ಉಡುಪಿ: ಇಂದು ಆನ್-ಲೈನಿನಲ್ಲಿ ವಸ್ತುಗಳನ್ನು ಕೊಂಡುಕೊಳ್ಳುವುದು ಶೋಕಿಯಾಗಿದೆ. ಆದರೇ ಸಮೀಪದ ಅಂಗಡಿಗಿಂತ ಸ್ವಲ್ಪ ಹಣ ಉಳಿಸಲು ಹೋಗಿ “ಫ್ಲಿಪ್ ಕಾರ್ಟ್”ಗೆ ವಸ್ತುವನ್ನು ಬುಕ್ ಮಾಡಲು ಹೊರಡುವ ಮೊದಲು ಕೊಂಚ ಯೋಚನೆ ಮಾಡಿದರೇ ನಿಮ್ಮ ಜೇಬಿಗೂ ಒಳಿತು, ನೀವೂ ಮೋಸವೂ ಹೋಗಲ್ಲ.
ಇದಕ್ಕೊಂದು ತಾಜಾ ಉದಾಹರಣೆಉಡುಪಿಯ ಮಲ್ಪೆಯಲ್ಲಿ ನಡೆದಿದ್ದು, ಕ್ಯಾಮರಾ ಆರ್ಡರ್ ಮಾಡಿ ಕಲ್ಲು ಪಡೆದ ವ್ಯಕ್ತಿ ಮಾತ್ರ ತಬ್ಬಿಬ್ಬಾಗಿದ್ದಾರೆ. ಈ ಘಟನೆ ಗುರುವಾರ ನಡೆದಿದೆ.
ಪ್ಯಾಕೆಟಿನಲ್ಲಿ ಕಲ್ಲು ಬಂತು: ಮಲ್ಪೆ ನಿವಾಸಿ ಶರತ್ ಕುಮಾರ್ ಅವರು ಫೆ 28ರಂದು 50,990 ರೂಪಾಯಿ ಮೌಲ್ಯದ ಕೆನೋನ್ ಡಿ.ಎಸ್.ಎಲ್. ಆರ್. ಕ್ಯಾಮರಾ ಬುಕ್ ಮಾಡಿದ್ದರು ಹಾಗೂ ಇಎಮ್ಐ ಮೂಲಕ ಅಂದೇ ಹಣವನ್ನೆಲ್ಲ ಕ್ರೆಡಿಟ್ ಕಾರ್ಡ್ ಮೂಲಕ ಡೆಬಿಟ್ ಕೂಡ ಮಾಡಿದ್ದರು. ಆದರೆ 12ದಿನಗಳ ಬಳಿಕ ಕ್ಯಾಮರಾ ಡೆಲಿವರಿಯನ್ನು ಪಡೆದರು. ಕೂಡಲೇ ಅದನ್ನು ಡೆಲಿವರಿ ಬಾಯ್ ಎದುರಿಗೆ ತೆರೆದಾಗ ಕ್ಯಾಮರಾ ಬದಲು ಕಂಡದ್ದು ದೊಡ್ಡ ಕಲ್ಲಿನ ತುಂಡು.
ಈ ಗೋಲ್ ಮಾಲ್ ಗೆ ಆಕ್ರೋಶಗೊಂಡ ಶರತ್ ಹಾಗೂ ಅವರ ಸ್ನೇಹಿತರು ಫ್ಲಿಪ್ ಕಾರ್ಟ್ ಸಿಬ್ಬಂದಿಯನ್ನು ಹಿಡಿದಿಟ್ಟುಕೊಂಡು ಹಣ ನೀಡುವವರೆಗೆ ಬಿಡುವುದಿಲ್ಲ ಎಂದು ಶರತ್ ಹಾಗೂ ಅವರ ಸಂಗಡಿಗರು ಒತ್ತಾಯಪಡಿಸಿದ್ದಾರೆ. ಇದಕ್ಕೆ ಫ್ಲಿಪ್ ಕಾರ್ಟ್ ಉಡುಪಿ ಕಚೇರಿಯ ಸಿಬ್ಬಂದಿಗಳು ತಬ್ಬಿಬ್ಬಾಗಿದ್ದಾರೆ. ಕ್ರೆಡಿಟ್ ಮೂಲಕ ಹಣವನ್ನು ಡೆಬಿಟ್ ಮಾಡಿದ್ದು ಮತ್ತೊಮ್ಮೆ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಲಾಗುವುದಿಲ್ಲ. ಕೆಲವೇ ದಿನಗಳಲ್ಲಿ ಕಾರ್ಯಕ್ರಮಗಳಿದ್ದು ಕ್ಯಾಮರಾ ಕೂಡ ಇಲ್ಲ ಹಣ ಕೂಡ ಇಲ್ಲ ಎಂದು ಅಳಲನ್ನು ತೋಡಿಕೊಂಡು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು.
ಕೊನೆಗೆ ತಪ್ಪಿನ ಅರಿವಾದ ಈ ಫ್ಲಿಪ್ ಕಾರ್ಟ್ ಮೇಲಾಧಿಕಾರಿಗಳು ಶರತ್ ಅವರನ್ನು ಸಂಪರ್ಕಿಸಿ ಇದು ಕಣ್ತಪ್ಪಿನಿಂದಾದ ಘಟನೆಯಾಗಿದ್ದು, ಈ ಹಣವ್ನ್ನು ವಾಪಾಸ್ಸು ಮಾಡುವುದಲ್ಲದೇ ತನಿಖೆ ನಡೆಸುವುದಾಗಿಯೂ ಭರವಸೆ ನೀಡಿದೆ.
ಒಟ್ಟಿನಲ್ಲಿ ಈ ಘಟನೆಯಿಂದಾಗಿ ಆನ್-ಲೈನಿನ ಗ್ರಾಹಕರು ಬೆದರಿದ್ದಾರೆ. ಅವರ ಬಾಯಲ್ಲಿ ಕೇಳಿ ಬರೋ ಈಗಿನ ಮತು ಮಾತ್ರ ಹೀಗಿದೆ, “ ಈ ಕಾಲದಲ್ಲಿ ಯಾರನ್ನು ನಂಬೋದು ಮಾರಾಯರೇ”…..!