ಮಂಗಳೂರು,ಮಾರ್ಚ್.18: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಕೆಪಿಆರ್ ಇನ್‌ಫ್ರಾಟೆಕ್ ಲಿ. ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಹೊಸ ಟೆಂಡರ್ ಕರೆಯಲು ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ. ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರಿಂದ ತನಿಖೆಗೆ ಭಾರಿ ಒತ್ತಡ ಬಂದ ಬಳಿಕ ಈ ನಿರ್ಣಯಕ್ಕೆ ಬರಲಾಯಿತು.
ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ವಿಷಯ ಪ್ರಸ್ತಾಪಿಸಿ, ಕಾಮಗಾರಿ ಆರಂಭಗೊಂಡರೂ ಇನ್ನೂ ಮುಗಿಸಿಲ್ಲ. ಇದರ ಹಿಂದೆ ಅವ್ಯವಹಾರದ ಸಂಶಯ ಇದೆ ಎಂದಾಗ, ಚೆನ್ನಪ್ಪ ಕೋಟ್ಯಾನ್, ಮಮತಾ ಗಟ್ಟಿ, ಎಂ.ಎಸ್.ಮುಹಮ್ಮದ್ ಮತ್ತಿತರರು ಬೆಂಬಲಿಸಿ, ಲೋಕಾಯುಕ್ತ ತನಿಖೆಗೆ ಒಪ್ಪಿಸಲು ನಿರ್ಣಯ ಕೈಗೊಳ್ಳುವಂತೆ ಪಟ್ಟು ಹಿಡಿದರು.
ಕಾಮಗಾರಿ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ತಾಲೂಕು ಮಟ್ಟದ ಪ್ರಗತಿ ವರದಿ ತರಿಸೋಣ. ಈ ಕುರಿತು ಜಿಲ್ಲಾಮಟ್ಟದಲ್ಲಿ ಸಿಇಒ ನೇತೃತ್ವದಲ್ಲಿ ತನಿಖೆ ನಡೆಸೋಣ ಎಂದು ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದಾಗ, ಸಭೆ ನಡೆದು ಒಂದು ತಿಂಗಳಾದರೂ ನಿಮಗೆ ಪ್ರಗತಿ ವರದಿ ತರಿಸಲು ಸಾಧ್ಯ ಆಗದಿರುವುದು ದುರಂತ. ಮೊನ್ನೆಯಷ್ಟೇ ಬಂದ ಸಿಇಒ ಅವರನ್ನು ಇದರಲ್ಲಿ ಸಿಲುಕಿವುದು ಬೇಡ ಎಂದು ಫಕೀರ ಎಂ., ಜನಾರ್ದನ ಗೌಡ ಹೇಳಿದರು.
ಸಂಬಂಧಪಟ್ಟ ಅಧಿಕಾರಿಯಿಂದ ಯೋಜನೆಯ ಎಲ್ಲ ಮಾಹಿತಿ ಪಡೆಯೋಣ. ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಸದ ಕಾರಣ ಗುತ್ತಿಗೆದಾರ ಕಂಪನಿ ವಿರುದ್ಧ ಕ್ರಮಕ್ಕೆ ಸರಕಾರಕ್ಕೆ ಮನವಿ ಮಾಡೋಣ ಹಾಗೂ ಜಿಲ್ಲಾಮಟ್ಟದಲ್ಲಿ ಈ ಬಗ್ಗೆ ತನಿಖೆ ಮಾಡಬಹುದು ಎಂದು ಸಿಇಒ ಪಿ.ಐ.ಶ್ರೀವಿದ್ಯಾ ಸಲಹೆ ನೀಡಿದರು.
ಎಂಜಿನಿಯರ್‌ಗಳಿಂದ ದಾಖಲೆ ತರಿಸಿಕೊಂಡ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, 2013ರ ಜೂ.24ರಂದು ಕಾಮಗಾರಿ ಕೈಗೆತ್ತಿಕೊಂಡಿದ್ದು, 2014ರ ಸೆ.17ರಂದು ಮುಗಿಸಲು ಒಪ್ಪಂದ ಆಗಿತ್ತು. ಆದರೆ, ನಿಗದಿ ಅವಧಿಯಲ್ಲಿ ಮುಗಿಸಿಲ್ಲ. ಆದ್ದರಿಂದ ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯಿಸುವ ಅಧಿಕಾರ ನಮಗಿದೆ. ಯೋಜನೆ ಮರು ಟೆಂಡರು ನಡೆಸಬೇಕು. ಅದನ್ನು ಜಿಲ್ಲೆಯಲ್ಲೂ ಕರೆಯಬೇಕು ಎಂದು ಹೇಳಿ, ನಿರ್ಣಯ ಕೈಗೊಳ್ಳಲಾಯಿತು.
ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಖರ್ಚು, ದೊಡ್ಡ ಗಾತ್ರ ಹಾಗೂ ವಿಸ್ತರಣೆ ಮಾಡಿರುವ ಮನೆಗಳನ್ನು ತಿರಸ್ಕಾರ ಮಾಡಲಾಗಿದೆ ಎಂದು ಯೋಜನಾಧಿಕಾರಿ ಲೋಕೇಶ್ ಮಾಹಿತಿ ನೀಡಿದರು. ಸಮಸ್ಯೆ ಬಗೆಹರಿಸುವಲ್ಲಿ ಆಡಳಿತ ಹಾಗೂ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ. ಆದಷ್ಟು ಬೇಗ ಸಮಸ್ಯೆ ಪರಿಹರಿಸಿ ಎಂದು ದೇವರಾಜ್ ಆಗ್ರಹಿಸಿದರು. ಶ್ರೀಮಂತರ ದೊಡ್ಡ ಮನೆ ಬಗ್ಗೆ ಏನೂ ಮಾಡಲಾಗದು. ಐದು ಲಕ್ಷ ರೂ. ಮಿತಿಯೊಳಗೆ 700 ಚದರ ಅಡಿ ತನಕ ನಿರ್ಮಿಸಿದ ಬಡವರ ಮನೆಗಳಿದ್ದಲ್ಲಿ ಅದನ್ನು ಪರಿಗಣಿಸಲು ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ರಾಜೀವ ಗಾಂಧಿ ವಿದ್ಯುದೀಕರಣ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿಲ್ಲ ಎಂದು ಕೊರಗಪ್ಪ ನಾಯ್ಕ್ ಗಮನ ಸೆಳೆದರು. ಜಿಲ್ಲೆಯ 7726 ಫಲಾನುಭವಿಗಳ ಪೈಕಿ, 6648 ಬಿಪಿಎಲ್‌ನವರಿದ್ದರು. ಬಂಟ್ವಾಳ ಮತ್ತು ಬೆಳ್ತಂಗಡಿ ಗ್ರಾಮದ 1272 ಮನೆಗಳಲ್ಲಿ ಮಾತ್ರ ಸಂಪರ್ಕ ಕಲ್ಪಿಸಲು ಬಾಕಿ ಇದೆ. ಅದನ್ನು ಮಾರ್ಚ್ ಅಂತ್ಯಕ್ಕೆ ಮುಗಿಸುತ್ತೇವೆ. 2914ಕ್ಕಿಂತ ಮೊದಲು ಬಿಪಿಎಲ್ ಕಾರ್ಡ್ ಹೊಂದಿದವರು ಬಿಟ್ಟು ಹೋಗಿದ್ದಲ್ಲಿ ಅದನ್ನು ಪರಿಗಣಿಸಲಾಗುವುದು. ಎರಡನೇ ಹಂತದಲ್ಲಿ ದೀನ್ ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಯೋಜನೆ ಜಾರಿಗೆ ಬರುತ್ತಿದೆ ಎಂದು ಮೆಸ್ಕಾಂ ಅಧಿಕಾರಿ ಉತ್ತರಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರ ಕೊರತೆ ಕುರಿತ ಪ್ರಶ್ನೆಗೆ ಉತ್ತರಿಸಿದ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಏ.10ರೊಳಗೆ ಪಟ್ಟಿ ತರಿಸಿ, ಅನುಪಾತದಂತೆ ಹಂಚಿಕೆ ಮಾಡುತ್ತೇವೆ. ಪ್ರಾಥಮಿಕ ಶಾಲೆ ಶಿಕ್ಷಕರನ್ನು ಕೆಲವೆಡೆ ಬಡ್ತಿ ಮಾಡಲಾಗುತ್ತಿದೆ ಎಂದರು. ನಗರದಲ್ಲಿ ಬೀಡು ಬಿಟ್ಟಿರುವ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಕ್ಕೆ ಕಳುಹಿಸಿ ಎಂದು ಅಧ್ಯಕ್ಷರು ಸೂಚಿಸಿದರು.
ಸಂತಾಪ: ನಿಗೂಢವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರಿಗೆ ಶ್ರದ್ದಾಂಜಲಿ ಅರ್ಪಿಸಿದ ಜಿಲ್ಲಾ ಪಂಚಾಯಿತಿ, ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಿತು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಚಂದ್ರಕಲಾ, ಮೀನಾಕ್ಷಿ ಮಂಜುನಾಥ್, ಬಾಲಕೃಷ್ಣ ಸುವರ್ಣ ಉಪಸ್ಥಿತರಿದ್ದರು.