ಮಂಗಳೂರು,ಫೆ.26 : ಕೆ.ಸಿ. ರೋಡ್ ನಲ್ಲಿ ನಡೆದ ಅಹಿತಕರ ಘಟನೆಯ ಬೆನ್ನಿಗೇ ಇಂದು ಬೆಳಗಿನ ಜಾವ ತೊಕ್ಕೊಟ್ಟು ಜಂಕ್ಷನ್‍ನಲ್ಲಿಯ ರಸ್ತೆಬದಿಯ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. 13 ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮಗೊಂಡಿವೆ. ಇದರಿಂದಾಗಿ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಉಳ್ಳಾಲ ಪರಿಸರವಿಡೀ ಬೂದಿ ಮುಚ್ಚಿದ ಕೆಂಡದಂತಿದ್ದು, ಇದು ಮಾ.1ರಂದು ನಗರದಲ್ಲಿ ಹಿಂದು ಸಮಾಜೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸರ ತಲೆ ಕೆಡಿಸಿದೆ. ಉಳ್ಳಾಲದಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಮೀಸಲು ಪೊಲೀಸರನ್ನು ನಿಯೋಜಿಸಲಾಗಿವೆ.
ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಿದ್ದಾರೆ.
ಇಂದು ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ರೈಲ್ವೆ ಹಳಿಗಳ ಸಮೀಪದ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿಯಿಟ್ಟು ಅಟ್ಟಹಾಸ ಮೆರೆದಿದ್ದಾರೆ. ಇದರಿಂದಾಗಿ ಇರ್ಫಾನ್ ಅವರ ಪ್ಲಾಸ್ಟಿಕ್, ಐಡಾ ಬಾಯಿ ಮತ್ತು ಇಬ್ರಾಹಿಂ ಅವರ ತರಕಾರಿ, ಭಗವಾನದಾಸ್‍ರ ಜಿನಸಿ, ರಫೀಕ್‍ರ ಚಪ್ಪಲಿ , ಮೋನು ಅವರ ಒಣಮೀನು, ಮುಸ್ತಾಫರ ಆಟದ ಸಾಮಾನುಗಳ, ಇಬ್ರಾಹಿಂ ಅವರ ಹೂವಿನ, ಲತೀಫ್ ಮತ್ತು ಮನ್ಸೂರ್ ಅವರ ಜಿನಸಿ, ಅಝೀಝ್‍ರ ಬಟ್ಟೆ, ಬಾವಾರ ತರಕಾರಿ, ಐಡಾ ಬಾಯಿಯವರ ಹೂವಿನ ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಅಂಗಡಿಗಳಿಗೆ ಬೆಂಕಿ ಹಚ್ಚಿದ್ದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದರು. ಅವರು ಬರುವಷ್ಟರಲ್ಲಿ 13 ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಅದರೊಳಗಿದ್ದ ಸೊತ್ತುಗಳು ನಾಶವಾಗಿರುವುದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







