ಬ್ರಿಟನ್,ಮಾರ್ಚ್.10 : ಇನ್ನು ಮುಂದೆ ಮೂತ್ರವನ್ನು ಜೋಪಾನ ಮಾಡುವ ಕಾಲ ಬರಲಿದೆ ಹಾಗೂ `ಇಲ್ಲಿ ಮೂತ್ರ ಶಂಕೆ ಮಾಡಬಾರದು’ ಎಂಬ ನಾಮಫಲಕ ಕಾಣಸಿಗದು. , ಮಾನವನ ಮೂತ್ರವನ್ನು ವಿದ್ಯುತ್ ಆಗಿ ಪರಿವರ್ತಿಸುವ ಜನರೇಟರ್ ಒಂದನ್ನು ಬ್ರಿಸ್ಟಲ್‍ನಲ್ಲಿರುವ ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಕಟ್ಟಡದ ಬಳಿಯಲ್ಲಿ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರ್ ಅನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದು, ಸದ್ಯ ಈ ಜನರೇಟರ್‍ನ ಪ್ರಯೋಗಾರ್ಥ ಪರೀಕ್ಷೆ ನಡೆಯುತ್ತಿದೆ.
ವಿಶ್ವವಿದ್ಯಾಲಯ ಮತ್ತು ಓಕ್ಸ್‍ಫಾಮ್‍ನ ಸಂಶೋಧಕರ ಜಂಟಿ ಸಹಯೋಗದಲ್ಲಿ ಈ ಆವಿಷ್ಕಾರವನ್ನು ಕಾರ್ಯರೂಪಕ್ಕೆ ತರಲಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದಿಂದ ಮೂತ್ರವನ್ನು ಸಂಗ್ರಹಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು ಈ ಜನರೇಟರ್‍ನಿಂದ ಉತ್ಪಾದನೆಯಾಗುವ ವಿದ್ಯುತ್‍ನಿಂದ ಒಳಾಂಗಣದ ಬೆಳಕಿನ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಗಿದೆ. ಕತ್ತಲಿನಿಂದ ಕೂಡಿರುವ ನಿರಾಶ್ರಿತರ ಶಿಬಿರಗಳಲ್ಲಿನ ಕೊಠಡಿಗಳು ಮತ್ತು ಮಹಿಳೆಯರ ಸುರಕ್ಷತೆಗೆ ಅಪಾಯಕಾರಿಯಾದ ಪ್ರದೇಶಗಳಲ್ಲಿ ಬೆಳಕನ್ನು ಹರಿಸಲು ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಂಶೋಧಕರು ಚಿಂತನೆ ನಡೆಸಿದ್ದಾರೆ.