ಕನ್ನಡ ವಾರ್ತೆಗಳು

ಕಲಾಕುಂಚದಲ್ಲಿ ಚಿಗುರುತಿಹ ಕುಲಾಲ ಪ್ರತಿಭೆ ರಾಷ್ಟ್ರಪತಿ ಬಂಗಾರದ ಪದಕ ಪುರಸ್ಕೃತೆ ಕುಮಾರಿ ದೀಕ್ಷಾ ಡಿ. ಮೂಲ್ಯ

Pinterest LinkedIn Tumblr

deeksha_moolya_photo

ಮಂಗಳೂರು,ಫೆ.25: ಪ್ರತಿಯೊಬ್ಬ ಮನುಷ್ಯನೂ ತನ್ನ ಭಾವನೆಗಳನ್ನು ವಿವಿಧ ಕಲಾ ಪ್ರೌಡಿಮೆಗಳ ಮುಖಾಂತರ ಅಭಿವ್ಯಕ್ತಿಸುವ ಚತುರತೆಯನ್ನು ಹೊಂದಿರುತ್ತಾನೆ. ತನ್ನ ಮನಸ್ಸಿಗೆ ಹಿತವೆನಿಸುವ ಯಾವುದೇ ಕಲಾ ಕ್ಷೇತ್ರ ಇರಲಿ ತನ್ನನ್ನು ತಾನು ಅದರಲ್ಲಿ ತೊಡಗಿಸಿಕೊಳ್ಳುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯುತ್ತಾನೆ. ಇಂತಹದರಲ್ಲಿ ಚಿತ್ರಕಲೆ ಕೂಡಾ ಒಂದು. ಪ್ರಕೃತಿಯನ್ನು ಬಳಸಿಕೊಂಡು ವರ್ಣಗಳ ಮೂಲಕ ಭಾವನೆ ಬಿಂಬಿಸುವುದೇ ಚಿತ್ರಕಲೆ. ತನ್ನ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಅದನ್ನು ಚಿತ್ರಗಳ ಮೂಲಕ ಸೃಷ್ಟಿಸಿ ಅದ್ಭುತ ಚಿತ್ರಕಾರರೆಂದು ಪ್ರಸಿದ್ದಿ ಪಡೆದ ಅದೆಷ್ಟೋ ಮಂದಿ ಮಹಾನುಭಾವರು ನಮ್ಮಲ್ಲಿ ಇದ್ದಾರೆ. ಇಂತಹ ಮಹಾನುಭಾವರ ಸಾಲಿಗೆ ಸೇರ್ಪಡೆಗೊಳ್ಳಬಹುದೆಂಬ ಆಶಾಭಾವನೆ ಮೂಡಿಸುತ್ತಾ, ತನ್ನ ಚಿಕ್ಕ ಪ್ರಾಯದಲ್ಲಿಯೇ ವರ್ಣಚಿತ್ರಕಲೆಯಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸುತ್ತಿರುವ ಕುಲಾಲ ಸಮಾಜದ ಅರಳು ಪ್ರತಿಭೆ ರಾಷ್ಟ್ರಪತಿ ಬಂಗಾರದ ಪದಕ ಪುರಸ್ಕೃತೆ ಕುಮಾರಿ ದೀಕ್ಷಾ ಡಿ. ಮೂಲ್ಯ.

ತನ್ನ ಕೌಶಲ್ಯ ಮತ್ತು ಕಲ್ಪನೆಗಳನ್ನು ಬಳಸಿ ವರ್ಣಚಿತ್ರಕಲೆಯ ಕಲಾಕುಂಚದಲ್ಲಿ ಅರಳುತ್ತಿಹ ಈಕೆ ಪೆರ್ಡೂರಿನ ದಿನೇಶ್ ಮೂಲ್ಯ ಮತ್ತು ಶಶಿಕಲಾ ಮೂಲ್ಯ ದಂಪತಿಗಳ ಹೆಮ್ಮೆಯ ಸುಪುತ್ರಿ. ಹೆಬ್ರಿಯ ಅಮೃತಾ ಭಾರತಿ ವಿದ್ಯಾಕೇಂದ್ರ ಶಾಲೆಯಲ್ಲಿ ಏಳನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಈಕೆ 2014ರಲ್ಲಿ ಲಲಿತಕಲಾ ಸೆಂಟರ್ ವತಿಯಿಂದ ಆಯೋಜಿಸಲ್ಪಟ್ಟ “9ನೇ ರಾಷ್ಟ್ರಮಟ್ಟದ ವಿದ್ಯಾರ್ಥಿ ಮತ್ತು ಶಿಕ್ಷಕರ ವರ್ಣಚಿತ್ರಕಲಾ ಸ್ಪರ್ಧೆ”ಯಲ್ಲಿ ರಾಷ್ಟ್ರಪತಿ ಬಂಗಾರದ ಪದಕ, 2013-14ರಲ್ಲಿ ದಿಲ್ಲಿಯಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ “ಎನರ್ಜಿ ಕಂಸರ್ವೆಸನ್ ವರ್ಣಚಿತ್ರಕಲಾ ಸ್ಪರ್ಧೆ”ಯಲ್ಲಿ ತೃತೀಯ ಸ್ಥಾನ, ರವಿವರ್ಮ ಅಕಾಡಮಿ ಟ್ರಸ್ಟ್ (ರಿ) ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಲ್ಪಟ್ಟ ರಾಜ್ಯಮಟ್ಟದ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮಂಡ್ಯದಲ್ಲಿ ಕರ್ನಾಟಕ ಶ್ರೀ ಪ್ರಗತಿಪರ ಸೇವಾ ಸಮಿತಿಯ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಆಯೋಜಿಸಲ್ಪಟ್ಟ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ 13ನೇ ಸ್ಥಾನ, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ “ಎನರ್ಜಿ ಕಂಸರ್ವೆಸನ್ ವರ್ಣಚಿತ್ರಕಲಾ ಸ್ಪರ್ಧೆ”ಯಲ್ಲಿ ತೃತೀಯ ಸ್ಥಾನ, ಉಡುಪಿ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಚತುರ್ಥ ಸ್ಥಾನ, ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ “ಆನ್-ದ-ಸ್ಪಾಟ್” ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2009ರಲ್ಲಿ ಉದಯವಾಣಿಯ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹೀಗೆ ಅರುವತ್ತಕ್ಕೂ ಮಿಕ್ಕಿ ತಾಲೂಕು, ರಾಜ್ಯ, ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾಳೆ.

ಚಿತ್ರಕಲೆಯೊಂದಿಗೆ ನೃತ್ಯ, ಸಂಗೀತ, ಪ್ರಬಂಧ, ಕ್ರೀಡಾ ಕ್ಷೇತ್ರಗಳಲ್ಲಿಯೂ ಭಾಗವಹಿಸುತ್ತಾ, ಶಾಲೆಯಲ್ಲಿ ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿ ತೇರ್ಗಡೆಗೊಳ್ಳುತ್ತಿರುವ ಈಕೆ ಸಕಲ ಕಲಾವಲ್ಲಭೆ. ಇತ್ತೀಚಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ 8ನೇ Science Talent Search ಪರೀಕ್ಷೆಯಲ್ಲಿ ಪ್ರಥಮ ಸ್ಥಾನ, “ಪ್ರತಿಭಾ ಕಾರಂಜಿ 2010” ಎಂಬ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಶಾಲಾಮಟ್ಟದಲ್ಲಿ ಆಯೋಜಿಸಲ್ಪಟ್ಟ ಶ್ಲೋಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಭಕ್ತಿಗೀತಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಭಗವಧ್ಗೀತಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚೆಸ್ ನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ವಾಕ್ಪಟುತ್ವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೀಗೆ ಇನ್ನಿತರ ಕಲಾಕ್ಷೇತ್ರಗಳಲ್ಲಿಯೂ ಹಲವಾರು ಪ್ರಶಸ್ತಿಗಳನ್ನು ಪಡೆದು ತಾನು ಕಲಿಯುತ್ತಿರುವ ಶಾಲೆಯಿಂದ 4ನೇ ಮತ್ತು 6ನೇ ತರಗತಿಯಲ್ಲಿ ಕುಶಲತೆಯ ಪ್ರಮಾಣಪತ್ರ ಪಡೆದು ಪ್ರತಿಭಾನ್ವಿತ ವಿಧ್ಯಾರ್ಥಿನಿ ಎನಿಸಿಕೊಂಡಿದ್ದಾಳೆ.

ಹಲವಾರು ಸಂಘ ಸಂಸ್ಥೆಗಳು ಆಯೋಜಿಸಿದ ಚಿತ್ರಕಲಾ ಮತ್ತು ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಪ್ರಶಸ್ತಿಗಳನ್ನು ಪಡೆದು ಪ್ರಶಂಸೆಗೆ ಪಾತ್ರಲಾಗಿದ್ದಾಳೆ. ಈಕೆಯ ಸಾಧನೆಯ ಕಿರೀಟಕ್ಕೆ ಗರಿಯೆಂಬಂತೆ ಇತ್ತೀಚಿಗೆ ಕುಲಾಲ ಒಕ್ಕೂಟ ನಾಸಿಕ್ ನ ದಶಮಾನೋತ್ಸವದ ಸಂದರ್ಭದಲ್ಲಿ ಈಕೆಯನ್ನು ವಿಶೇಷವಾಗಿ ಸನ್ಮಾನಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಪ್ರತಿಭಾ ಭಂಡಾರ ತುಂಬಿರುವ ಈಕೆಯ ಭವಿಷ್ಯ ಕಾನ್ವಾಸ್ ನ ಚಿತ್ರದ ವರ್ಣಗಳಂತೆ ರಂಗುರಂಗಾಗಿ ಹೊಳೆಯಲಿ.

Write A Comment