ಕನ್ನಡ ವಾರ್ತೆಗಳು

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ :ಶಂಕಿತ ಆರೋಪಿ ವಿರುದ್ಧ ಪೊಸ್ಕೊ ಕಾಯಿದೆ ಅಡಿ ಪ್ರಕರಣ ದಾಖಲು

Pinterest LinkedIn Tumblr

Thokkottu_baby_crime_1

ಉಳ್ಳಾಲ: ತೊಕ್ಕೊಟ್ಟಿನ ಖಾಸಗಿ ಆಂಗ್ಲಮಾಧ್ಯಮ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಧುಕರ ಶೆಟ್ಟಿ ಎಂಬಾತನನ್ನು ಪೊಸ್ಕೊ ಕಾಯಿದೆ ಅಡಿ ಪೊಲೀಸರು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಕೃತ್ಯದ ಬಗ್ಗೆ ಶನಿವಾರ ಆಸ್ಪತ್ರೆ ವರದಿ ಲಭ್ಯವಾಗಿದ್ದು , ವರದಿಯ ಆಧಾರದಲ್ಲಿ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಸೆಕ್ಸ್ವಲ್ ಒಫೆನ್ಸಸ್ ‘ಪೋಸ್ಕೋ’ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿ ಶಿಕ್ಷಣ ಪಡೆಯುತ್ತಿದ್ದ ಶಾಲೆಯ ವಾಹನ ಚಾಲಕನಾಗಿದ್ದ ಮಧುಕರ ಶೆಟ್ಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಶುಕ್ರವಾರ ತಂಡವೊಂದು ಶಾಲೆಗೆ ನುಗ್ಗಿ ಪ್ರತಿಭಟನೆ ನಡೆಸಿತ್ತು. ವಿದ್ಯಾರ್ಥಿನಿ ತನ್ನ ತಾಯಿಯಲ್ಲಿ ವಿಚಾರ ತಿಳಿಸಿದ್ದು, ಆ ಬಗ್ಗೆ ತನಿಖೆ ನಡೆಸಿದಾಗ ಬಸ್ ಚಾಲಕನ ಕೃತ್ಯ ಬೆಳಕಿಗೆ ಬಂದಿತ್ತು.

ಲೈಂಗಿಕ ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿಯನ್ನು ತೊಕ್ಕೊಟ್ಟುನ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಮಾಹಿತಿ ಪಡೆದ ಜನರು ಆಸ್ಪತ್ರೆ ಕಡೆ ಜಮಾಯಿಸಿ ಪ್ರತಿಭಟನೆ ನಡೆಸಿದಲ್ಲದೇ ಆರೋಪಿಯ ಬಂಧನಕ್ಕಾಗಿ ಒತ್ತಾಯಿಸಿದರು. ಆ ಸಂದರ್ಭ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಲಘು ಲಾಠಿಪ್ರಹಾರ ಮಾಡಿದಾಗ ಆಕ್ರೋಶಗೊಂಡ ಜನತೆ ಬಸ್‌ಗೆ ಮತ್ತು ಹೊಟೇಲ್‌ಗೆ ಕಲ್ಲುತೂರಾಟ ನಡೆಸಿದ್ದರು.

ಕಿರುಕುಳದ ವಿಷಯ ತಿಳಿದ ಉದ್ರಿಕ್ತ ಗುಂಪು ಆರೋಪಿ ಕರ್ಥವ್ಯ ನಿರ್ವಹಿಸುತ್ತಿದ್ದ ಶಾಲೆಗೆ ತೆರಳಿ ಹಿಗ್ಗಾಮುಗ್ಗ ಥಳಿಸಿತ್ತು. ತಕ್ಷಣ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಬಂಧನದ ಬಳಿಕವೂ ಗಲಾಟೆ ಮುಂದುವರಿದಿತ್ತು. ಘಟನೆಗೆ ಸಂಬಂಧಿಸಿ ಹೆಚ್ಚುವರಿ ತನಿಖೆಗಾಗಿ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದರು.

ಕಲ್ಲುತೂರಾಟ ಮಾಡಿ ಗಲಾಟೆಗೆ ಆಸ್ಪದ ನೀಡಿದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಉಳ್ಳಾಲ ಉರೂಸ್ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಹದಗೆಡುವುದನ್ನು ತಪ್ಪಿಸಲು ಉಳ್ಳಾಲದಾದ್ಯಂತ ಪೊಲೀಸ್ ಭದ್ರತೆ ಮುಂದುವರಿದಿದೆ. ರಾತ್ರಿ ವೇಳೆ ರಸ್ತೆ ಬದಿ ಗುಂಪಾಗಿ ಜನ ಸೇರುವುದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿ ಕಾನೂನು ಮೀರಿ ನಡೆದವರ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ:

ತೊಕ್ಕೊಟ್ಟಿನ ಪ್ರತಿಷ್ಠಿತ ಶಾಲೆಯ ಮೂರೂವರೆ ವರುಷದ ಎಲ್‌ಕೆಜಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ತೊಕ್ಕೊಟ್ಟಿನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಜಿಲ್ಲಾ ಕಾರ್ಯದರ್ಶಿ ಫಯಾಝ್ ಮಂಜನಾಡಿ, ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ನಬೀಲ್, ಉಳ್ಳಾಲ ವಲಯ ಅಧ್ಯಕ್ಷ ಇರ್ಷಾದ್ ದೇರಳಕಟ್ಟೆ, ಅಸ್ಪಕ್, ಶಾಹುಲ್, ಆವೀಜ್, ಮುಕ್ತಾರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ತನಿಖೆಗೆ ಎಸಿಪಿ ನೇಮಕ: ಖಾದರ್

ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ ಬಳಿಕ ಉಳ್ಳಾಲ ಪರಿಸರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರೊಂದಿಗೆ ಮಾತನಾಡಿರುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಪತ್ರಿಕೆಗೆ ತಿಳಿಸಿದ್ದಾರೆ.

ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಪ್ರಹಾರ ಹಾಗೂ ಶಾಲೆಯಲ್ಲಿನ ದಾಂಧಲೆ, ಬಸ್ಸಿಗೆ ಕಲ್ಲು ತೂರಾಟ ಪ್ರಕರಣಗಳ ತನಿಖೆಗಾಗಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)ರೊಬ್ಬರನ್ನು ನೇಮಕ ಮಾಡುವುದಾಗಿ ಪೊಲೀಸ್ ಆಯುಕ್ತರು ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಸಾರ್ವಜನಿಕರಿಗೆ ಅನ್ಯಾಯವಾಗಿದ್ದಲ್ಲಿ ನೇರವಾಗಿ ಎಸಿಪಿಯವರಿಗೆ ಲಿಖಿತವಾಗಿ ದೂರನ್ನು ಸಲ್ಲಿಸಬಹುದು ಎಂದು ಅವರು ತಿಳಿಸಿರುವುದಾಗಿ ಖಾದರ್ ಹೇಳಿದ್ದಾರೆ.

Write A Comment