ಕೊಲಂಬೊ, ಮಾ. 7: ಶ್ರೀಲಂಕಾ ಗಡಿಯೊಳಗೆ ಪ್ರವೇಶ ಮಾಡುವ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದರೆ ತಪ್ಪಲ್ಲ ಎಂದು ಹೇಳಿರುವ ಲಂಕಾ ಪ್ರಧಾನಿ ರಾಣಿಲ್ ವಿಕ್ರಮಸಿಂಘೆ ಹೇಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಇದೊಂದು ಭಾವನಾತ್ಮಕ ಸಂಗತಿಯಾಗಿದ್ದು. ಎರಡು ದೇಶಗಳ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಡಬಹುದು. ಈ ಬಗೆಗಿನ ಗೊಂದಲವನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ವಿದೇಶಾಂಗ ಕಾರ್ಯಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
ಲಂಕೆಯ ಸಾಗರ ವ್ಯಾಪ್ತಿಯನ್ನು ಅತಿಕ್ರಮಿಸಿ ಒಳ ಬರುವ ಭಾರತೀಯ ಮೀನುಗಾರರ ಮೇಲೆ ನೌಕಾ ಪಡೆಯವರು ಗುಂಡು ಹಾರಿಸಬಹುದು. ಈ ಕೃತ್ಯವನ್ನು ತಪ್ಪೆಂದು ಯಾರೂ ಹೇಳುವಂತಿಲ್ಲ ಎಂದು ಲಂಕೆಯ ಪ್ರಧಾನಿ ರಾಣಿಲ್ ವಿಕ್ರಮಸಿಂಘೆ ತಮಿಳು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಈಗ ವಿವಾದ ಎಬ್ಬಿಸಿದೆ. ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾಕ್ಕೆ ಭೇಟಿ ನೀಡುವುದಕ್ಕೆ ಮುಂಚಿತವಾಗಿ ಇಂಥ ಹೇಳಿಕೆ ಬಂದಿರುವುದು ಎರಡು ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಗೊಂದಲ ಎಬ್ಬಿಸಿದೆ. ‘ಭಾರತೀಯ ಮೀನುಗಾರರು ಅಕ್ರಮವಾಗಿ ಒಳ ನುಗ್ಗಿ ಬಂದು ಮೀನುಗಾರಿಕೆ ನಡೆಸುತ್ತಾರೆ. ಭಾರತೀಯ ಗಡಿಯ ವ್ಯಾಪ್ತಿಯಲ್ಲಿ ಮೀನು ಹಿಡಿದರೆ ತಪ್ಪಲ್ಲ. ಅದನ್ನು ಬಿಟ್ಟು ನಮ್ಮ ವ್ಯಾಪ್ತಿಗೆ ಪ್ರವೇಶ ಮಾಡಿದರೆ ಗುಂಡು ಹೊಡೆಯುತ್ತೇವೆ’ ಎಂದು ಲಂಕಾ ಪ್ರಧಾನಿ ಸಂದರ್ಶನದಲ್ಲಿ ಹೇಳಿದ್ದರು.
ಕಳೆದ ತಿಂಗಳು ಶ್ರೀಲಂಕಾ ಸೇನಾ ಪಡೆ ಭಾರತೀಯ ಮೀನುಗಾರರ 84 ಬೋಟ್ ಗಳನ್ನು ವಶಪಡಿಸಿಕೊಂಡಿತ್ತು. ನಂತರ ಮಾತುಕತೆಯ ಮೂಲಕ ವಿವಾದ ಬಗೆಹರಿದಿತ್ತು.