ಕನ್ನಡ ವಾರ್ತೆಗಳು

ಜಾತಿಭೇಧವಿಲ್ಲದೆ ಎಲ್ಲರಿಗೂ ಒಂದೇ ಸಾಮೂಹಿಕ ಸ್ಮಶಾನ : ತಹಶೀಲ್ದಾರ್ 

Pinterest LinkedIn Tumblr

Tp_meeting_photos_1

ಮಂಗಳೂರು, ಮಾರ್ಚ್.04: ರಾಜ್ಯ ಸರ್ಕಾರ ಇನ್ನು ಮುಂದೆ ಜಾತಿಗೊಂದು ಸ್ಮಶಾನಗಳಿಗೆ ಜಾಗ ಮೀಸಲಿಡುವುದನ್ನು ಕೈ ಬಿಟ್ಟು ಎಲ್ಲರಿಗೂ ಒಂದೇ ಸಾಮೂಹಿಕ ಸ್ಮಶಾನ ವ್ಯವಸ್ಥೆ ಜಾರಿಗೆ ತರಲಿದೆ ಎಂದು ಮಂಗಳೂರು ತಹಶೀಲ್ದಾರ್ ಮೋಹನರಾವ್ ಅವರು  ಮಂಗಳೂರು ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ವಿಷಯ ತಿಳಿಸಿದರು.

ಮುಂದುವರೆದು ಮಾತನಾಡಿದ ತಹಸೀಲ್ದಾರರು, ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಸಕ್ರಮದಡಿ94ಸಿ ಯಲ್ಲಿ ಒಟ್ಟು ಮಂಗಳೂರು ತಾಲ್ಲೂಕಿನಲ್ಲಿ 9018 ಅರ್ಜಿಗಳು ಸ್ವೀಕೃತವಾಗಿವೆ, ಆದರೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಗಡಿಯಿಂದ ನೇರ 10 ಕಿ.ಮೀ ವ್ಯಾಪ್ತಿಯ ಒಳಗೆ ಜಮೀನು ಮಂಜೂರಾತಿಗೆ ಅವಕಾಶ ಇರುವುದಿಲ್ಲ. ಈ ನಿಯಮವನ್ನು ಅನುಸರಿಸಿದಾಗ ಮಂಗಳೂರು ತಾಲೂಕಿಗೆ ಕೇವಲ ಕೆಲೆಂಜಾರು, ಕೊಳವೂರು, ಮುಚ್ಚೂರು, ಬಡಗ ಎಡಪದವು, ತೆಂಕ ಎಡಪದವು ಗ್ರಾಮಗಳ ಅಂಶಿಕ ಜಮೀನು ಮಾತ್ರ ಮಂಜೂರಾತಿಗೆ ಅವಕಾಶ ಇದೆ, ಈ ಬಗ್ಗೆ ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕೋರಿಪತ್ರ ಬರೆಯಲಾಗಿದೆ ಎಂದು ತಹಸೀಲ್ದಾರರು ಸಭೆಯಲ್ಲಿ ತಿಳಿಸಿದರು.

Tp_meeting_photos_3 Tp_meeting_photos_2

ಗುರುಪುರ ಹೋಬಳಿ ಅಡ್ಡೂರು ಇಂದಿರಾನಗರ ಸ.ನಂ.71/1ಬಿ1 ರಲ್ಲಿ 3.54ಎಕ್ರೆ ಸರ್ಕಾರಿ ಜಮೀನು ಇದ್ದು ಸದರಿ ಸ.ನಂಬ್ರದಲ್ಲಿ ಈಗಾಗಲೇ ಒಟ್ಟು 84 ಜನರಿಗೆ ಮನೆ ನಿವೇಶನ ಮತ್ತು 94ಸಿ ನಲ್ಲಿ 0.06 ಜನರಿಗೆ ನಿವೇಶನ ಮಂಜೂರಗಿರುತ್ತದೆ ಎಂದು ತಹಶೀಲ್ದಾರರು ತಿಳಿಸಿದರು. ಪಾವೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ವಯರ್‌ಗಳು ನೇತಾಡುತ್ತಿದ್ದ ಬಗ್ಗೆ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮೆಸ್ಕಾಮ್ ಅಧಿಕಾರಿ ಈಗಾಗಲೇ ವಯರ್ ಬದಲಾವಣೆ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

Tp_meeting_photos_4

ಮಂಗಳೂರು ತಾಲೂಕಿನಲ್ಲಿ ಬಿ.ಪಿ.ಎಲ್ ಪಡಿತರ ಚೀಟಿಗಾಗಿ 6532 ಕುಟುಂಬಗಳು ಸಲ್ಲಿಸಿರುವ ಅರ್ಜಿಗಳು ಮುದ್ರಣಕ್ಕೆ ಸಿದ್ಧವಾಗಿದ್ದು, ಈ ಬಾಬ್ತು 1891 ಮಂದಿ ಮೆಸೇಜ್ ಕಳುಹಿಸಿದ್ದಾರೆ, ಇವರಿಗೆ ಜರೂರು ಪಡಿತರ ಚೀಟಿ ಮುದ್ರಿಸಿ ಪಂಚಾಯತ್‌ಗಳಿಗೆ ಕಳುಹಿಸುವುದಾಗಿ ತಾಲೂಕು ಪಡಿತರ ಅಧಿಕಾರಿ ಸಭೆಗೆ ತಿಳಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷೆ ರಜನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಕಾಶ್ ಮುಲ್ಕಿ ಮತ್ತು ಮೂಡಬಿದಿರೆ ತಹಸೀಲ್ದಾರರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ ಭಾಗವಹಿಸಿದ್ದರು.

Write A Comment