ಕನ್ನಡಿಗ ವರ್ಲ್ಡ್ ಸೌಂದರ್ಯ ಲಹರಿ : ವಯಸ್ಸಿನ ಬೇಧಬಾವವಿಲ್ಲದೆ ಸನ್‌ಗ್ಲಾಸ್ ಧರಿಸುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಹೆಚ್ಚು ಸಮಯ ಧರಿಸುವುದರಿಂದ ಮೂಗಿನ ಸುತ್ತಲಿನ ಭಾಗ ಹಾಗೂ ಕಣ್ಣಿನ ಸುತ್ತಲೂ ಸನ್‌ಗ್ಲಾಸ್‌ನ ಕಪ್ಪು ಮಾರ್ಕ್ ಮುಖದ ಅಂದವನ್ನು ಕೆಡಿಸುತ್ತದೆ. ಎಷ್ಟೇ ಸುಂದರವಾಗಿ ಮೇಕಪ್ ಮಾಡಿದ್ದರೂ ಈ ಕಲೆಗಳು ಎದ್ದು ಕಾಣುತ್ತವೆ. ಇದಕ್ಕಾಗಿ ಮನೆಯಲ್ಲೇ ಕೆಲವು ಪರಿಹಾರವನ್ನು ಕೈಗೊಳ್ಳಬಹುದು. ಟ್ರೈಮಾಡಿ ನೋಡಿ.
ಸೌತೆಕಾಯಿ ರಸ
* ಪ್ರತಿದಿನ ಬೆಳಿಗ್ಗೆ ಸೌತೆಕಾಯಿ ರಸವನ್ನು ಹತ್ತಿಯಲ್ಲಿ ಅದ್ದಿ . ಕಣ್ಣಿನ ಸುತ್ತಲೂ ಮೂಗಿನ ಪಕ್ಕಗಳಲ್ಲಿ ಹಚ್ಚಿ . 10 ನಿಮಿಷದ ನಂತರ ತಣ್ಣೀರಿನಿಂದ ತೊಳೆಯುವುದರಿಂದ ಕಪ್ಪು ಕಲೆ ಕ್ರಮೇಣ ಮಾಯವಾಗುತ್ತದೆ.
* ಸೌತೆಕಾಯಿಯನ್ನು ತೆಳುವಾದ ಸ್ಲೈಸ್ ಮಾಡಿ ಬಿಡುವಿದ್ದಾಗ ಮುಖದ ಕಪ್ಪು ಕಲೆಯುಂಟಾದ ಭಾಗಕ್ಕೆ ಅದರಲ್ಲೂ ಮೂಗಿನ ಅಕ್ಕಪಕ್ಕಗಳಲ್ಲಿ 10 ನಿಮಿಷ ಮಸಾಜ್ ಮಾಡುವುದರಿಂದ ತ್ವಚೆ ಹೊಳಪನ್ನು ಪಡೆಯುತ್ತದೆ.
* ಕೆಲಸದಿಂದ ಬಿಡುವು ಸಿಕ್ಕಾಗ ಸೌತೆಯ ಸ್ಲೈಸನ್ನು ಕಣ್ಣಿನ ಮೇಲೆ ಇಟ್ಟು ಸ್ವಲ್ಪ ಸಮಯ ಕಣ್ಣಿಗೆ ವಿಶ್ರಾಂತಿ ನೀಡುವುದರಿಂದ ಕಣ್ಣಿನ ಆರೋಗ್ಯಕ್ಕೂ ಕಣ್ಣಿನ ಸುತ್ತಲಿನ ಚರ್ಮವು ಕಾಂತಿಯುತವಾಗಲು ಸಹಾಯಕವಾಗುತ್ತದೆ.
ನಿಂಬೆರಸ
* ಎರಡು ದಿನಗಳಿಗೊಮ್ಮೆ ನಿಂಬೆರಸವನ್ನು ಸ್ವಲ್ಪ ಅರಿಶಿನದೊಂದಿಗೆ ಮಿಶ್ರಮಾಡಿ ಮೂಗಿನ ಪಕ್ಕಗಳಲ್ಲಿ ಹಚ್ಚಿ 10ನಿಮಿಷದ ನಂತರ ತಣ್ಣೀರಿನಿಂದ ತೊಳೆಯುವುದರಿಂದ ಕನ್ನಡಕದ ಬಳಕೆಯಿಂದಾದ ಬ್ಲಾಕ್ ಮಾರ್ಕ್ ತಿಳಿಗೊಳ್ಳುತ್ತದೆ.
* ವಾರಕ್ಕೊಮ್ಮೆ ನಿಂಬೆರಸದೊಂದಿಗೆ ಜೇನುತುಪ್ಪವನ್ನು ಮಿಶ್ರ ಮಾಡಿ ಕಣ್ಣಿನ ಸುತ್ತಲೂ ಹಚ್ಚಿ ಮಸಾಜ್ ಮಾಡುವುದರಿಂದ ತ್ವಚೆ ಮದುವಾಗಿ ಸುಂದರಗೊಳ್ಳುತ್ತದೆ.
ಅಲೋವೆರಾ
ಅಲೋವೆರಾ ಉತ್ತಮ ಸೌಂದರ್ಯವರ್ಧಕ. ಅಂತೆಯೇ ಅನೇಕ ಸೌಂದರ್ಯ ಸಾಧನಗಳಲ್ಲಿ ಇದರ ಬಳಕೆ ಅತಿ ಪ್ರಮುಖ ಸ್ಥಾನ ಪಡೆದಿದೆ.
* ಪ್ರತಿದಿನ ಅಲೋವೆರಾದ ಲೋಳೆಯನ್ನು(ಜೆಲ್) ಕಣ್ಣಿನ ಸುತ್ತಲೂ ಹಚ್ಚಿ . 20 ನಿಮಿಷ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆಯುವದರಿಂದ ಕಪ್ಪು ಕಲೆಯು ಮಾಯವಾಗುತ್ತದೆ.
* ಅಲೋವೆರಾ ರಸದೊಂದಿಗೆ ಸ್ವಲ್ಪ ನಿಂಬೆರಸ, ಜೇನುತುಪ್ಪ ಬೆರೆಸಿ ಮೂಗಿನ ಪಕ್ಕಗಳಲ್ಲಿ ಕಣ್ಣಿನ ಸುತ್ತಾ ಹಚ್ಚುವುದರಿಂದ ಕ್ರಮೇಣ ಕಪ್ಪು ಕಲೆ ತಿಳಿಯಾಗುತ್ತದೆ.
* ಅಲೋವೆರಾ ಜೆಲ್‌ನೊಂದಿಗೆ ಸ್ವಲ್ಪ ರೋಸ್ ವಾಟರ್ ಮಿಶ್ರ ಮಾಡಿ. ಮೂಗಿನ ಮೇಲೆ 5 ನಿಮಿಷ ಮಸಾಜ್ ಮಾಡಿ. ಕಪ್ಪಾದ ತ್ವಚೆ ಹೊಳಪುಗೊಳ್ಳುತ್ತದೆ ಮತ್ತು ತಿಳಿಯಾಗುತ್ತದೆ.
ಕಿತ್ತಲೆ ಹಣ್ಣಿನ ಸಿಪ್ಪೆ
* ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದನ್ನು ಪೌಡರ್ ಮಾಡಿ ಸ್ವಲ್ಪ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಪೇಸ್ಟ್ ತಯಾರಿಸಿ. ಕಣ್ಣಿನ ಸುತ್ತಲೂ ಅಪ್ಲೈ ಮಾಡಿ, 10 ನಿಮಿಷದ ನಂತರ ನೀರಿನಿಂದ ತೊಳೆಯುವದರಿಂದ ತ್ವಚೆ ಫ್ರೆಶ್ ಹಾಗೂ ಕಾಂತಿಯುತವಾಗಿರುತ್ತದೆ.
* ಮಾರುಕಟ್ಟೆಯಲ್ಲೂ ಕಿತ್ತಲೆ ಪೌಡರ್ ದೊರೆಯುತ್ತದೆ. ಮನೆಯಲ್ಲೂ ಇದನ್ನು ತಯಾರಿಸಿ ವಾರಕ್ಕೊಮ್ಮೆ ರೋಸ್ ವಾಟರ್‌ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಪ್ಯಾಕ್ ಹಾಕುವುದರಿಂದ ಸ್ಕಿನ್ ಟೈಟಾಗುತ್ತದೆ ಕಣ್ಣಿನ ಸುತ್ತಲಿನ ತ್ವಚೆ ಹೊಳಪಾಗುತ್ತದೆ. ಕಪ್ಪು ಕಲೆ ನಿವಾರಣೆಯಾಗುತ್ತದೆ.
ಆಲೂಗಡ್ಡೆ ಮತ್ತು ಟೊಮೇಟೋ
* ಆಲೂಗಡ್ಡೆ ಹಾಗೂ ಟೊಮೇಟೋ ರಸವನ್ನು ಆಗಾಗ್ಗೆ ಕಣ್ಣಿನ ಕಪ್ಪು ಕಲೆಯ ಭಾಗಕ್ಕೆ ಹಚ್ಚುವುದರಿಂದ ಕಲೆ ಮಾಯವಾಗುತ್ತದೆ.
* ಅಡುಗೆ ಮನೆಯಲ್ಲಿದ್ದಾಗ, ಟಿವಿ ನೋಡುವಾಗ ಬಿಡುವಿನ ವೇಳೆಯಲ್ಲಿ ಟೊಮೇಟೋ ಆಲೂಗಡ್ಡೆ ಸ್ಲೈಸ್ ಮಾಡಿ ಮೂಗಿನ ಭಾಗಕ್ಕೆ, ಕಣ್ಣಿನ ಸುತ್ತಾ ಮಸಾಜ್ ಮಾಡುವುದರಿಂದ ತ್ವಚೆ ತಿಳಿಯಾಗುತ್ತದೆ.