ಕನ್ನಡ ವಾರ್ತೆಗಳು

ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸೌಲಭ್ಯ ದೊರೆಯಲಿ : ಜಿಲ್ಲಾ ನ್ಯಾಯಾಧೀಶರು

Pinterest LinkedIn Tumblr

ಉಡುಪಿ; ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ತಲುಪಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಶಂಕರ ಬಿ ಅಮರಣ್ಣವರ ಹೇಳಿದ್ದಾರೆ.

ಅವರು ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಉಡುಪಿ, ಜಿಲ್ಲಾಡಳಿತ, ಉಡುಪಿ ಪೊಲೀಸ್ ಇಲಾಖೆ, ಉಡುಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ ಆಶ್ರಯ ಸಮುದಾಯ ಸಂಘಟನೆ(ರಿ), ಉಡುಪಿ ಮತ್ತು ವಕೀಲರ ಸಂಘ(ರಿ), ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದವರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Udupi_News_Court (2) Udupi_News_Court (1) Udupi_News_Court (3) Udupi_News_Court

ಇತಿಹಾಸದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಗೌರವದ ಸ್ಥಾನ ಮಾನ ಇದ್ದು, ಪ್ರಸ್ತುತ ಅವರಿಗೆ ಆ ರೀತಿ ಸ್ಥಾನ ಮಾನ ನೀಡದೆ ಬೇರೆ ರೀತಿಯಿಂದ ನೋಡಲಾಗುತ್ತಿದೆ ಇದು ಸರಿಯಿಲ್ಲ ಅವರಿಗೆ ಮತ್ತು ಅವರ ಭಾವನೆಗಳಿಗೆ ಗೌರವ ನೀಡಿ, ಸರಕಾರದಿಂದ ಅವರಿಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದಲ್ಲಿ ಅವರು ಸಮಾಜದಲ್ಲಿ ನೆಮ್ಮದಿಯ ಜೀವನ ನೆಡೆಸಲು ಸಾಧ್ಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಲಿಂಗತ್ವ ಅಲ್ಪ ಸಂಖ್ಯಾತರು ತಮ್ಮ ವರ್ತನೆಗಳಿಂದ ವಿಭಿನ್ನವಾಗಿ ಕಂಡರೂ ಅವರೂ ಸಹ ಸಮಾಜದ ನಾಗರಿಕರೇ ಆಗಿರುವುದರಿಂದ ಅವರನ್ನು ಅಪಹಾಸ್ಯದ ದೃಷ್ಠಿಯಿಂದ ನೋಡದೇ ಗೌರವ ನೀಡಬೇಕು ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸಹ ಸಂವಿಧಾನ ಸಾಮಾನ್ಯರಂತೆ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಿದ್ದು, ಅವರು ಕೀಳಿರಿಮೆಯಿಂದ ಬಳಲದೆ , ತಮ್ಮಲ್ಲಿಯ ಕೌಶಲಗಳನ್ನು ರೂಢಿಸಿಕೊಂಡು , ಸರಕಾರದ ಯೋಜನೆಗಳ ಪ್ರಯೋಜನ ಪಡೆದು ಸ್ವ ಉದ್ಯೋಗ ಕೈಗೊಳ್ಳಬೇಕು ಹಾಗೂ ಮನಸ್ವಿನಿ ಯೋಜನೆಯ ವಯೋಮಿತಿಯಲ್ಲಿ ಇಳಿಕೆ ಮಾಡಿದ್ದು, ಪ್ರಯೋಜನ ಪಡೆಯುವಂತೆ ಹೇಳಿದರು.

ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ ಪರ ಹೋರಾಟಗಾರ್ತಿ ನಿಶಾ ಗುಳ್ಳೂರು ಮಾತನಾಡಿ, ನಮಗೆ ಸಮಾಜದಿಂದ ಯಾವುದೇ ಅನುಕಂಪ ಬೇಡ ಆದರೆ ಅವಕಾಶಗಳನ್ನು ನೀಡಿ ಇದರಿಂದ ನಾವು ಸಹಜವಾಗಿ ಬದುಕು ಸಾಗಿಸುತ್ತೇವೆ. ಸರಕಾರಿ ಆದೇಶಗಳಲ್ಲಿ ಸಮುದಾಯದ ಕುರಿತು ಸ್ಪಷ್ಟವಾಗಿ ಗುರುತಿಸಿಲ್ಲವಾದ್ದರಿಂದ , ವಿವಿಧ ಇಲಾಖೆಗಳ ಪ್ರಯೋಜನ ಪಡೆಯುವ ಸಂದರ್ಭದಲ್ಲಿ ಅಧಿಕಾರಿಗಳಿಂದ ಹಲವು ಸಮಸ್ಯೆಗಳಾಗುತ್ತಿದ್ದು, ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಅಣ್ಣಾಮಲೈ ಮಾತನಾಡಿ, 2011 ರ ಜನಗಣತಿಯಂತೆ ಲಿಂಗತ್ವ ಅಲ್ಪ ಸಂಖ್ಯಾತರ ಸಂಖ್ಯೆ ರಾಷ್ಟದಲ್ಲಿ 4.9 ಲಕ್ಷ ಇದ್ದು, ಕರ್ನಾಟಕದಲ್ಲಿ 2೦೦೦೦ ಇದೆ ಆದರೆ ಬಹಳಷ್ಟು ಮಂದಿ ತಮ್ಮ ನಿಜವಾದ ಮಾಹಿತಿ ನೀಡಿಲ್ಲವಾಗಿದ್ದು, ರಾಷ್ಟ್ರದಲ್ಲಿ ಸುಮಾರು 30 ಲಕ್ಷ ಮಂದಿ ಲಿಂಗತ್ವ ಅಲ್ಪ ಸಂಖ್ಯಾತರು ಇದ್ದು, ಸುಮಾರು 6 ಜನರಲ್ಲಿ ಒಬ್ಬರು ಮಾತ್ರ ತಮ್ಮ ಲಿಂಗತ್ವವನ್ನು ಒಪ್ಪಿಕೊಂಡಿರುತ್ತಾರೆ.

ಸರಕಾರದ ಯೋಜನೆಗಳನ್ನು ಅಂಕಿ ಅಂಶಗಳ ಆಧಾರದಲ್ಲೇ ತಯಾರಿಸುವುದರಿಂದ ಲಿಂಗತ್ವ ಅಲ್ಪ ಸಂಖ್ಯಾತರು ತಮ್ಮ ನಿಖರವಾದ ಮಾಹಿತಿ ನೀಡಿದಲ್ಲಿ ಅವರಿಗಾಗಿ ಉತ್ತಮ ಯೋಜನೆಗಳನ್ನು ರೂಪಿಸಲು ಸಾಧ್ಯವಿದೆ. ಜಿಲ್ಲೆಯ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಲಿಂಗತ್ವ ಅಲ್ಪ ಸಂಖ್ಯಾತರ ಕುರಿತು ಸೂಕ್ಷ್ಮ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ , ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಾನಂದ, ವಕೀಲರ ಸಂಘದ ಅಧ್ಯಕ್ಷರಾದ ಎ. ಮಾಧವ ಆಚಾರ್ಯ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಬೇಕಲ್ ಇವರು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯಗಳು ಮತ್ತು ವಕೀಲರಾದ ಸುನಿಲ್ ಮ್ಯಾಥ್ಯು ಇವರು ಕಾನೂನು ಮಾಹಿತಿ ವಿಷಯವಾಗಿ ಹಾಗೂ ರಾಜೇಶ್, ಸಂಗಮ ಪಿ.ಡಿ. ಬೆಂಗಳೂರು ಮತ್ತು ಸಂಜೀವ ವಂಡ್ಸೆ ಇವರು ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಹೆಚ್.ಐ.ವಿ ಈ ವಿಷಯಗಳ ಬಗ್ಗೆ ಮಾತನಾಡಿದರು.

ನಾಗಜ್ಯೋತಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕಾನೂನು ಸೇವೆಗಳ ಪ್ರಾಧಿಕಾರ ರವರು ಸ್ವಾಗತಿಸಿದರು. ವಕೀಲರಾದ ಸುನೀಲ್ ಮೂಲ್ಯ ನಿರೂಪಿಸಿದರು.

Write A Comment