ಮಂಗಳೂರು, ಮಾ. 12 : ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬರ್ಕೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಬೆಂಗಳೂರು ಮೂಲದ ಗಜ ಅಲಿಯಾಸ್ ಗಜೇಂದ್ರ ಎಂದು ಗುರುತಿಸಲಾಗಿದೆ. ಬೆಳಗಾವಿ ಮೂಲದ ವಿದ್ಯಾರ್ಥಿನಿ ಮಂಗಳೂರಿನ ಹಾಸ್ಟೆಲ್‌ನಿಂದ ಕಳೆದ ರವಿವಾರ ನಾಪತ್ತೆಯಾಗಿದ್ದಳು. ಬೆಳಗ್ಗೆ ಹಾಸ್ಟೆಲ್‌ನಿಂದ ತೆರಳಿದ್ದ ವಿದ್ಯಾರ್ಥಿನಿ ಸಂಜೆಯಾದರೂ ವಾಪಸು ಬಾರದ ಹಿನ್ನೆಲೆಯಲ್ಲಿ ಮನೆಯವರಿಗೆ ಮಾಹಿತಿ ನೀಡಲಾಗಿತ್ತು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.
ಬರ್ಕೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ವಸತಿಗೃಹವೊಂದರಿಂದ ಆರೋಪಿಯನ್ನು ನಿನ್ನೆ ದಸ್ತಗಿರಿ ಮಾಡಿದ್ದು, ಮಂಗಳೂರಿಗೆ ಕರೆ ತಂದಿದ್ದಾರೆ. ಆರೋಪಿಗೆ ಮಾರ್ಚ್ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿದ್ಯಾರ್ಥಿನಿಗೆ ಫೇಸ್‌ಬುಕ್ ಮುಖಾಂತರ ಆರೋಪಿ ಗಜೇಂದ್ರನ ಪರಿಚಯವಾಗಿತ್ತು ಎಂದು ಹೇಳಲಾಗಿದೆ.