ಕನ್ನಡ ವಾರ್ತೆಗಳು

ರಸ್ತೆ ಸುರಕ್ಷತೆ ಕಾಮಗಾರಿ ಶೀಘ್ರ ಅನುಷ್ಠಾನ – ದ.ಕ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ.

Pinterest LinkedIn Tumblr

dc_offce_meet_1

ಮಂಗಳೂರು,ಮಾರ್ಚ್.18  : ರಸ್ತೆ ಸುರಕ್ಷತಾ ದೃಷ್ಟಿಯಿಂದ ಕೈಗೊಳ್ಳಬೇಕಾದ ಕೆಲವೊಂದು ಕಾಮಗಾರಿಗಳನ್ನು ಹಾಗೂ ನಿಯಮಗಳನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಖಾಸಗಿ ಬಸ್ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಈ ಬಗ್ಗೆ ಆರ್‌ಟಿಒ ಅಧಿಕಾರಿಗಳು ತಕ್ಷಣ ಎಲ್ಲ ಬಸ್‌ಗಳನ್ನು ತಪಾಸಣೆ ನಡೆಸಬೇಕು. ಸಿಟಿ ಬಸ್‌ಗಳಲ್ಲಿ ಡೋರ್ ಅಳವಡಿಸುವ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ಅಪಘಾತ ನಡೆದರೆ ಬಸ್ ಬಾಗಿಲಿನಲ್ಲಿರುವ ಪ್ರಯಾಣಿಕರ ಜೀವಕ್ಕೆ ಹಾನಿಯಾಗುತ್ತಿದೆ. ತಕ್ಷಣ ಈ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದರು.

ಕೆಲವೆಡೆಗಳಲ್ಲಿ ಕಾರು ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕಾನೂನು ಪಾಲನೆಯಾಗುತ್ತಿಲ್ಲ. ಅಲ್ಲದೆ ಬಸ್ ಚಾಲಕರಿಗೂ ಸೀಟ್ ಬೆಲ್ಟ್ ಅಳವಡಿಸುವಂತೆ ಸೂಚನೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನೂಯಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಸೀಟ್ ಬೆಲ್ಟ್ ಅಳವಡಿಸಬೇಕು ಎಂಬ ಕಾನೂನು ಇದೆ. ಇದನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕಟ್ಟು ನಿಟ್ಟಾಗಿ ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.

dc_offce_meet_2

ಸಾಮಾಜಿಕ ಕಾರ್ಯಕರ್ತ ಹಸನಬ್ಬ ಮಾತನಾಡಿ, ಬಸ್‌ಗಳ ಮೆಟ್ಟಿಲುಗಳು ಎತ್ತರವಾಗಿರುವುದರಿಂದ ವಯೋವೃದ್ಧರಿಗೆ ಹತ್ತಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಹಂಪ್ಸ್ ಅಳವಡಿಸುವಂತೆ ನೀಡಿದ ಪ್ರಸ್ತಾವನೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಪಾಲಿಗೆಯ ಅಧಿಕಾರಿಗಳಲ್ಲಿ ಪ್ರಗತಿಯ ವಿವರ ಕೇಳಿದರು. ಪೊಲೀಸ್ ಇಲಾಖೆ ಸೂಚಿಸಿದ ನಗರದ 31 ಪ್ರಮುಖ ಕಡೆಗಳಲ್ಲಿ ೀಗಾಗಲೇ ಹಂಪ್ಸ್ ಅಳವಡಿಸಿ ಅದಕ್ಕೆ ಪೈಂಟ್ ಬಳಿಯಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ನಗರದ ಪ್ರಮುಖ 18 ಕಡೆಗಳಲ್ಲಿ ವೃತ್ತ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಪರಿಷತ್ ಅನುಮೋದನೆ ಪಡೆಯಲಾಗಿದೆ. ಈ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಬಸ್ ಬೇ ನಿರ್ಮಾಣ ಬಗ್ಗೆ ಹಲವು ಬಾರಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಪಾಲಿಕೆ ವತಿಯಿಂದ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಪಂಪ್‌ವೆಲ್ ವೃತ್ತದ ನಾಲ್ಕು ಕಡೆಗಳಲ್ಲಿ ಶೀಘ್ರದಲ್ಲಿ ಹಂಪ್ಸ್ ಅಳವಡಿಸುವಂತೆ ಜಿಲ್ಲಾಧಿಕಾರಿ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವೃತ್ತ ಸರಿಪಡಿಸುವ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದರು.

ಆರ್‌ಟಿಒ ಅಫ್ಜಲ್ ಅಹಮ್ಮದ್ ಖಾನ್ ಸಮಿತಿ ಸಭೆಯಲ್ಲಿ ಕೈಗೊಂಡ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದರು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತೆ ಹೆಪ್ಸಿಬಾ ರಾಣಿ, ಪೊಲೀಸ್ ಡಿಸಿಪಿಗಳಾದ ಸಂತೋಷ್ ಬಾಬು, ವಿಷ್ಣುವರ್ಧನ, ಎಸಿಪಿ ಉದಯ್ ನಾಯಕ್ ಸಭೆಯಲ್ಲಿ ಭಾಗವಹಿಸಿದ್ದರು.

Write A Comment