ಕನ್ನಡ ವಾರ್ತೆಗಳು

ನಂತೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ : ಒರ್ವ ಮಹಿಳೆ ಸಹಿತಾ ಮೂವರು ಸಾವು – ಮೂವರು ಗಂಭೀರ (Updated)

Pinterest LinkedIn Tumblr
nantoor_accident_pic_1
ಮಂಗಳೂರು, ಫೆ.27 : ಟಿಪ್ಪರ್ ಲಾರಿ, ಆಲ್ಟೋ ಕಾರ್ ಹಾಗೂ ಬೈಕ್ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಾಯಂಕಾಲ ನಗರದ ನಂತೂರ್ ಸರ್ಕಲ್ ಬಳಿ ಸಂಭವಿಸಿದೆ.
nantoor_accident_pic_2 nantoor_accident_pic_3 nantoor_accident_pic_4
ಘಟನೆ ವಿವರ :
ನವಯುಗ ಕನ್ಟ್ರಕ್ಷನ್ ಸಂಸ್ಥೆಗೆ ಸೇರಿದೆ ಎನ್ನಲಾದ ಟಿಪ್ಪರ್  ಡಾಮಾರು ತುಂಬಿಸಿಕೊಂಡು ಕೆ.ಪಿ.ಟಿ ಕಡೆಯಿಂದ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದ ಸಂದರ್ಭ ನಂತೂರು ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕ್ರೇನ್ ಒಂದನ್ನು ತಪ್ಪಿಸಲು ಹೋಗಿ ಅಲ್ಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.  ಬಳಿಕ ಚಾಲಕನ ನಿಯಂತ್ರಣ ತಪ್ಪಿದ್ದ ಟಿಪ್ಪರ್, ನಂತೂರ್ ಸರ್ಕಲ್‌ನಲ್ಲಿ ಟ್ರಾಫಿಕ್ ಸಿಗ್ನಲ್‌ಗೆ ಕಾಯುತ್ತಿದ್ದ ಆಲ್ಟೋ ಕಾರಿನ ಮೇಲಿನಿಂದ ಚಲಿಸಿ, ಕಾರಿನ ಮುಭಾಗದಲ್ಲಿ ನಿಂತಿದ್ದ ಪಲ್ಸರ್ ಬೈಕಿಗೆ ಡಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ಆಲ್ಟೋ ಕಾರಿನಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದು, ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಪತಿ ಹಾಗೂ ಇಬ್ಬರೂ ಮಕ್ಕಳು ಗಂಭೀರಾ ಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ದಾಖಾಲಿಸಲಾಗಿದೆ. ಇವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.ಮಾತ್ರವಲ್ಲದೇ ಪಲ್ಸರ್ ಬೈಕಿನಲ್ಲಿದ್ದ ಪ್ರಯಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲು ಪಡಿಸಿ, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಟಿಪ್ಪರ್‌ನ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಟಿಪ್ಪರ್ ಚಾಲಕ ಅಪಘಾತ ನಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.
nantoor_accident_pic_5 nantoor_accident_pic_6 nantoor_accident_pic_7 nantoor_accident_pic_8 nantoor_accident_pic_9 nantoor_accident_pic_10 nantoor_accident_pic_11 nantoor_accident_pic_12 nantoor_accident_pic_13 nantoor_accident_pic_14 nantoor_accident_pic_15 nantoor_accident_pic_16
ಅಪಘಾತದಲ್ಲಿ ಆಲ್ಟೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪೊಲೀಸರು ಸ್ಥಳಿಯರ ಸಹಾಯದಿಂದ ಕ್ರೇನ್ ಮೂಲಕ ಕಾರನ್ನು ಸ್ಥಳಂತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
Updated :  ಒರ್ವ ಮಹಿಳೆ ಸಹಿತಾ ಮೂವರು ಸಾವು – ಮೂವರು ಗಂಭೀರ

ನಂತೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದಾರೆ ಎಂದು ಸಂಚಾರಿ ವಿಭಾಗದ ಎಸಿಪಿ (ಟ್ರಾಫಿಕ್) ಉದಯ ನಾಯಕ್ ತಿಳಿಸಿದ್ದಾರೆ.

ಮೃತರನ್ನು ಆಲ್ಟೋ ಕಾರಿನಲ್ಲಿದ್ದ ಮಹಿಳೆ ವೀಣಾ (40) ಮತ್ತು ಅವರ ಮಗ ನಿತೇಶ್ (13) ಹಾಗೂ ಪಲ್ಸರ್ ಬೈಕ್ ಚಲಾಯಿಸುತ್ತಿದ್ದ ಕಾಸರಗೋಡು ಮೂಲದ ವಿದ್ಯಾರ್ಥಿ ಪ್ರೀತಂ ಪಿಂಟೊ ( 21) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಲ್ಟೋ ಕಾರಿನಲ್ಲಿದ್ದ ಕೃಷ್ಣ ( 45) ಮತ್ತು ಅವರ ಮಗಳು ನಿಖಿತಾ ( 10) ಎಂದು ಗುರುತಿಸಲಾಗಿದೆ. ಪಲ್ಸರ್ ಬೈಕಿನಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದ ಹುಡುಗಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಜೊತೆಗೆ ಕಾಲು ತುಂಡರಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.
ಕೃಷ್ಣ ಅವರ ಪತ್ನಿ ವೀಣಾ ಅವರು ಕೂಳೂರು ಬಳಿಯ ಪಂಜಿಮೊಗರು ವಿದ್ಯಾನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟೀಚರ್ ಆಗಿ ಕರ್ತವ್ಯ ನಿರ್ವಾಹಿಸುತ್ತಿದ್ದರು. ಕೃಷ್ಣ ಅವರು ಪಣಂಬೂರು ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾಧ್ಯಾರಾಗಿದ್ದಾರೆ.
ಶನಿವಾರ ಶಾಲೆಗೆ ರಜೆ ಇರುವ ಕಾರಣ ಶಿಕ್ಷಕ ದಂಪತಿಗಳು ತಮ್ಮ ಮಕ್ಕಳಾದ ನಿತೀಶ್ ಮತ್ತು ನಿಖಿತಾ ಜತೆಗೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಕನ್ಯಾನ ಕರೋಪಾಡಿಯ ವೀಣಾ ಅವರ ಮನೆಗೆ ಹೊರಟ್ಟಿದ್ದರು. ಕೃಷ್ಣ ದಂಪತಿ ತೊಕ್ಕೊಟ್ಟಿನಲ್ಲಿ ಸ್ವಂತ ಮನೆ ನಿರ್ಮಿಸಿದ್ದು, ಒಂದು ತಿಂಗಳ ಹಿಂದೆ ಅಲ್ಲಿಗೆ ಸ್ಥಳಾಂತರಗೊಂಡಿದ್ದರು.ಪರಾರಿಯಾಗಿದ್ದ ಲಾರಿ ಚಾಲಕ ರಾಜ್‌ಕುಮಾರ್ ಅವರನ್ನು ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

****************************************************************

ಅಪಘಾತದ ಸಂಪೂರ್ಣ ವಿವರ :

ಮಂಗಳೂರು: ನಗರದ ನಂತೂರು ವೃತ್ತದಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಒಬ್ಬ ಬೈಕ್ ಸವಾರ ಹಾಗೂ ಇಬ್ಬರು ಕಾರು ಪ್ರಯಾಣಿಕರು ಮೃತಪಟ್ಟಿದ್ದಾರೆ.

ಮಂಜೇಶ್ವರ ಆನೆಕಲ್ ನಿವಾಸಿ, ಕಾವೂರಿನ ಸರಕಾರಿ ಶಾಲೆಯ ಶಿಕ್ಷಕಿ ವೀಣಾ (40), ಪುತ್ರ ನಿತೇಶ್ (12) ಹಾಗೂ ಬೈಕ್ ಸವಾರ ಉಳ್ಳಾಲ ಮೂಲದ ಪ್ರೀತಂ (21) ಮೃತಪಟ್ಟವರು. ಕಾರು ಚಾಲಕ ಮೃತಪಟ್ಟ ವೀಣಾ ಅವರ ಪತಿ. ಪಣಂಬೂರು ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾಧ್ಯಾಯ ಕೃಷ್ಣ (45) ಅವರ ಪುತ್ರಿ ನಿಕಿತಾ (9) ಹಾಗೂ ಬೈಕ್ ಸಹ ಸವಾರೆ ಶ್ವೇತಾ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತ ನಡೆದದ್ದು ಹೇಗೆ ?: ಡಾಮರ್ ಸಾಗಿಸುತ್ತಿದ್ದ ಎನ್‌ಸಿಸಿ ಕಂಪನಿಗೆ ಸೇರಿದ ಉಡುಪಿ ನೋಂದಣಿ ಟಿಪ್ಪರ್ ಲಾರಿ ಸಂಜೆ 5.15ರ ಸುಮಾರಿಗೆ ಕೆಪಿಟಿ ಮೂಲಕ ನಂತೂರು ವೃತ್ತದ ಕಡೆಗೆ ಸಾಗುತ್ತಿತ್ತು. ಈ ಸಂದರ್ಭ ಬೃಹತ್ ಕ್ರೇನ್ ಒಂದು ವೃತ್ತದಲ್ಲಿ ಟಯರ್ ಪಂಕ್ಚರ್ ಆಗಿ ನಿಂತಿತ್ತು. ಹಿಂದಿನಿಂದ ಬಂದ ಟಿಪ್ಪರ್ ಲಾರಿ ಏಕಾಏಕಿ ಬ್ರೇಕ್ ವೈಫಲ್ಯಕ್ಕೀಡಾಗಿದ್ದರಿಂದ ನಿಂತಿದ್ದ ಕ್ರೇನ್‌ಗೆ ಡಿಕ್ಕಿಯಾಗಿ ಅಲ್ಲಿಂದ ಎಡಬದಿಯ ಲೈಟ್‌ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಬಳಿಕ ಟಿಪ್ಪರ್ ಲಾರಿ ಚಾಲಕ ಲಾರಿಯನ್ನು ವೃತ್ತದಲ್ಲೇ ಮಲ್ಲಿಕಟ್ಟೆ ರಸ್ತೆ ಕಡೆಗೆ ತಿರುಗಿಸಲು ಯತ್ನಿಸಿದ. ಈ ಸಂದರ್ಭ ಲಾರಿ ಚಾಲಕನ ನಿಯಂತ್ರಣ ತಪ್ಪಿ ವೃತ್ತದಲ್ಲೇ ನಿಧಾನವಾಗಿ ಚಲಿಸುತ್ತಿದ್ದ ಕಾರು ಮತ್ತು ಬೈಕ್ ಮೇಲೆ ಉರುಳಿ ಬಿದ್ದಿದೆ. ಟಿಪ್ಪರ್‌ನಲ್ಲಿ ಡಾಮರ್ ತುಂಬಿದ್ದರಿಂದ ಕಾರು ಅಪ್ಪಚ್ಚಿಯಾಗಿದೆ. ಬೈಕ್ ಕೂಡಾ ಲಾರಿ ಅಡಿಗೆ ಬಿದ್ದಿದೆ.

ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಲಾರಿ ಅಡಿಗೆ ಸಿಲುಕಿ ಒದ್ದಾಡುತ್ತಿದ್ದರು. ಅವರಲ್ಲಿ ವೀಣಾ ಹಾಗೂ ನಿತೇಶ್ ಸ್ಥಳದಲ್ಲೇ ಮೃತಪಟ್ಟರೆ ಬೈಕ್ ಸವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಅಪಘಾತ ನಡೆದ ಬಳಿಕ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಿ ಒಳಗಡೆ ಸಿಲುಕಿದ್ದವರನ್ನು ಹೊರಗಡೆ ತೆಗೆಯಲಾಯಿತು. ಕೃಷ್ಣ ಅವರ ಮಗ ಮೃತಪಟ್ಟ ನಿತೇಶ್ ಪಣಂಬೂರು ಕೇಂದ್ರೀಯ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿ ಹಾಗೂ ಪುತ್ರಿ ನಿಕಿತಾ ಇದೇ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ.

ಹೆದ್ದಾರಿ ಸಂಚಾರ ಅಸ್ತವ್ಯಸ್ತ: ಅಪಘಾತ ನಡೆದ ಬಳಿಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ನಗರದ ಪ್ರಮುಖ ವೃತ್ತವಾದ್ದರಿಂದ ಅಲ್ಲಿ ಉಂಟಾದ ಟ್ರಾಫಿಕ್ ಜಾಮ್ ಇಡೀ ನಗರಕ್ಕೆ ತಟ್ಟಿತ್ತು. ಪಂಪ್‌ವೆಲ್, ಕೆಪಿಟಿ, ಬಿಕರ್ನಕಟ್ಟೆ, ಮಲ್ಲಿಕಟ್ಟೆ ಮುಂತಾದ ಪ್ರದೇಶಗಳಲ್ಲಿ ವಿಪರೀತ ವಾಹನ ದಟ್ಟಣೆ ಕಂಡು ಬಂದಿತ್ತು.

ನಂತೂರಿನಲ್ಲಿ ಅಪಘಾತ ನಡೆದ ವಾಹನಗಳನ್ನು ತೆರವು ಮಾಡುವ ಸಂದರ್ಭ ನಾಲ್ಕೂ ಬದಿಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕಿಲೋ ಮೀಟರ್ ಉದ್ದಕ್ಕೆ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಸಂಚಾರಿ ಪೊಲೀಸರೊಂದಿಗೆ ಹತ್ತಾರು ಮಂದಿ ಸಾರ್ವಜನಿಕರು ಸುಗಮ ಸಂಚಾರಕ್ಕೆ ಶ್ರಮಿಸಿದರು. ನಾಲ್ಕನೇ ಭೀಕರ ಅಪಘಾತ: ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ನಂತೂರು ವೃತ್ತ ಒಂದೇ ವರ್ಷದಲ್ಲಿ ನಾಲ್ಕು ಭೀಕರ ರಸ್ತೆ ಅಪಘಾತಗಳನ್ನು ಕಂಡಿದೆ.

2014ರ ಮೇ 6ರಂದು ಬೆಳ್ಳಂಬೆಳಗೆ ನಂತೂರು ವೃತ್ತದಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದು ಒಂದರ ಮೇಲೊಂದು ಉರುಳಿ ಬಿದ್ದು ಭಾರಿ ಅನಾಹುತ ಸಂಭವಿಸಿತ್ತು. ಮರಳು ಸಾಗಾಟದ ಟಿಪ್ಪರ್ ಲಾರಿ ಹಾಗೂ ಮಹಾರಾಷ್ಟ್ರದಿಂದ ಕೋಕಾಕೋಲಾ ಹೇರಿಕೊಂಡು ಕೇರಳ ಕಡೆಗೆ ಸಂಚರಿಸುತ್ತಿದ್ದ ಲಾರಿ ಸರ್ಕಲ್‌ನಲ್ಲಿ ಪರಸ್ಪರ ಡಿಕ್ಕಿ ಹೊಡೆದಿತ್ತು.

ಇದಾದ ಬಳಿಕ 2014ರ ಜೂ.13ರಂದು ಬೆಂಗಳೂರಿನ ಲಾರಿ ಬಿಕರ್ನಕಟ್ಟೆಯಿಂದ ನಂತೂರು ವೃತ್ತದ ಮೂಲಕ ಉಡುಪಿ ಕಡೆಗೆ ತೆರಳುತ್ತಿದ್ದ ಸಂದರ್ಭ ಉಡುಪಿ ಕಡೆಯಿಂದ ಕೇರಳ ಕಡೆಗೆ ಸಾಗುತ್ತಿದ್ದ ಗುಜರಾತ್ ಮೂಲದ ಲಾರಿ ಡಿಕ್ಕಿ ಹೊಡೆದಿತ್ತು.

ಆ ಬಳಿಕ 2014ರ ನ.26ರಂದು ವೃತ್ತದಲ್ಲಿ ಮತ್ತೊಂದು ದುರಂತ ನಡೆದು ಇಬ್ಬರು ಯುವಕರು ಬಲಿಯಾಗಿದ್ದರು. ನಾರಾವಿಯಿಂದ ಮೂಡುಬಿದಿರೆ ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ‘ನಿಶ್ಮಿತಾ’ ನಂತೂರು ವೃತ್ತದಲ್ಲಿ ಮೀನು ಸಾಗಾಟ ಮಾಡುತ್ತಿದ್ದ ಮಿನಿ ಲಾರಿಗೆ ಡಿಕ್ಕಿ ಹೊಡೆದು ಉರಳಿ ಬಿದ್ದ ಪರಿಣಾಮ ಕೆಪಿಟಿ ಐಟಿಐ ವಿದ್ಯಾರ್ಥಿ ಉಮಾನಾಥ (18) ಹಾಗೂ ಗುರುಪುರ ನಿವಾಸಿ ಗಣೇಶ್ (23) ಧಾರುಣವಾಗಿ ಮೃತಪಟ್ಟಿದ್ದರು. ಇದೀಗ ನಾಲ್ಕನೇ ಭೀಕರ ದುರಂತ ನಡೆದಿದ್ದು, ಮೂವರು ಅಮಾಯಕರ ಜೀವವನ್ನು ಅವೈಜ್ಞಾನಿಕ ವೃತ್ತ ಬಲಿ ಪಡೆದಿದೆ.

Write A Comment