ಕನ್ನಡ ವಾರ್ತೆಗಳು

ಮರಳು ಕಾರ್ಮಿಕರನ್ನು ಕಟ್ಟಡ ಕಾರ್ಮಿಕರಂದೇ ಪರಿಗಣಸಿ: ಕಾರ್ಮಿಕ ಸಚಿವರ ಸೂಚನೆ

Pinterest LinkedIn Tumblr

ಮಂಗಳೂರು, ಮಾ.02 : ನದಿತೀರಗಳಲ್ಲಿ ಮರಳು ಎತ್ತುವ ಕಾರ್ಮಿಕರನ್ನು ಸಹ ಕಟ್ಟಡ ನಿರ್ಮಾಣ ಕಾರ್ಮಿಕರಂದೇ ಪರಿಗಣಿಸಿ, ಅವರಿಗೆ ಸರಕಾರದಿಂದ ದೊರಕುವ ಎಲ್ಲಾ ಸವಲತ್ತುಗಳನ್ನು ಒದಗಿಸುವಂತೆ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿಯಿಂದ ಮರಳು ಎತ್ತುವ ಮತ್ತು ಲಾರಿಗಳಿಗೆ ಮರಳು ಲೋಡ್ ಮಾಡುವ ಕೆಲಸದಲ್ಲಿ ಸಾಕಷ್ಟು ಕಾರ್ಮಿಕರಿದ್ದಾರೆ. ಆದರೆ ಇವರಿಗೆ ಕಾರ್ಮಿಕ ಇಲಾಖೆಯಿಂದ ದೊರಕಬೇಕಾದ ಸವಲತ್ತುಗಳು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರಲ್ಲಿ ವಿಷಾಧ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಭಾಗದಲ್ಲಿ ಮರಳು ಎತ್ತುವಿಕೆಯಲ್ಲಿ ಹೆಚ್ಚಿನವರು ತೊಡಗಿಸಿಕೊಂಡಿರುತ್ತಾರೆ. ಕಟ್ಟಡ ನಿರ್ಮಾಣಕ್ಕೆ ಮರಳು ಅವಶ್ಯ ಇರುವುದರಿಂದ ಮರಳು ಕಾರ್ಮಿಕರನ್ನು ಕೂಡಾ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಎಂದೇ ಪರಿಗಣಿಸಿ, ಅವರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯ ಸೌಲಭ್ಯ ದೊರಕಿಸಿಕೊಡುವಂತೆ ಅವರು ತಿಳಿಸಿದರು.

ಉದ್ಯೋಗ ಮತ್ತು ತರಬೇತಿ ಇಲಾಖೆಯು ಐಟಿ‌ಐಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಿಸಬೇಕು. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಕರ ಕೊರತೆಯ ಸಮಸ್ಯೆ ಇರಬಾರದು ಎಂದು ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ೪೦ ಕೋಟಿ ರೂ. ವೆಚ್ಚದಲ್ಲಿ ಬಹು ನೈಪುಣ್ಯ ಕೇಂದ್ರ ಸ್ಥಾಪಿಸಲು ಈಗಾಗಲೇ ಒಂದು ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಕೇಂದ್ರಕ್ಕೆ 40  ಲಕ್ಷ ರೂ.ಗಳ ಉಪಕರಣ ಈಗಾಗಲೇ ಬಂದಿರುತ್ತದೆ. ತಾತ್ಕಾಲಿಕವಾಗಿ ಮಂಗಳೂರಿನ ಮಹಿಳಾ ಐಟಿ‌ಐ ಕೇಂದ್ರದಲ್ಲಿ ಇದು ಕಾರ್ಯಾಚರಿಸಲಿದೆ. ಮುಂದೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಕಾರ್ಮಿಕ ಸಚಿವರು ತಿಳಿಸಿದರು.

ಸಭೆಯಲ್ಲಿ ಶಾಸಕ ಜೆ.ಆರ್. ಲೋಬೋ, ಕಾರ್ಮಿಕ ಇಲಾಖೆ ಆಯುಕ್ತ ಡಾ.ವಿಶ್ವನಾಥ್, ಇ‌ಎಸ್‌ಐ ಇಲಾಖೆ ನಿರ್ದೇಶಕಿ ಡಾ.ಶ್ರೀದೇವಿ, ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ್ ಮತ್ತಿತರರು ಇದ್ದರು.

Write A Comment