ಕೊಣಾಜೆ: ನಡುಪದವಿನ ಕಾಲೇಜೊಂದರ ಹಾಸ್ಟೆಲ್ ವಿದ್ಯಾರ್ಥಿಗಳು ಊಟದ ಸಾಂಬಾರ್‌ನಲ್ಲಿ ಹಲ್ಲಿ ಬಿದ್ದಿದೆ ಎಂದು ಆರೋಪಿಸಿ ಹಾಸ್ಟೆಲ್‌ನ ಪೀಠೋಪಕರಣ, ಕಿಟಕಿ ಗಾಜುಗಳಿಗೆ ಹಾನಿಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ನಡುಪದವಿನ ಎಂಜಿನಿಯರಿಂಗ್ ಕಾಲೇಜಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಹುಡುಗರ ಹಾಸ್ಟೆಲ್‌ನಲ್ಲಿ ಗುರುವಾರ ರಾತ್ರಿಯೂಟದ ಪದಾರ್ಥದಲ್ಲಿ ಹಲ್ಲಿ ಕಂಡುಬಂದಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಗದ್ದಲ ಎಬ್ಬಿಸಿದ್ದರು. ಆಕ್ರೋಶಗೊಂಡ ವಿದ್ಯಾರ್ಥಿಗಳು ನಾಲ್ಕು ಮಹಡಿ ಹಾಸ್ಟೆಲಿನ ಕಿಟಕಿ ಗಾಜುಗಳನ್ನು ಕಲ್ಲೆಸೆದು ಪುಡಿಗೈದು, ಸೋಡಾ ಬಾಟಲಿ ಎಸೆದು, ಟಿವಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಶುಕ್ರವಾರ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು. ಹಾಸ್ಟೆಲ್‌ನಲ್ಲಿ ಸುಸಜ್ಜಿತ ವ್ಯವಸ್ಥೆಯ ಬದಲಿಗೆ ಮೂಲ ಸೌಲಭ್ಯಗಲೂ ಇಲ್ಲ. ಸಾವಿರಾರು ರೂ. ಫೀಸು ನೀಡಿ ಕಾಲೇಜಿಗೆ ಸೇರ್ಪಡೆಗೊಂಡರೂ, ಹಾಸ್ಟೆಲ್ ಅವ್ಯವಸ್ಥೆಗಳಿಂದ ಕೂಡಿದೆ. ಆಡಳಿತ ಮಂಡಳಿಯಲ್ಲಿ ದೂರಿದರೂ, ವಿದ್ಯಾರ್ಥಿ ಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಕೆಲಸ ಅವರು ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿಯರಿತ ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಬಂದೋಬಸ್ತ್ ಮಾಡಿದ್ದಾರೆ. ಕಾಲೇಜು ಕಟ್ಟಡ ಹಾಗೂ ಪೀಠೋಪಕರಣಗಳಿಗೆ ವಿದ್ಯಾರ್ಥಿಗಳು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ 22 ಮಂದಿ ವಿದ್ಯಾರ್ಥಿಗಳ ವಿರುದ್ದ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಹಾಸ್ಟೆಲ್‌ನಲ್ಲಿ ದಾಂಧಲೆ ನಡೆಸಿದ ವಿದ್ಯಾರ್ಥಿಗಳು ಎಲ್ಲರನ್ನೂ ಒಂದು ವಾರದ ರಜೆಯಲ್ಲಿ ಮನೆಗೆ ಕಳುಹಿಸಲಾಗಿದೆ. ಮನೆಯವರಿಗೆ ಮಾಹಿತಿ ನೀಡಿ ಕಳುಹಿಸಲಾಗಿದ್ದು, ಎಚ್ಚರಿಕೆ ನೋಟಿಸ್ ನೀಡಲಾಗಿದೆ.