ಕನ್ನಡ ವಾರ್ತೆಗಳು

ಮದವೇರಿದ ಗಜೇಂದ್ರನ ಆರ್ಭಟಕ್ಕೆ ಆನೆ ಶ್ರೀರಾಮ ಬಲಿ.

Pinterest LinkedIn Tumblr

Indian_Elephant_fight

ಕೊಳ್ಳೆಗಾಲ,ಮಾರ್ಚ್.16 : ದಸರಾ ಆನೆ ಗಜೇಂದ್ರನ ಪುಂಡಾಟಕ್ಕೆ 61 ವರ್ಷದ ಶ್ರೀರಾಮ ಎಂಬ ಆನೆ ಬಲಿಯಾಗಿರುವ ಘಟನೆ ಸೋಮವಾರ ಬೆಳಗ್ಗೆ ಬಿಳಿಗಿರಿರಂಗನ ಬೆಟ್ಟದ ಬಳಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಸಂರಕ್ಷಿತ ಅರಣ್ಯ ಪ್ರದೇಶವಾದ ಕೆ.ಗುಡಿಯಾ ಬಳಿ ಸಾಕಾನೆಗಳ ನಡುವೆ ಕಾದಾಟ ನಡೆದಿದೆ. ಗಜೇಂದ್ರ ಆನೆ ಶ್ರೀರಾಮ ಆನೆಯನ್ನು ದಂತದಿಂದ ತಿವಿದಿತ್ತು.

ಘಟನೆಯಲ್ಲಿ ಎರಡು ಆನೆಗಳೂ ಗಾಯಗೊಂಡಿದ್ದು, ಕಳೆದ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಶ್ರೀರಾಮ ಆನೆ ಗಂಭೀರವಾಗಿ ಗಾಯಗೊಂಡಿದ್ದ ಪರಿಣಾಮ ಇಂದು ಬೆಳಿಗ್ಗೆ ಮೃತಪಟ್ಟಿದೆ.ಈ ಪ್ರದೇಶದಲ್ಲಿ ಕೆಲವು ಸಾಕಿದ ಆನೆಗಳನ್ನು ಅರಣ್ಯ ಸಿಬ್ಬಂದಿ ಕರೆತಂದು ಸೆರೆ ಹಿಡಿದ ಕಾಡಾನೆಗಳನ್ನು ಪಳಗಿಸುವ ಕೆಲಸ ಮಾಡುತ್ತಾರೆ. ನಿನ್ನೆ ಇದೇ ರೀತಿ ಕೆಲವು ಆನೆಗಳನ್ನು ಇಲ್ಲಿಗೆ ತರಲಾಗಿತ್ತು.

ತಡರಾತ್ರಿ ಗಜೇಂದ್ರ ಮತ್ತು ಶ್ರೀರಾಮ ಆನೆಗಳ ನಡುವೆ ಕಾದಾಟ ಶುರುವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಸಿಬ್ಬಂದಿಗಳು ಅದನ್ನು ತಡೆಯಲು ಮುಂದಾದರೂ ಸಹ ಸಾಧ್ಯವಾಗಲಿಲ್ಲ.ಸರಪಳಿ ಬಿಚ್ಚಿಕೊಂಡು ಕಾಡಾನೆಗಳ ಜತೆ ಸೇರಿದ ಗಜೇಂದ್ರ, ಕಾಡಿನಲ್ಲಿ ಸೋಲಿಗರ ಹಾಡಿಗಳಿಗೆ ನುಗ್ಗಿದೆ. ಆನೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಐದು ತಂಡಗಳಿಂದ ಹರಸಾಹಸ ಪಡಲಾಗುತ್ತಿದೆ. ಮನೆ ಬಿಟ್ಟು ಹೊರ ಬರದಂತೆ ಅಲ್ಲಿನ ಗಿರಿಜನರಿಗೆ ಅರಣ್ಯ ಅಧಿಕಾರಿಗಳು ತಿಳಿಸಿದ್ದು, ಅರಣ್ಯ ಪ್ರವೇಶದ ವೇಳೆ ಬೈಕ್ ನಲ್ಲಿ ಬರದಂತೆ ಸೂಚಿಸಿದ್ದಾರೆ.

Write A Comment