ಕನ್ನಡ ವಾರ್ತೆಗಳು

ವಾಹನಗಳ ನಂಬರ್ ಪ್ಲೇಟ್ ಪರಿಶೀಲನೆ – ಸಂಖ್ಯೆ ಸರಿಯಿಲ್ಲದಿದ್ದರೆ ದಂಡ.

Pinterest LinkedIn Tumblr

numer_platr_chkeing

ಬೆಂಗಳೂರು,ಫೆ.26  : ನಿಮ್ಮ ವಾಹನದ ನಂಬರ್ ಪ್ಲೇಟ್ ಮೇಲೆ ಹೆಸರು ಅಥವಾ ಮತ್ತಾವುದೋ ಚಿತ್ರ ಬರೆಸಿದ್ದರೆ, ವಾಹನದ ಸಂಖ್ಯೆಯನ್ನು ಸರಿಯಾಗಿ ಬರೆಸಿಲ್ಲದಿದ್ದರೆ ದಂಡ ತೆರಬೇಕಾಗುತ್ತದೆ ಎಚ್ಚರ. ಕೇಂದ್ರ ಮೋಟಾರು ವಾಹನ ಕಾಯಿದೆ ನಿಯಮ 50 ಹಾಗೂ 51ನ್ನು ಮತ್ತಷ್ಟು ಬಿಗಿಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಬುಧವಾರ ವಾಹನಗಳ ಮೇಲೆ ಹಠಾತ್ ದಾಳಿ ಮಾಡುವ ಮೂಲಕ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸಾರಿಗೆ ಇಲಾಖೆ ಜಂಟಿ ಆಯುಕ್ತ ನರೇಂದ್ರ ಹೋಲ್ಕರ್ ಹಾಗೂ ತಂಡ ಬೆಳಗ್ಗೆ 7 ಗಂಟೆಯಿಂದ ಅರಮನೆ ರಸ್ತೆ, ಕಾವೇರಿ ಭವನ, ವಿಧಾನ ಸೌಧ, ಕೆ.ಜಿ.ರಸ್ತೆ ಸೇರಿದಂತೆ ನಗರದ ಹಲವೆಡೆ ವಾಹನಗಳನ್ನು ತಪಾಸಣೆಗೊಳಪಡಿಸಿದರು. ಸರಿಯಾಗಿ ನಂಬರ್ ಬರೆಸದ, ನಂಬರ್ ಪ್ಲೇಟ್ ಮೇಲೆ ಹೆಸರು ಬರೆಸಿ ಕಾಯ್ದೆ ಉಲ್ಲಂಘಿಸಿದ ಎಲ್ಲ ರೀತಿಯ ಸುಮಾರು 300 ವಾಹನಗಳು ಸಿಕ್ಕಿಬಿದ್ದಿದ್ದು, ಚಾಲಕರ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸಲಾಗಿದೆ.

ತ್ರಿಕೋನಾಕಾರದ ನಂಬರ್ ಪ್ಲೇಟ್ ಗಳು, ಅಕ್ಷರಗಳನ್ನು ಸಣ್ಣದಾಗಿ ಬರೆಸಿ ಸಂಖ್ಯೆ ದೊಡ್ಡದಾಗಿ ಬರೆಸಿರುವುದು, ಬಾಸ್ ಎಂದು ಬರೆಸಿರುವುದು ಸೇರಿದಂತೆ ವಿಚಿತ್ರ, ವಿಕಾರವಾಗಿ ನಂಬರ್ ಪ್ಲೇಟ್ ಗಳ ಮೇಲೆ ಸಂಖ್ಯೆ, ಹೆಸರು ಬರೆಸಿರುವುದನ್ನು ತೆಗೆಸುವಂತೆ ಅವರಿಗೆ ಎಚ್ಚರಿಕೆ ನೀಡಲಾಗಿದೆ.ಇನ್ನು ಎಲ್ಲ ನಂಬರ್ ಪ್ಲೇಟ್ ಗಳ ಮೇಲಿನ ನಂಬರ್ ಒಂದೇ ರೀತಿ ಇರುವಂತೆ ಒಂದು ವ್ಯವಸ್ಥೆ ಜಾರಿಗೆ ತರುವ ಪದಟಛಿತಿ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಆ ಬಗ್ಗೆ ಸದ್ಯದಲ್ಲೇ ಏನೂ ಹೇಳಲಾಗುವುದಿಲ್ಲ ಎಂದು ಇಲಾಖೆ ಆಯುಕ್ತ ರಾಮೇಗೌಡ ತಿಳಿಸಿದ್ದಾರೆ.

ಬುಧವಾರ ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ವೇಳೆ ಕೇಂದ್ರ ಸರ್ಕಾರದ ಇಲಾಖೆಯೊಂದು ಹೊರಗುತ್ತಿಗೆ ಪಡೆದಿದ್ದ ವಾಹನದ ಮೇಲೆ ಅಶೋಕ ಚಕ್ರ ಹಾಗೂ ಕೇಂದ್ರ ಸರ್ಕಾರದ ವಾಹನ ಎಂದು ಬರೆಸಲಾಗಿತ್ತು. ಅಶೋಕ ಚಕ್ರದ ಚಿಹ್ನೆಯನ್ನುಹಾಕಲಾಗಿತ್ತು. ಅದನ್ನು ಸಂವಿಧಾನದಡಿ ಬರುವ ಗಣ್ಯ ವ್ಯಕ್ತಿಗಳು, ರಾಷ್ಟ್ರಪತಿ ಹಾಗೂ ರಾಜ್ಯಪಾಲರ ವಾಹನಗಳ ಮೇಲೆ ಮಾತ್ರ ಬಳಸಲಾಗುತ್ತದೆ. ಈ ಸಂಬಂಧ ಚಿಹ್ನೆ ದುರ್ಬಳಕೆ ಮಾಡಿಕೊಂಡಿರುವ ಆರೋಪದಡಿ ವಾಹನ ಮಾಲೀಕನ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದರು.

1 Comment

Write A Comment