ಕನ್ನಡ ವಾರ್ತೆಗಳು

ಕಟ್ಟಡ ಕಾರ್ಮಿಕರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ :ಸಚಿವ ಪರಮೇಶ್ವರ ನಾಯ್ಕ

Pinterest LinkedIn Tumblr

parameshwr_press_meet

ಮಂಗಳೂರು, ಮಾ.3: ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ ತಿಳಿಸಿದ್ದಾರೆ. ಸೋಮವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕಟ್ಟಡ ಕಾರ್ಮಿಕರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಜತೆ ಹೊಂದಾಣಿಕೆ ಮಾಡಿ ಕೊಂಡು ಶಿಕ್ಷಣ ಕೊಡುವ ಉದ್ದೇಶವಿದೆ. ಈ ಬಗ್ಗೆ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಪರಮೇಶ್ವರ ನಾಯ್ಕ ತಿಳಿಸಿದರು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಕಾರ್ಮಿಕ ಕಲ್ಯಾಣ ಭವನ ನಿರ್ಮಿಸುವ ಉದ್ದೇಶವಿದ್ದು, ಸೂಕ್ತ ಜಮೀನು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಈ ಭವನದ ಮೂಲಕ ಸೂಕ್ತ ತರಬೇತು ನೀಡಿ ನಿರುದ್ಯೋಗ ನಿವಾರಣೆಗೆ ಕ್ರಮ ಜರಗಿಸಲಾಗುವುದು ಎಂದವರು ಹೇಳಿದರು.

ದ.ಕ. ಜಿಲ್ಲೆಯ ಉಳ್ಳಾಲ, ಕಿನ್ನಿಗೋಳಿ, ಕಾವಳಕಟ್ಟೆ, ಪುತ್ತೂರಿನಲ್ಲಿ ಕಳೆದ ವರ್ಷವೇ ಐಟಿಐ ತೆರೆಯಲು ಮಂಜೂರಾತಿ ನೀಡಲಾಗಿತ್ತು. ಆದರೆ ವಿದ್ಯಾರ್ಥಿಗಳು ಸೇರ್ಪಡೆಯಾಗದ ಕಾರಣ ಇದು ಸಾಧ್ಯವಾಗಿರಲಿಲ್ಲ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಮುತುವರ್ಜಿವಹಿಸಿ ಐಟಿಐ ತೆರೆಯಲಾಗುವುದು ಎಂದು ಸಚಿವರು ತಿಳಿಸಿದರು.ಐಟಿಐ ಜತೆಗೆ ಎಲೆಕ್ಟ್ರಾನಿಕ್ಸ್, ಪ್ಲಂಬಿಂಗ್, ಅಡುಗೆ, ಅತಿಥಿ ಸತ್ಕಾರ, ಕೃಷಿಗೆ ಸಂಬಂಧಿಸಿದ ಕೋರ್ಸ್ ಒಳಗೊಂಡಂತೆ ‘ಮಲ್ಟಿ ಟ್ರೇಡ್ ಸಿಸ್ಟಮ್’ ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ಮಂಗಳೂರಿನ ಇಎಸ್‌ಐ ಆಸ್ಪತ್ರೆಗಳನ್ನು ಕಾರ್ಮಿಕ ಮಂಡಳಿಗೆ ಹಸ್ತಾಂತರಿಸುವ ಪ್ರಸ್ತಾಪ ಸರಕಾರದ ಮುಂದಿದೆ. ಇಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಕ್ರಮ ಜರಗಿಸಲಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜೆ.ಆರ್. ಲೋಬೊ, ಇಲಾಖೆಯ ಆಯುಕ್ತ ಡಾ.ವಿಶ್ವನಾಥ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಜಿ.ಪಂ.ಸಿಇಒ ತುಳಸಿ ಮದ್ದಿನೇನಿ, ಇಎಸ್‌ಐ ಆಸ್ಪತ್ರೆಗಳ ನಿರ್ದೇಶಕಿ ಡಾ.ಶ್ರೀದೇವಿ, ಫ್ಯಾಕ್ಟರಿ ಆ್ಯಂಡ್ ಬಾಯ್ಲರ್ ಇಲಾಖೆಯ ನಿರ್ದೇಶಕ ರಾಮಚಂದ್ರ ಉಪಸ್ಥಿತರಿದ್ದರು.

Write A Comment