ಕನ್ನಡ ವಾರ್ತೆಗಳು

ಸರಣಿ ಅಪಘಾತ ಹಿನ್ನೆಲೆ : ಜಿಲ್ಲಾಧಿಕಾರಿಗಳ ನಿಯೋಗದಿಂದ ನಂತೂರು ಸರ್ಕಲ್ ಪರಿಶೀಲನೆ

Pinterest LinkedIn Tumblr

nanthur_acc_ins_1

ಮಂಗಳೂರು,ಮಾ.03: ನಂತೂರು ವೃತ್ತದಲ್ಲಿ ಕಳೆದ ವಾರ ಟಿಪ್ಪರ್- ಕಾರು- ಬೈಕ್ ನಡುವಿನ ಭೀಕರ ಸರಣಿ ಅಪಘಾತ ನಡೆದು ಮೂವರ ಮೃತ್ಯು, ಅವೈಜ್ಞಾನಿಕ ವೃತ್ತದ ಬಗ್ಗೆ ನಾಗರಿಕರ ಪ್ರತಿಭಟನೆ, ಪ್ರತಿಭಟನಾನಿರತರ ಮೇಲೆ ಪೊಲೀಸರ ಲಾಠಿ ಚಾರ್ಜ್ ಬಳಿಕ ಮೆಲ್ಲನೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಆದರೆ ಪದೇ ಪದೇ ಇಲ್ಲಿ ನಡೆಯುವ ಅಪಘಾತದ ಬಗ್ಗೆ ಇಲ್ಲಿವರೆಗೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಭರವಸೆ ನೀಡಿದ್ದಾರೆಯೇ ಹೊರತು ಯಾವೊಂದು ಪರಿಹಾರ ಕ್ರಮವನ್ನು ಕೈಗೊಂಡಿರಲಿಲ್ಲ. ಅಪಘಾತಗಳ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳು ಮತ್ತು ಅವೈಜ್ಞಾನಿಕ ವೃತ್ತದ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧಿಕಾರಿಗಳೊಂದಿಗೆ ಸೋಮವಾರ ನಂತೂರು ವೃತ್ತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

nanthur_acc_ins_2 nanthur_acc_ins_3

ನಂತೂರು ವೃತ್ತ ನಿರ್ಮಾಣ ಸರಿಯಾದ ರೀತಿಯಲ್ಲಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ತುರ್ತಾಗಿ ಅದನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು. ಮೇಲ್ಸೇತುವೆ ಪ್ರಸ್ತಾಪ ಕೈಬಿಟ್ಟ ಬಳಿಕ ಹೆದ್ದಾರಿ ಪ್ರಾಧಿಕಾರದ ಮೂಲಕ ಅಂಡರ್‌ಪಾಸ್ ಪ್ರಸ್ತಾಪ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

ಮಲ್ಲಿಕಟ್ಟೆ ಮೂಲಕ ನಂತೂರಿಗೆ ತೆರಳುವ ರಸ್ತೆಯ ಎಡ ಬದಿಯಲ್ಲಿರುವ ಒಂದು ಬಸ್ ನಿಲ್ದಾಣವನ್ನು ನಂತೂರು ವೃತ್ತದಿಂದ ಮೇಲಕ್ಕೆ ಕೆಪಿಟಿಗೆ ತೆರಳುವ ಹೆದ್ದಾರಿ ಬದಿಗೆ ಶಿಫ್ಟ್ ಮಾಡಿಸಲು ನಿರ್ಧರಿಸಲಾಗಿದೆ. ಅಲ್ಲದೆ ವೃತ್ತದಲ್ಲಿರುವ ಸಣ್ಣಪುಟ್ಟ ದೋಷಗಳನ್ನು ನಿವಾರಿಸಿ ಶೀಘ್ರದಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಬೇಕು ಎಂದು ಸಂಚಾರಿ ಪೊಲೀಸ್ ವಿಭಾಗಕ್ಕೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಡೀಸಿ ಸೂಚಿಸಿದರು.

nanthur_acc_ins_4 nanthur_acc_ins_5

ವೃತ್ತದಲ್ಲಿ ಸಂಚಾರದಲ್ಲಿ ಸಣ್ಣಪುಟ್ಟ ಬದಲಾವಣೆ ತರಲು ಯೋಚಿಸಿದ್ದು, ಕೆಪಿಟಿಯಿಂದ ಮೂಡುಬಿದಿರೆ, ಮೂಡುಬಿದಿರೆ ಕಡೆಯಿಂದ ಪಂಪ್‌ವೆಲ್ ಕಡೆಗೆ ಹಾಗೂ ಮಲ್ಲಿಕಟ್ಟೆಯಿಂದ ಕೆಪಿಟಿ ಕಡೆಗೆ ಫ್ರೀ ಲೆಫ್ಟ್ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ ಎಂದು ಸಂಚಾರಿ ವಿಭಾಗದ ಎಸಿಪಿ ಉದಯ್ ನಾಯಕ್ ಮಾಹಿತಿ ನೀಡಿದರು. ವೃತ್ತದ ಕೆಲವೆಡೆ ಹೂಳು ತುಂಬಿದ್ದು, ಅದನ್ನು ತಕ್ಷಣ ತೆರವುಗೊಳಿಸುತ್ತೇವೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತೆ ಹೆಪ್ಸಿಬಾ ರಾಣಿ ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಸ್ಥಳೀಯ ನಿವಾಸಿಗಳಾದ ವಸಂತ್ ಕುಮಾರ್ ಶೆಟ್ಟಿ, ಎ.ಜಿ.ಶರ್ಮ ಮೊದಲಾದವರು ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಭೂಮಿ ಕೊಟ್ಟರೂ ಇನ್ನೂ ಪರಿಹಾರ ಬಂದಿಲ್ಲ: ನಂತೂರಿನಲ್ಲಿ ಫ್ಲೈಓವರ್ ನಿರ್ಮಾಣ ಮಾಡುವ ಉದ್ದೇಶದಿಂದ ಸುಮಾರು 22 ಸೆಂಟ್ಸ್ ಜಾಗವನ್ನು ಸರಕಾರ ಸ್ವಾಧೀನಪಡಿಸಿಕೊಂಡಿದೆ. ಆದರೆ 10 ವರ್ಷ ಕಳೆದರೂ ಇದುವರೆಗೆ ಕೇವಲ 65 ಸಾವಿರ ರೂ. ಮಾತ್ರ ಪರಿಹಾರ ನೀಡಿದೆ. ಕೋಟ್ಯಂತರ ರೂ. ಮೌಲ್ಯದ ಜಾಗವನ್ನು ನಮ್ಮಿಂದ ಕಸಿದು ಯಾವುದೇ ಪರಿಹಾರ ನೀಡದೆ ವಂಚಿಸಲಾಗಿದೆ ಎಂದು ಸ್ಥಳೀಯ ನಿವಾಸಿ ಶಿವಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ಭರತ್‌ಲಾಲ್ ಮೀನ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭ 2 ಸೆಂಟ್ಸ್ ಜಾಗ ದಾನವಾಗಿ ನೀಡಿದ್ದೆ. ಆ ಬಳಿಕ ಪೊನ್ನುರಾಜ್ ಜಿಲ್ಲಾಧಿಕಾರಿ ಆಗಿದ್ದಾಗ ಫ್ಲೈ ಓವರ್ ನಿರ್ಮಾಣಕ್ಕೆಂದು 18 ಸೆಂಟ್ಸ್ ಜಾಗ ಸ್ವಾಧೀನಪಡಿಸಿ ಕೊಂಡರು. ಆದರೆ ಫ್ಲೈ ಓವರ್ ನಿರ್ಮಿಸದೆ, ನಮಗೆ ಪರಿಹಾರವನ್ನೂ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಅವರು ಅವಲತ್ತುಕೊಂಡರು.

ಸ್ಥಳೀಯರ ಆಕ್ರೋಶ: ನಂತೂರು ವೃತ್ತದಲ್ಲಿ ಸತತ ಅಪಘಾತಗಳು ನಡೆಯುತ್ತಿದ್ದರೂ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಸ್ಥಳೀಯರು ಅಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಡರ್‌ಪಾಸ್ ಅಥವಾ ಓವರ್ ಬ್ರಿಜ್ಡ್ ಕಾಮಗಾರಿಗಳಲ್ಲಿ ಯಾವುದಾದರೂ ಒಂದನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಹೆದ್ದಾರಿ ಪ್ರಾಕಾರವನ್ನು ಆಗ್ರಹಿಸಿದರು.

ಸರಣಿ ಅಪಘಾತಗಳ ಹಿನ್ನೋಟ…: 2014ರ ಮೇ 6ರಂದು ಬೆಳಗ್ಗೆ ನಂತೂರು ವೃತ್ತದಲ್ಲಿ ನಡೆದಿದ್ದ ಅಪಘಾತದಲ್ಲಿ ಎರಡು ಲಾರಿಗಳು ಒಂದರ ಮೇಲೊಂದು ಉರುಳಿ ಬಿದ್ದು ಭಾರಿ ಅನಾಹುತ ಸಂಭವಿಸಿತ್ತು. ಮರಳು ಸಾಗಾಟದ ಟಿಪ್ಪರ್ ಲಾರಿ ಮತ್ತು ಮಹಾರಾಷ್ಟ್ರದಿಂದ ಕೋಕಾಕೋಲಾ ಹೇರಿಕೊಂಡು ಕೇರಳ ಕಡೆಗೆ ಸಂಚರಿಸುತ್ತಿದ್ದ ಲಾರಿ ಸರ್ಕಲ್‌ನಲ್ಲಿ ಪರಸ್ಪರ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಘಟನೆಯಲ್ಲಿ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದರು.

2014ರ ಜೂ.13ರಂದು ಬೆಂಗಳೂರಿನ ಲಾರಿ ಬಿಕರ್ನಕಟ್ಟೆಯಿಂದ ನಂತೂರು ವೃತ್ತದ ಮೂಲಕ ಉಡುಪಿ ಕಡೆಗೆ ತೆರಳುತ್ತಿದ್ದ ಸಂದರ್ಭ ಉಡುಪಿ ಕಡೆಯಿಂದ ಕೇರಳ ಕಡೆಗೆ ಸಾಗುತ್ತಿದ್ದ ಗುಜರಾತ್ ಮೂಲದ ಲಾರಿ ಡಿಕ್ಕಿ ಹೊಡೆದು ಎರಡೂ ಲಾರಿಗಳು ವೃತ್ತದಲ್ಲಿ ಪಲ್ಟಿಯಾಗಿ ಬಿದ್ದಿತ್ತು.

2014ರ ನ.26ರಂದು ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ‘ನಿಶ್ಮಿತಾ’ ನಂತೂರು ವೃತ್ತದಲ್ಲಿ ಮೀನು ಸಾಗಾಟ ಮಾಡುತ್ತಿದ್ದ ಮಿನಿ ಲಾರಿಗೆ ಡಿಕ್ಕಿ ಹೊಡೆದು ಉರಳಿ ಬಿದ್ದು ಕೆಪಿಟಿ ಐಟಿಐ ವಿದ್ಯಾರ್ಥಿ ಉಮಾನಾಥ (18) ಹಾಗೂ ಗುರುಪುರ ನಿವಾಸಿ ಗಣೇಶ್ (23) ಮೃತಪಟ್ಟಿದ್ದರು.

ಇದೇ ಫೆ.27ರಂದು ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಒಬ್ಬ ಬೈಕ್ ಸವಾರ ಹಾಗೂ ಇಬ್ಬರು ಕಾರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಮಂಜೇಶ್ವರ ಆನೆಕಲ್ ನಿವಾಸಿ, ಕಾವೂರಿನ ಸರಕಾರ ಶಾಲೆಯ ಶಿಕ್ಷಕಿ ವೀಣಾ (40) ಹಾಗೂ ಪುತ್ರ ನಿತೇಶ್ (12) ಹಾಗೂ ಬೈಕ್ ಸವಾರ ಬದಿಯಡ್ಕ ನಾರಂಪಾಡಿ ನಿವಾಸಿ ಪ್ರೀತಂ ಪಿಂಟೋ (21) ಮೃತಪಟ್ಟು, ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಕೆಪಿಟಿಯಿಂದ ನಂತೂರು ಮೂಲಕ ಪಂಪ್‌ವೆಲ್‌ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸುಮಾರು 60 ಕೋಟಿ ರೂ. ಅಂದಾಜು ಮೊತ್ತದ ಅಂಡರ್ ಪಾಸ್ ಕಾಮಗಾರಿ ಮಾಡುವಂತೆ ಕೇಂದ್ರ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಪ್ರಸ್ತಾವನೆ ಕೇಂದ್ರ ಭೂ ಸಾರಿಗೆ ಸಚಿವಾಲಯದಲ್ಲಿದೆ. – ವಿಜಯ ಕುಮಾರ್, ರಾಷ್ಟ್ರೀಯ ಹೆದ್ದಾರಿ, ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕ

Write A Comment