ಕನ್ನಡ ವಾರ್ತೆಗಳು

ಶ್ರದ್ಧೆ, ಕಠಿಣ ಪರಿಶ್ರಮ ಮತ್ತು ನಿಯತ್ತುನಿಂದ ವೈದರು ವೃತ್ತಿ ನಿರ್ವಹಿಸಿದರೆ ಎಲ್ಲವು ತಾನೇ ಒಲಿದು ಬರುವುದು : ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್

Pinterest LinkedIn Tumblr

father_mullar_grdutin_1

ಮಂಗಳೂರು,ಮಾರ್ಚ್.14 : ವೈದ್ಯರು ಹೆಸರು, ಪ್ರಸಿದ್ಧಿ ಹಾಗೂ ಹಣದ ಹಿಂದೆ ಬೀಳುವ ಅಗತ್ಯವೇ ಇಲ್ಲ. ಕಠಿಣ ಪರಿಶ್ರಮ, ಶ್ರದ್ಧೆ, ನಿಯತ್ತು ಹಾಗೂ ಸೇವಾ ಮನೋಭಾವದಿಂದ ವೃತ್ತಿ ನಿರ್ವಹಿಸಿದರೆ ಇವೆಲ್ಲವೂ ತನ್ನಿಂದ ತಾನೇ ಒಲಿದು ಬರುತ್ತವೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಹೇಳಿದರು. ಫಾದರ್ ಮುಲ್ಲರ್ ವಿದ್ಯಾಸಂಸ್ಥೆಗಳ ಘಟಿಕೋತ್ಸವ ಮತ್ತು ಸಂಸ್ಥಾಪನಾ ದಿನ ಆಚರಣೆ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿದ ಬಳಿಕ ಮಾತನಾಡಿದರು.

father_mullar_grdutin_2

ಅಲೋಪತಿ, ಹೋಮಿಯೋಪತಿ, ನ್ಯಾಚುರೋಪತಿ ಯಾವುದೇ ಇರಲಿ, ನಿಮಗೆ ರೋಗಿಗಳ ಬಗ್ಗೆ ಸಿಂಪತಿ ಇರಲಿ ಎಂದ ಅವರು, ಯಾವುದೇ ರೋಗಿಗಳು ಸಂಪರ್ಕಿಸಿದ ತಕ್ಷಣ ಅವರನ್ನು ಕಾಳಜಿಯಿಂದ ಪರಿಶೀಲಿಸಿ ಸೂಕ್ತ ಸಲಹೆ, ಸೂಚನೆ, ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದರು. ವ್ಯಾಪಕ ಅವಕಾಶ: ದೇಶದಲ್ಲಿ ಒಟ್ಟು 400 ವೈದ್ಯಕೀಯ ಕಾಲೇಜುಗಳಿವೆ. ಇದರಲ್ಲಿ ಶೇ.60ರಷ್ಟು ಖಾಸಗಿ ಆದರೆ, ಶೇ.40 ಸರಕಾರಿಯಾಗಿವೆ. ದೇಶದಲ್ಲಿ ಪ್ರತಿ ಲಕ್ಷಕ್ಕೆ 230ವೈದ್ಯಕೀಯ ಸೇವಕರು ಲಭ್ಯವಿದ್ದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಲಕ್ಷಕ್ಕೆ 450ಮಂದಿ ವೈದ್ಯಕೀಯ ಸೇವೆ ನೀಡುವವರು ಅಗತ್ಯವಿದ್ದಾರೆ. ಈ ಹಿನ್ನೆಲೆಯಿಂದ ಈ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿವೆ. ಗ್ರಾಮೀಣ ಪ್ರದೇಶದವರಿಗೆ ವೈದ್ಯಕೀಯ ಸೇವೆ ಅಗತ್ಯವಿದ್ದು, ಅಲ್ಲಿಗೆ ತೆರಳಿ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದರು.

father_mullar_grdutin_3 father_mullar_grdutin_4

ಗುಣಮಟ್ಟ ಕುಸಿತ : ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಗೆ ಹೋಲಿಸಿದರೆ, ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಕಾಲೇಜುಗಳಿದ್ದರೂ, ಕ್ಲಿನಿಕಲ್ ಸೌಲಭ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ಇದಕ್ಕಾಗಿ ವಿವಿಗಳು ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದು, ಅದನ್ನು ಕಟ್ಟುನಿಟ್ಟಿನಿಂದ ಶಿಕ್ಷಣ ಸಂಸ್ಥೆಗಳು ಜಾರಿಗೆ ತರಬೇಕು. ಫಾದರ್ ಮುಲ್ಲರ್‌ನಂತಹ ಸಂಸ್ಥೆಗಳು ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡ ಹಿನ್ನೆಲೆಯಲ್ಲಿ ಸಿಇಟಿಯಲ್ಲಿ ಸರಕಾರದ ಕೋಟಾ ಮುಗಿದ ಬಳಿಕ ಈ ಕಾಲೇಜಿಗೆ ವಿದ್ಯಾರ್ಥಿಗಳು ಪ್ರಥಮ ಪ್ರಾಶಸ್ತ್ಯದ ಬೇಡಿಕೆ ಸಲ್ಲಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದರು. ಮಲೇಷ್ಯಾ ಐಎನ್‌ಟಿಐ ಇಂಟರ್‌ನ್ಯಾಷನಲ್ ಯುನಿವರ್ಸಿಟಿಯ ಡಾ. ಇಬ್ರಾಹಿಂ ಅಹಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕ ಫಾ. ಪ್ಯಾಟ್ರಿಕ್ ರೊಡ್ರಿಗಸ್ ಸ್ವಾಗತಿಸಿದರು. ಘಟಿಕೋತ್ಸವದಲ್ಲಿ ಮೆಡಿಕಲ್ ಕಾಲೇಜಿನಿಂದ 249 ವಿದ್ಯಾರ್ಥಿಗಳೂ ಸೇರಿದಂತೆ ನಾನಾ ಕೋರ್ಸ್ ಪೂರೈಸಿದ 576 ಮಂದಿ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

father_mullar_grdutin_6 father_mullar_grdutin_5

 

ಮಂಗಳೂರು ಧರ್ಮಪ್ರಾಂತದ ಧರ್ಮಗುರು ಫಾದರ್ ಮುಲ್ಸರ್ ಸಂಸ್ಥೆಯ ಉಪಾಧ್ಯಕ್ಷ ಡೆನಿಸ್ ಮೊರಾಸ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಎಫ್‌ಎಂಎಂಸಿಎಚ್‌ನ ಆಡಳಿತಾಧಿಕಾರಿ ರಿಚರ್ಡ್ ಕೊಯೆಲ್ಲೊ , ಎಫ್‌ಎಂಎಂಸಿ ಆಡಳಿತಾಧಿಕಾರಿ ರುಡಾಲ್ಫ್ ರವಿ ಡೇಸಾ, ಆರೋಗ್ಯ ಸೇವೆಗಳ ವಿಭಾಗದ ಮುಖ್ಯಸ್ಥ ಡಾ.ಬಿ.ಸಂಜೀವ ರೈ, ವಿನ್ಸೆಂಟ್ ಸಲ್ದಾನ, ಫಾ. ರೋಶನ್ ಕ್ರಾಸ್ತಾ, ಡೀನ್ ಡಾ.ಜಯಪ್ರಕಾಶ್ ಆಳ್ವ , ಪ್ರಿನ್ಸಿಪಾಲರಾದ ಡಾ.ಶಿವಪ್ರಸಾದ್ ಕೆ.,ವಿನ್ನಿಫ್ರೆಡ್ ಡಿಸೋಜ, ಜೆಸ್ಮಿನ್ ಎಸ್. ವಾಸ್, ಅಖಿಲೇಶ್ ಪಿ. ಎಂ. ಉಪಸ್ಥಿತರಿದ್ದರು.

Write A Comment