ಮಂಗಳೂರು,ಮಾರ್ಚ್.18 : 2007 ರಲ್ಲಿ ಉಳ್ಳಾಲ ಮುಕ್ಕಚ್ಚೇರಿಯಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಬಂಧಿತರಾದ ಇಬ್ಬರು ಶಂಕಿತ ಉಗ್ರರನ್ನು ಮುಂಬೈ ಪೊಲೀಸರು ಬುಧವಾರ ನಗರದ ನ್ಯಾಯಾಲಯಕ್ಕೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.
ಶಂಕಿತ ಉಗ್ರರಾದ ಸೈಯ್ಯದ್ ಮೊಹಮ್ಮದ್ ನೌಷಾದ್,(25) ಅಹ್ಮದ್ ಬಾವಾ ಅಬೂಬಕ್ಕರ್ (28) ಇವರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಮೊಹಮ್ಮದ್ ಅಲಿ, ಜಾವೇದ್ ಅಲಿ, ಮೊಹಮ್ಮದ್ ರಫಿಕ್, ಫಕೀರ್ ಅಹ್ಮದ್ ಮತ್ತು ಶಬೀರ್ ಭಟ್ಕಳ್ ಅವರನ್ನೂ ಬಂಧಿಸಲಾಗಿದ್ದು ಅವರನ್ನೂ ಮಂಗಳೂರಿಗೆ ಕರೆತಂದು ಕೋರ್ಟ್ ಗೆ ಹಾಜರು ಪಡಿಸಲಾಯಿತು.
ಇಂಡಿಯನ್ ಮುಜಾಯಿದ್ ಉಗ್ರ ಸಂಘಟನೆಯ ಜೊತೆ ಸಂಪರ್ಕವಿಟ್ಟುಕೊಂಡು ಕೆಲವು ಜನ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆನ್ನುವ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ 13 ಮಂದಿ ಆರೋಪಿಗಳಾಗಿದ್ದು ಈ ಪೈಕಿ ಶಬೀರ್ ಭಟ್ಕಳ್ ಮಾತ್ರ ಮಂಗಳೂರು ಜೈಲಿನಲ್ಲಿದ್ದ, ಉಳಿದ ನಾಲ್ಕು ಮಂದಿ ಜಾಮೀನು ಪಡೆದು ಹೊರಗಿದ್ದರು. ಒಬ್ಬ ಗುಜರಾತ್ ಜೈಲಿನಲ್ಲಿದ್ದು ಇನ್ನು ಐದು ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.







