ಮಂಗಳೂರು,ಮಾರ್ಚ್.12: ನಗರದ ಮಿಫ್ಟ್ – ಫ್ಯಾಶನ್ ಡಿಸೈನಿಂಗ್ ಕಾಲೇಜಿನ ವತಿಯಿಂದ “ಅತ್ಮ ವಿಶ್ವಾಸದೆಡೆಗೆ ನಡಿಗೆ” ಎಂಬ ಕಾರ್ಯಕ್ರಮವನ್ನು ಮಾರ್ಚ್ 14ರಂದು ಸಂಜೆ ನಗರದ ಕದ್ರಿ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ. ಅಂಧ ಹಾಗೂ ಭಿನ್ನ ಸಾಮರ್ಥ್ಯದ ಮಕ್ಕಳು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮಿಪ್ಟ್ ಕಾಲೇಜು ಈ ಒಂದು ವಿಶಿಷ್ಠ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಿಫ್ಟ್ ಕಾಲೇಜಿನ ನಿರ್ದೇಶಕ ಎಂ.ಜಿ.ಹೆಗಡ್ಡೆ ಅವರು ತಿಳಿಸಿದ್ದಾರೆ.
ಗುರುವಾರ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ರೋಮನ್ ಕೆಥೆರಿಯನ್ ಲೋಬೋ ಶಾಲೆಯ ಅಂಧ ಮಕ್ಕಳು ಹಾಗೂ ಸಾನಿಧ್ಯ ಶಾಲೆಯ ಭಿನ್ನ ಸಾಮರ್ಥ್ಯ ಮಕ್ಕಳು ವಸ್ತ್ರ ವಿನ್ಯಾಸದ ಪ್ರದರ್ಶನವನ್ನು ಮಾಡುವುದರ ಮೂಲಕ “ಆತ್ಮ ವಿಶ್ವಾಸದ ನಡಿಗೆ” ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸುಮಾರು 50 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂಧ ವಿಧ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ನೀಡಿ ಅವರನ್ನು ಸಾಮಾಜಿಕ ಕ್ಷೇತ್ರದಲ್ಲಿ ಮುನ್ನುಗುವಂತೆ ಮಾಡುವ ಉದ್ದೇಶದಿಂದ ಮಿಫ್ಟ್ ಕಾಲೇಜು ಈ ಕಾರ್ಯಕ್ರಮವನ್ನು ಅಯೋಜಿಸಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಗಳ ವಸ್ತ್ರ ವಿನ್ಯಾಸದ ಪ್ರದರ್ಶನ ( ಫ್ಯಾಶನ್ ಶೋ) ಹಾಗೂ ಅಂತಿಮ ವರ್ಷದ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಗಳಿಂದ ವಸ್ತ್ರ ವಿನ್ಯಾಸದ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಮಂಗಳೂರು ಮೇಯರ್ ಉದ್ಘಾಟಿಸಲಿರುವರು. ಮಿಫ್ಟ್ ಸಂಸ್ಥೆಯ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.ಸಮಾಜದ ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಎಂ.ಜಿ.ಹೆಗಡ್ಡೆ ವಿವರಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಕೆ.ರಮೇಶ್, ಸಂಪತ್, ವಿವೇಕ್ ರಾಜ್, ಸುಹಾಸ್ ರಾವ್ ಮುಂತಾದವರು ಉಪಸ್ಥಿತರಿದ್ಧರು.