ಕನ್ನಡ ವಾರ್ತೆಗಳು

ಕಾಣೆಯಾಗಿದ್ದ ಮುಂಬಯಿ ರಾಮದಾಸ್ ಮಂಗಳೂರಿನ ಬೋಳಾರದಲ್ಲಿ ಪತ್ತೆ

Pinterest LinkedIn Tumblr

ramdasa_missing_find

ಬೆಳ್ತಂಗಡಿ,ಫೆ.26 : ಮಹಾರಾಷ್ಟ್ರದ ನವಿಮುಂಬಯಿಯಿಂದ ಮೂರು ತಿಂಗಳ ಹಿಂದೆ ನಾಪತ್ತೆಯಾಗಿ ಧರ್ಮಸ್ಧಳದಲ್ಲಿ ಕೊಲೆಯಾಗಿದ್ದಾರೆ ಎನ್ನಲಾಗಿದ್ದ ರಾಮದಾಸ್ ಪೂಜಾರಿ (62) ಬುಧವಾರ ಮಂಗಳೂರಿನಲ್ಲಿ ಪತ್ತೆಯಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಬುಧವಾರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ರಾಮದಾಸ್ ಅವರ ಫೋಟೋವನ್ನು ಗಮನಿಸಿದ ಮಂಗಳೂರು ಬೋಳಾರಿನ ಫಿಶರೀಸ್ ಕಾಲೇಜಿನ ಬಸ್ ಚಾಲಕ ತಲಪಾಡಿಯ ವಿಜಯ್ ಎಂಬವರು ಭಿಕ್ಷುಕನಂತೆ ಮಂಗಳೂರಿನ ಬೋಳಾರ ಪರಿಸರದಲ್ಲಿ ತಿರುಗಾಡುತ್ತಿದ್ದ ವೃದ್ದ ರಾಮದಾಸ್ ಅವರಂತೆ ಕಾಣುತ್ತಿರುವುದನ್ನು ಗಮನಿಸಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಆರ್. ಲಿಂಗಪ್ಪ ಅವರ ಮೊಬೈಲ್‌ಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಕಾರ್ಯ ಪ್ರವತ್ತರಾದ ಬೆಳ್ತಂಗಡಿ ಪೊಲೀಸರು ಮಂಗಳೂರಿನ ಪೋಲಿಸರ ಸಹಾಯ ಪಡೆದು ರಾಮದಾಸ್ ಅವರನ್ನು ಪಾಂಡೇಶ್ವರ ಠಾಣೆಗೆ ಕರೆಸಿದ್ದಾರೆ. ಬಳಿಕ ರಾಮದಾಸ್ ಕುಟುಂಬಸ್ಥರನ್ನು ಕರೆದುಕೊಂಡು ಮಂಗಳೂರಿಗೆ ತೆರಳಿ ಪೋಲಿಸರ ವಶದಲ್ಲಿದ್ದ ರಾಮದಾಸ್ ಗುರುತನ್ನು ಪತ್ತೆ ಹಚ್ಚಿದ್ದು ನಾಪತ್ತೆಯಾಗಿದ್ದ ರಾಮದಾಸ್ ಇವರೆ ಎಂದು ಖಚಿತ ಪಡಿಸಿದ್ದಾರೆ.

ಗೊಂದಲ ಸೃಷ್ಠಿಸಿದ ಮೃತದೇಹ: ಮುಂಬಯಿಂದ ನಾಪತ್ತೆಯಾದ ರಾಮದಾಸರ ಮೊಬೈಲ್ ಬಳ್ಳಾರಿಯ ಮಲ್ಲೇಶ ಎಂಬಾತನ ಬಳಿ ಪತ್ತೆಯಾಗಿತ್ತು. ಬಳ್ಳಾರಿಯಲ್ಲಿ ಪೋಲೀಸ್ ವಿಚಾರಣೆಯ ವೇಳೆ ರಾಮದಾಸ್‌ರನ್ನು ಕೊಲೆ ಮಾಡಿ ಮೊಬೈಲ್ ಹಾಗೂ ಹಣ ಕಸಿದಿರುವುದಾಗಿ ಆತ ಒಪ್ಪಿಕೊಂಡಿದ್ದ. ಈತನನ್ನು ಧರ್ಮಸ್ಧಳಕ್ಕೆ ಕರೆತಂದು ಹುಡುಕಾಟ ನಡೆಸಿದಾಗ ದೊಂಡೋಲೆಯ ನೇತ್ರಾವತಿ ನದಿ ಕಿನಾರೆಯಲ್ಲಿ ವೃದ್ಧರೊಬ್ಬರ ಮೃತದೇಹ ಸಿಕ್ಕಿತ್ತು. ಆದರೆ ಅವರ ಮನೆಯವರು ಈ ಮೃತದೇಹ ರಾಮದಾಸ್‌ರದ್ದಲ್ಲ ಎಂದು ನಿರಾಕರಿಸಿದ್ದರು.

ramdasa_missing_find_1

ಮೃತದೇಹದ ಕುತ್ತಿಗೆಯಲ್ಲಿದ್ದ ಲಿಂಗವೊಂದನ್ನು ಗಮನಿಸಿ ಮನೆಯವರು ಈ ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನಲೆಯಲ್ಲಿ ಪೋಲೀಸರಿಗೂ ಗೊಂದಲ ಮೂಡಿತ್ತು. ವಿವಿಧ ಕೋನಗಳಲ್ಲಿ ಕಳೆದೊಂದು ವಾರದಿಂದ ಪೋಲಿಸರು ನಿರಂತರ ತನಿಖೆಯಲ್ಲಿ ತೊಡಗಿದ್ದರು. ಹಲವಾರು ತಂಡಗಳನ್ನು ರಚಿಸಿ ಹಗಲು-ರಾತ್ರಿ ಎನ್ನದೆ ತನಿಖೆಯಲ್ಲಿ ತೊಡಗಿಸಿಕೊಂಡಿದ್ದ ಬೆಳ್ತಂಗಡಿ ಪೋಲಿಸರು ಯಶಸ್ವಿ ಕಾರ್ಯಾಚರಣೆಯನ್ನು ಮಾಡಿ ಕೊನೆಗೂ ಕಗ್ಗಂಟ್ಟನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ‘ಧರ್ಮಸ್ಥಳದ ದೊಂಡೋಲೆಯಲ್ಲಿ ಕೊಲೆಯಾದ ವ್ಯಕ್ತಿ ಯಾರು ಎಂಬ ಪ್ರಶ್ನೆ ಪೋಲೀಸರನ್ನು ಕಾಡಲಾರಂಭಿಸಿದೆ. ಅದರ ಬಗ್ಗೆಯೂ ತನಿಖೆ ಮುಂದುವರಿಯುತ್ತಿದೆ.

ರಾಮದಾಸ್ ದೋಚಿದ ತಂಡ: ಮಲ್ಲೇಶ್ ಮತ್ತು ತಂಡ ರಾಮದಾಸರನ್ನು ದರೋಡೆ ಮಾಡಿ ಅವರ ಬಳಿ ಇದ್ದ ರೂ. 50 ಸಾವಿರ ನಗದು, ಮೊಬೈಲ್, ವಾಚು ಹಾಗೂ ಪಾಸ್ ಬುಕ್‌ನ್ನು ಕೊಂಡೊಯ್ದಿದ್ದರು. ಕೈಯಲ್ಲಿದ್ದುದ್ದನ್ನು ಕಳೆದುಕೊಂಡ ರಾಮದಾಸ್ ಕೆಲ ದಿನ ಧರ್ಮಸ್ಥಳ ಪರಿಸರದಲ್ಲೇ ತಿರುಗಾಡಿದ್ದಾರೆ. ಬಳಿಕ ಗುರುವಾಯನಕೆರೆ ಪರಿಸರದಲ್ಲಿಯೂ ಇವರನ್ನು ನೋಡಿದವರಿದ್ದಾರೆ. ಕಳೆದ ಕೆಲ ಸಮಯದಿಂದ ಇವರು ಮಂಗಳೂರಿನ ಬೋಳಾರ ಪರಿಸರದಲ್ಲಿ ತಿರುಗಾಡಿಕೊಂಡಿದ್ದರು. ಎಲ್ಲವನ್ನೂ ಕಳೆದುಕೊಂಡ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೀಗ ರಾಮದಾಸ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ತೆರಳಿದ್ದಾರೆ.

ಕೊನೆಯ ಪ್ರಯತ್ನವಾಗಿ ಪತ್ರಿಕಾ ಪ್ರಚಾರ: ಮೂರು ತಿಂಗಳ ಹಿಂದೆ ಲಕ್ಷ ದೀಪೋತ್ಸವ ನೋಡಲು ಧರ್ಮಸ್ಥಳಕ್ಕೆ ಏಕಾಂಗಿಯಾಗಿ ಬಂದಿದ್ದ ರಾಮದಾಸ್ ಮುಂಬಯಿನ ಪಿಡಬ್ಲು ಡಿ ಕಚೇರಿ ನಿವೃತ್ತ ಉದ್ಯೋಗಿಯಾಗಿದ್ದು, ಮುಂಬಯಿನಲ್ಲಿರುವ ಕುಟುಂಬದ ಸಂಪರ್ಕ ಕಳೆದುಕೊಂಡಿದ್ದರು.

ಕಳೆದ ಕೆಲ ದಿನಗಳಿಂದ ಬೆಳ್ತಂಗಡಿಯಲ್ಲೇ ತಂಗಿದ್ದ ರಾಮದಾಸ್ ಕುಟುಂಬಸ್ಥರು ಮಂಗಳವಾರ ಮುಂಬಾಯಿಗೆ ಹಿಂತಿರುಗುವವರಿದ್ದರು. ಹೋಗುವ ಮೊದಲು ಕೊನೆಯ ಪ್ರಯತ್ನವಾಗಿ ತಂದೆಯ ಬಗ್ಗೆ ಮಾಹಿತಿ ಕೊಟ್ಟರೆ ಬಹುಮಾನ ನೀಡುವುದಾಗಿ ಪತ್ರಿಕೆಗಳ ಮೂಲಕ ಪ್ರಕಟಿಸಿದ್ದರು. ಅದು ಕೊನೆಗೂ ಫಲ ನೀಡಿತು.

ಭಿಕ್ಷುಕನಂತೆ ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ ಕುಳಿತಿದ್ದ ತಂದೆಯನ್ನು ನೋಡಿ ಬಾವುಕಳಾದ ಮಗಳು ಪುಷ್ಪ ಓಡಿಹೋಗಿ ಅವರನ್ನು ಅಪ್ಪಿಕೊಂಡ ಕ್ಷಣ ಅಲ್ಲಿದ್ದ ಪೋಲಿಸರ ಕಣ್ಣಲ್ಲೂ ನೀರೂರಿಸಿತು. ಜತೆ ಪತ್ನಿ ಲಕ್ಷ್ಮೀ ಬಾಯಿ, ಸಹೋದರಿ ನಿರ್ಮಲ, ಪುತ್ರ ಸಂಜಯ್ ಇದ್ದರು. ರಾಮದಾಸ್ ಇರುವಿಕೆ ಬಗ್ಗೆ ಮಾಹಿತಿ ನೀಡಿದ ವಿಜಯ ಅವರಿಗೆ ಕುಟುಂಬಸ್ಥರು ಘೋಷಿಸಿದಂತೆ ಬಹುಮಾನವನ್ನು ನೀಡಲಿದ್ದಾರೆ. ಮಾಧ್ಯಮಕ್ಕೂ ಕತಜ್ಞತೆ ಸಲ್ಲಿಸಿದ್ದಾರೆ.

Write A Comment