕಲ್ಲುತೂರಾಟ ಮಾಡಿದ್ದರು.
ಘಟನೆಯ ಮರುದಿನ ಬಂಧಿತರಾದ ಮೂವರು ಆರೋಪಿಗಳನ್ನು ತನಿಖೆ ನಡೆಸಿದ ಸಂದರ್ಭ ವಿಜೇತ ಎಂಬಾತ ಪೂರ್ವ ತಯಾರಿ ನಡೆಸಿ ನಾಲ್ವರ ಜತೆ ಕಾರಿನಲ್ಲಿ ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕೊಣಾಜೆ ಇನ್ಸ್‌ಪೆಕ್ಟರ್ ರಾಘವ ಎಸ್. ಪಡೀಲ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಮಂಚಿಯಲ್ಲಿ ಕಾರು ಚಾಲಕ ವಿಜೇತನನ್ನು ಬಂಧಿಸಿದ್ದಾರೆ. ಆರೋಪಿ ವಿಜೇತನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.