ಕನ್ನಡ ವಾರ್ತೆಗಳು

ಆಸ್ಟ್ರೇಲಿಯಾದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರಭಾ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮನ

Pinterest LinkedIn Tumblr

Prabha_dead_Body_1

ಬಂಟ್ವಾಳ, ಮಾ.15: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದುಷ್ಕರ್ಮಿಯಿಂದ ಬರ್ಬರವಾಗಿ ಹತ್ಯೆಯಾದ ಮೈಂಡ್ ಟ್ರೀ ಕನ್ಸಲ್ಟಿಂಗ್ ಸಂಸ್ಥೆಯ ಐಟಿ ಸಲಹೆಗಾರ್ತಿ ಪ್ರಭಾ ಅರುಣ್ ಕುಮಾರ್ ಶೆಟ್ಟಿ ಅವರ ಅಂತ್ಯಸಂಸ್ಕಾರ ಭಾನುವಾರ ಅವರ ಹುಟ್ಟೂರಾದ ಕಲ್ಲಡ್ಕದ ಅಮ್ಟೂರು ಗ್ರಾಮದ ನಂದಗೋಕುಲ ನಿವಾಸದಲ್ಲಿ ನಡೆಸಲಾಯಿತು. ನಿವಾಸದ ಬಲಗಡೆಯ ಪ್ರತ್ಯೇಕ ನಿವೇಶನದಲ್ಲಿ ಮಾವಿನ ಮರದ ಕಟ್ಟಿಗೆಗಳಿಂದ ರಚಿಸಲಾದ ಚಿತೆಗೆ ಪ್ರಭಾ ಅವರ ಪತಿ ಅರುಣ್ ಕುಮಾರ್ ಅಗ್ನಿಸ್ಪರ್ಶ ಮಾಡಿದರು. ಜಿಲ್ಲೆಯ ಸಚಿವರು, ಸಂಸದರು, ಹಲವು ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಗಣ್ಯರು, ಬಂಧುಗಳು, ಸಹಪಾಠಿಗಳು ಸೇರಿದಂತೆ ಸಾವಿರಾರು ಮಂದಿ ನೆರೆದಿದ್ದರು.

Prabha_dead_Body_2 Prabha_dead_Body_3 Prabha_dead_Body_4

ವಿಶೇಷ ವಿಮಾನದಲ್ಲಿ ಮಂಗಳೂರಿಗೆ: ಬೆಂಗಳೂರಿನ ವಿಜಯನಗರ, ಬಾಪೂಜಿ ಲೇಔಟ್ ಬಳಿ ಭಾನುವಾರ ಬೆಳಗ್ಗೆ 6ರಿಂದ 9.30 ತನಕ ಪ್ರಭಾ ಅವರ ಮೃತದೇಹವನ್ನು ಸಾರ್ವಜನಿಕ ವೀಕ್ಷಣೆಗೆ ಇರಿಸಿದ ಬಳಿಕ ವಿಶೇಷ ವಿಮಾನದಲ್ಲಿ ಬಜಪೆ ವಿಮಾನ ನಿಲ್ದಾಣಕ್ಕೆ ತಂದು, ಅಲ್ಲಿಂದ ಆಂಬ್ಯುಲೆನ್ಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕಲ್ಲಡ್ಕ ಸಮೀಪದ ಅಮ್ಟೂರು ನಂದಗೋಕುಲ ನಿವಾಸಕ್ಕೆ ಮಧ್ಯಾಹ್ನ 12.30ಕ್ಕೆ ಕರೆತರಲಾಯಿತು.
ಅಂತಿಮ ದರ್ಶನ: ಪ್ರಭಾ ಮನೆಯವರು, ಕುಟುಂಬಿಕರು, ಹತ್ತಿರದ ಸಂಬಂಧಿಕರು ಅಂತ್ಯ ಸಂಸ್ಕಾರಕ್ಕೆ ಮೊದಲು ನಡೆಸುವ ನಾನಾ ವಿಧಿವಿಧಾನಗಳನ್ನು ನೆರವೇರಿಸಿದರು. ಸಂಜೆ 3.30ಕ್ಕೆ ನಿವಾಸದ ಮುಂಭಾಗ ತಂಪು ಗಾಜಿನ ಪೆಟ್ಟಿಗೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಶಕುಂತಳಾ ಶೆಟ್ಟಿ, ಮೊಯ್ದೀನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ಕೆ. ಪದ್ಮನಾಭ ರೈ, ಸದಸ್ಯರಾದ ದಿನೇಶ್ ಅಮ್ಟೂರು, ಐಡಾ ಸುರೇಶ್, ಪ್ರಮುಖರಾದ ರಾಜೇಶ್ ನಾಕ್ ಉಳಿಪಾಡಿಗುತ್ತು, ಅಜಿತ್ ಕುಮಾರ್ ರೈ ಮಾಲಾಡಿ, ಡಾ. ಕಮಲಾ ಪ್ರಭಾಕರ್ ಭಟ್, ನೋಣಯ್ಯ ಪೂಜಾರಿ, ಪುರುಷೋತ್ತಮ ಗಟ್ಟಿ, ಅಬ್ಬಾಸ್ ಅಲಿ, ಜಿ. ಮಹಮ್ಮದ್ ಹನೀಫ್, ಮೊಗನಾರ್ಡ್ ದೇವಾ ಮಾತಾ ಚರ್ಚ್‌ನ ಧರ್ಮಗುರು ರೆ.ಫಾ. ಮಥಾಯಿಸ್ ಪಿರೇರಾ, ಸಹಾಯಕ ಧರ್ಮ ಗುರು ರೆ.ಫಾ. ಉದಯ್ ಕುಮಾರ್ ಫರ್ನಾಂಡಿಸ್, ಅಮ್ಟೂರು ಸಂತ ಅಂತೋನಿಯರ ಅನುದಾನಿತ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಇನೆಟ್ ಡಿಸೋಜ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.

ಸಂಬಂಧಿಕರು, ಸಹಪಾಠಿಗಳು, ಸ್ನೇಹಿತರು, ನೆರೆಕರೆ ನಿವಾಸಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬಂಟರ ಸಂಘದ ಪದಾಧಿಕಾರಿಗಳು ಅಂತ್ಯಸಂಸ್ಕಾರ ಕಾರ‌್ಯದಲ್ಲಿ ಸಹಕರಿಸಿದರು.

ನೂಕುನುಗ್ಗಲು: ಸಾರ್ವಜನಿಕ ಅಂತಿಮ ದರ್ಶನಕ್ಕೆ ಜನಸಾಗರವೇ ನೆರೆದಿದ್ದರಿಂದ ನೂಗುನುಗ್ಗಲು ಉಂಟಾಯಿತು. ಅಂತ್ಯಸಂಸ್ಕಾರ ವೀಕ್ಷಣೆಗೆ ಕೂಡ ಅಪಾರ ಮಂದಿ ಸೇರಿದ್ದರು. ತಹಸೀಲ್ದಾರ್ ಮಹಮ್ಮದ್ ಇಸಾಕ್, ಇನ್ಸ್‌ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್, ನಗರ ಠಾಣಾಧಿಕಾರಿ ನಂದಕುಮಾರ್ ಸ್ಥಳದಲ್ಲಿ ಮೊಕ್ಕಾಂ ಇದ್ದು, ವಿಶೇಷ ಮುನ್ನೆಚ್ಚರಿಕೆ ವಹಿಸಿದರು.

ಹರಿಯಿತು ಕಣ್ಣೀರ ಧಾರೆ: ಪ್ರಭಾ ಸಾವಿನಿಂದ ನೀರವ ಮೌನ ನೆಲೆಸಿದ್ದ ನಂದಗೋಕುಲ ಭಾನುವಾರ ಮಧ್ಯಾಹ್ನದ ಹೊತ್ತು ಕಣ್ಣೀರಧಾರೆಯಲ್ಲಿ ಮುಳುಗಿತು. ತಂದೆ ಮಹಾಬಲ ಶೆಟ್ಟಿ, ತಾಯಿ ಸರೋಜಿನಿ ಶೆಟ್ಟಿ, ಪತಿ ಅರುಣ್ ಕುಮಾರ್, ಪುತ್ರಿ ಮೇಘನಾ, ಸಹೋದರರಾದ ಡಾ. ಶಂಕರ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ನಿತಿನ್ ಶೆಟ್ಟಿ, ಸಹೋದರಿ ಶುಭ ಶೆಟ್ಟಿ ಕಂಬನಿ ಮಿಡಿಯುತ್ತಲೇ ಅಂತಿಮ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ದೃಶ್ಯ ಮನ ಕಲುಕಿತು.

ಶಾಲೆಯಲ್ಲಿ ವಿಶೇಷ ಪ್ರಾರ್ಥನೆ: ಕರಿಂಗಾನ, ಅಮ್ಟೂರು ಸಂತ ಅಂತೋನಿಯರ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಪ್ರಭಾ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Write A Comment