ಮಂಗಳೂರು,ಫೆ.27: ದಕ್ಷಿಣ ಕನ್ನಡ ಜಿಲ್ಲೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಗಳ ಪ್ರಗತಿಯಲ್ಲಿ ಹೆಚ್ಚಿನ ಸಾಧನೆ ಮಾಡಿದೆ ನಿಜ ಆದರೆ ಭ್ರೂಣ ಹತ್ಯೆ ತಡೆ, ಸ್ತ್ರೀ ಶಕ್ತಿ ಗುಂಪುಗಳಿಗೆ ತರಬೇತಿ, ಬಾಲ ನ್ಯಾಯ ಮಂಡಳಿ ಪ್ರಕರಣ ವಿಲೇವಾರಿ ತೃಪ್ತಿಕರವಾಗಿ ನಿರ್ವಹಿಸಿಲ್ಲ. ಇದನ್ನು ಕಾಳಜಿಯಿಂದ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ ಎಚ್ಚರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಗುಡ್ಡಗಾಡು ಹಾಗೂ ನಕ್ಸಲ್ ಪ್ಯಾಕೇಜ್ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ ಸ್ಥಾಪನೆ ಕುರಿತ ಪ್ರಸ್ತಾಪ ಇತ್ಯರ್ಥ ಮಾಡಲಾಗುವುದು.
ಅನಿರೀಕ್ಷಿತ ಭೇಟಿ ನೀಡಿ: ಭ್ರೂಣ ಹತ್ಯೆ ಮಾಡುವುದಿಲ್ಲ ಎಂದು ಎಲ್ಲ ಕ್ಲಿನಿಕ್‌ಗಳಲ್ಲೂ ಬೋರ್ಡ್ ಇದ್ದೇ ಇರುತ್ತದೆ. ನೀವು ಅಷ್ಟಕ್ಕೆ ತೃಪ್ತಿಪಡಬೇಕಾಗಿಲ್ಲ ಈ ಬಗ್ಗೆ ದಕ್ಷಿಣ ಕನ್ನಡದಿಂದಲೇ ಹೆಚ್ಚು ದೂರು ಬರುತ್ತಿದೆ. ಗಂಡು- ಹೆಣ್ಣಿನ ಅನುಪಾತವೂ 30 ವರ್ಷದಲ್ಲಿ 40ರಷ್ಟು ಕಡಿಮೆಯಾಗಿದೆ. ಆದ್ದರಿಂದ ಅನಿರೀಕ್ಷಿತ ಭೇಟಿ ನೀಡಿ ಒಳಗೆ ಏನು ನಡೆಯುತ್ತಿದೆ ಎಂದು ಖಾತ್ರಿಪಡಿಸಿಕೊಳ್ಳಿ ಎಂದು ಅಕಾರಿಗಳಿಗೆ ಸಚಿವರು ಸೂಚಿಸಿದರು.
ಹೊಸ ಉದ್ಯಮಶೀಲತೆ ಬರಲಿ: 12 ವರ್ಷದ ಹಿಂದೆ ಸ್ಥಾಪನೆ ಆಗಿರುವ ಸ್ತ್ರೀಶಕ್ತಿ ಗುಂಪುಗಳಿಗೆ ಕಾಲ ಕಾಲಕ್ಕೆ ಅಗತ್ಯ ತರಬೇತಿ ನೀಡಬೇಕು. ಇಲ್ಲಿ ಆ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಜಗತ್ತು ಬದಲಾಗುತ್ತಿದ್ದು, ಮಹಿಳೆಯರಿಗೆ ಹೊಸ ಉದ್ಯಮಶೀಲತೆ ಬಗ್ಗೆ ತರಬೇತಿ ನೀಡುವ ಮೂಲಕ ಆರ್ಥಿಕ, ಸಾಮಾಜಿಕ ಮಟ್ಟ ಇನ್ನಷ್ಟು ಹೆಚ್ಚಿಸಲು ಸಹಾಯ ಒದಗಿಸಬೇಕು ಎಂದು ಸಚಿವರು ಹೇಳಿದರು.
ಬಾಲ್ಯ ವಿವಾಹ ತಡೆಹಿಡಿದ ಪ್ರಕರಣದ ಬಗ್ಗೆ ಉಲ್ಲೇಖಿಸಿದ ಸಚಿವರು, ಈ ವರ್ಷ 25 ಪ್ರಕರಣ ತಡೆ ಹಿಡಿಯಲಾಗಿದೆ ಎಂದರೆ ಅಕಾರಿಗಳು ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂದರ್ಥ. ಆದರೆ, ಬಾಲ್ಯ ವಿವಾಹ ನಡೆಯಲು ಕಾರಣ ಏನು ಎಂದು ಪತ್ತೆ ಹಚ್ಚಿ. ಇದರ ವಿರುದ್ಧ ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಇಲಾಖೆಯ ಶೇ.90ರಷ್ಟು ಬಜೆಟ್ ಬಳಸಿಕೊಳ್ಳಲಾಗಿದೆ, ವರ್ಷಾಂತ್ಯಕ್ಕೆ ಶೇ.100 ಸಾಧನೆ ಮಾಡುವ ನಿರೀಕ್ಷೆ ಇದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಇಲ್ಲಿ ಎಲ್ಲ ಅಕಾರಿಗಳು ಏಕತೆಯಿಂದ ಕೆಲಸ ಮಾಡುತ್ತಿದ್ದು, ಶಿಕ್ಷಣ, ಜಾಗೃತಿಯಿಂದ ಹೆಚ್ಚಿನ ಸಾಧನೆ ನಡೆಯುತ್ತಿದೆ.
ಲೈಂಗಿಕ ಅಲ್ಪಸಂಖ್ಯಾತರಿಗೆ ನಿಯಮ: ರಾಜ್ಯದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಪ್ರತ್ಯೇಕ ನಿಯಮ ರೂಪಿಸಲಾಗುತ್ತಿದೆ. ಅದಕ್ಕಾಗಿ ಎಲ್ಲ ಇಲಾಖೆಗಳಿಂದ ಅಭಿಪ್ರಾಯ ಕೇಳಿದ್ದು, ಹೆಚ್ಚಿನವರು ಸ್ಪಂದಿಸಿಲ್ಲ. ಇನ್ನೊಮ್ಮೆ ನೆನಪಿನೋಲೆ ಕಳುಹಿಸಲಾಗುವುದು. ಮತ್ತೂ ಸ್ಪಂದಿಸದಿದ್ದರೆ ನಾವೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವೆ ಉಮಶ್ರೀ ಸುದ್ದಿಗಾರರಿಗೆ ತಿಳಿಸಿದರು.
ರಂಗ ಮಂದಿರ ಪ್ರಸ್ತಾವನೆ: ಮಂಗಳೂರಿನಲ್ಲಿ ರಂಗ ಮಂದಿರ ನಿರ್ಮಾಣ ಅತಿ ಅಗತ್ಯ. ಇಲ್ಲಿಗೆ ಬಂದ ಬಳಿಕವಷ್ಟೇ ರಂಗ ಮಂದಿರ ಇಲ್ಲದಿರುವ ಬಗ್ಗೆ ಮಾಹಿತಿ ಲಭಿಸಿತು. ಜಮೀನು ಲಭ್ಯವಿದ್ದು, ಪ್ರಸ್ತಾವನೆ ಸಲ್ಲಿಸಿದರೆ, ನಿಮಿಷದಲ್ಲೇ ಮಂಜೂರಾತಿ ಕೊಡುತ್ತೇನೆ ಎಂದು ಸಚಿವರು ಹೇಳಿದಾಗ, ಪ್ರಸ್ತಾವನೆ ಹಣಕಾಸು ಇಲಾಖೆ ಬಳಿ ಇದೆ ಎಂದು ಡಿಸಿ ಎ.ಬಿ.ಇಬ್ರಾಹಿಂ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯಿತಿ ಸಿಇಒ ತುಳಸಿ ಮದ್ದಿನೇನಿ, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎನ್.ವಿಜಯಪ್ರಕಾಶ್, ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ನಿರ್ದೇಶಕ ಜಯಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೇಂದ್ರ ಕಚೇರಿ ಅಕಾರಿ ಬಿಂದು ಉಪಸ್ಥಿತರಿದ್ದರು.