ಕುಂದಾಪುರ: 350 ವರ್ಷಗಳ ಇತಿಹಾಸವಿರುವ, 6 ತಲೆಮಾರುಗಳನ್ನು ಕಂಡ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಉಪ್ಪಿನಕುದ್ರು, ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇದರ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡವನ್ನು ಬೆಂಗಳೂರಿನ ಸೆಂಚುರಿ ಬಿಲ್ಡರ್‍ಸ್ ಪ್ರೈ ಲಿ.ನ ಆಡಳಿತ ನಿರ್ದೇಶಕ, ಕಲಾ ಪ್ರೋತ್ಸಾಹಕ ಡಾ|ಪಿ.ದಯಾನಂದ ಪೈ ಮಾ.7ರಂದು ಉದ್ಘಾಟಿಸಿದರು.
ಗೊಂಬೆಯಾಟವನ್ನು ಆರು ತಲೆಮಾರುಗಳಿಂದ ನಡೆಸಿಕೊಂಡು ಬಂದಿರುವ ಕಾಮತ್ ಕುಟುಂಬದ ಸೇವೆ ಶ್ಲಾಘನೀಯ ಎಂದರು. ಕರಾವಳಿಯ ಎರಡು ಪ್ರಭಾವಿ ಕಲಾಪ್ರಕರಗಲ್ಲಿ ಒಂದಾದ ಗೊಂಬೆಯಾಟಕ್ಕೆ ಅಕಾಡೆಮಿಯ ಜೊತೆಗೆ ಸುಸಜ್ಜಿತ ಕಟ್ಟಡವು ಆಗುತ್ತಿರುವುದು ಸಂತೋಷದ ವಿಚಾರವಾಗಿದೆ. ಇಲ್ಲಿ ನಿರಂತರವಾಗಿ ಈ ಕಲಾಪ್ರಕಾರವನ್ನು ಅಭಿವ್ಯಕ್ತಿಗೊಳಿಸುವ ಪ್ರಕ್ರಿಯೆಗಳು ನಡೆಯಬೇಕು. ಆರ್ಥಿಕ ಕ್ರೋಢೀಕರಣಕ್ಕೆ ಕನಿಷ್ಠ 25 ಲಕ್ಷ ಮೊತ್ತದ ನಿಧಿಯೊಂದನ್ನು ಸ್ಥಾಪಿಸಿ, ಅದರ ಬಡ್ಡಿಯಿಂದ ಕಾರ್ಯಕ್ರಮವನ್ನು ನಡೆಸುವಂತಾಗಬೇಕು. ಈ ನಿಧಿಗೆ ನಾನು ಪ್ರಾರಂಭಿಕವಾಗಿ ಐದು ಲಕ್ಷ ನೀಡುವುದಾಗಿ ಅವರು ಈ ಸಂದರ್ಭ ಭರವಸೆಯಿತ್ತರು.
ಅವಿಭಜಿತ ದ.ಕ ಜಿಲ್ಲೆಯಲ್ಲಿ ಯಕ್ಷಗಾನ ಇನ್ನಷ್ಟು ಪ್ರಬುದ್ದವಾಗಬೇಕು ಎನ್ನುವ ನೆಲೆಯಲ್ಲಿ ಮಂಗಳೂರು ವಿವಿಗೆ ಯಕ್ಷಗಾನ ನಿಧಿಗೆ ಒಂದು ಕೋಟಿ ರೂ ನೀಡಲಾಗಿದೆ. ಅಲ್ಲಿ ಸುಂದರವಾದ ಬಡಗು ಮತ್ತು ತೆಂಕು ಮ್ಯೂಸಿಯಂಗಳ ರಚನೆಯಾಗಿದೆ. ಅಂತಹ ಕೆಲಸಗಳು ಇಲ್ಲೂ ಕೂಡಾ ಆಗಬೇಕಿದೆ.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯಕ್ಷಗಾನ ಗೊಂಬೆಯಾಟ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಯು.ವಾಮನ ಪೈ ಅವರಿಗೆ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾ ಪ್ರೋತ್ಸಾಹಕರಾದ ಜಯವಂತ ಪೈ ಕುಂದಾಪುರ, ಬಾಬುರಾಯ ಶೆಣೈ, ಬಾಬು ಎನ್.ಪೂಜಾರಿ ಬೆಂಗಳೂರು, ಟಿ.ಎನ್.ಪ್ರಭು ತಲ್ಲೂರು, ಪ್ರೊ.ಕೇಶವ ಮಯ್ಯ ಗುಜ್ಜಾಡಿ, ಮಂಜುನಾಥ ಮೈಪಾಡಿ ಉಪ್ಪಿನಕುದ್ರು ಇವರನ್ನು ಸನ್ಮಾನಿಸಲಾಯಿತು. ಉಪ್ಪಿನಕುದ್ರು ಶಾಲೆಯ ೭ ಮತ್ತು ೧೦ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದಾನಿಗಳಾದ ಡಾ.ಪಿ.ದಯಾನಂದ ಪೈ ದಂಪತಿಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಉಪನ್ಯಾಸ ಡಾ.ಎಚ್.ವಿ ನರಸಿಂಹ ಮೂರ್ತಿ, ಆಂತರಿಕ ಲೆಕ್ಕಪರಿಶೋಧಕ ಪಿ.ಪಿ.ಮಯ್ಯ, ಕುಂದಾಪುರ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ರಾಧಾಕೃಷ್ಣ ಶೆಣೈ, ಮೋಹಿನಿ ದಯಾನಂದ ಪೈ ಉಪಸ್ಥಿತರಿದ್ದರು.
ಅಕಾಡೆಮಿಯ ರೂವಾರಿ ಭಾಸ್ಕರ ಕೊಗ್ಗ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರತ್ನಾಕರ ಪೈ ವಂದಿಸಿದರು.



















