ಮಂಗಳೂರು, ಫೆ. 24 : ಉಪ್ಪಿನಂಗಡಿ ದೇವಳದ ಬ್ರಹ್ಮಕಲಶ ಧಾರ್ಮಿಕ ಕಾರ್ಯಕ್ರಮಕ್ಕೆ ಪೂಜ್ಯ ರಾಘವೇಶ್ವರ ಸ್ವಾಮಿಗಳಿಗೆ ಭಾಗವಹಿಸಲು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ತಡೆ ನೀಡಿದುದು ಸರಿಯಲ್ಲ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರ ಈ ವರ್ತನೆಗೆ ರಾಜಕೀಯ ಒತ್ತಡಗಳೇ ಕಾರಣ. ತನಗೆ ಆಗದವರ ಬಗ್ಗೆ ಜನ ಸುಳ್ಳು ದೂರು ನೀಡಿದರೂ ಪೊಲೀಸ್ ಇಲಾಖೆ ಆರೋಪವನ್ನು ದಾಖಲಿಸಿ ಪರಿಶೀಲನೆ ನಡೆಸುತ್ತಾರೆ. ದೂರು ದಾಖಲಿಸಿದೊಡನೆ ಆತ ಅಪರಾಧಿ ಆಗುವುದಿಲ್ಲ. ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಆ ತಪ್ಪು ಸಾಬೀತಾಗಿ ಶಿಕ್ಷೆಯಾದರೆ ಮಾತ್ರ ಅಪರಾಧಿಯಾಗುತ್ತಾನೆ.
ರಾಘವೇಶ್ವರ ಶ್ರೀಗಳ ವಿರುದ್ಧವು ಸಹ ಯಾವುದೋ ಒತ್ತಡಕ್ಕೆ ಅವರ ಮೇಲೆ ದೂರು ದಾಖಲಾಗಿದೆ. ಕೇಸು ತೀರ್ಮಾನಗೊಳ್ಳುವ ಮೊದಲೇ ಸರಕಾರ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಸರಿಯಲ್ಲ ಎಂದು ಹೇಳಿರುವ ಪುನರೂರು, ಇದರ ಹಿಂದೆ ಗೃಹ ಸಚಿವರ ಮಗನ ಮತ್ತು ಕೆಲವು ಮಠಾಧೀಶರ ಕೈವಾಡವಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶ್ರೀಗಳು ತಪ್ಪು ಮಾಡಿದ್ದಾರೆಂದು ಅವರ ಶಿಷ್ಯ ವರ್ಗಕ್ಕೆ ಮನವರಿಕೆಯಾದರೆ ಅವರನ್ನು ನೋಡಲು ಯಾರೂ ಬರುವುದಿಲ್ಲ. ಶಿಷ್ಯರು ಅವರನ್ನು ನಿರಪರಾಧಿ ಎಂದು ನಂಬಿರುವುದರಿಂದ ಈಗಲೂ ಅವರ ಎಲ್ಲಾ ಕಾರ್ಯಕ್ರಮಕ್ಕೆ ಸಾವಿರಾರು ಜನ ಬರುತ್ತಿದ್ದಾರೆ. ನ್ಯಾಯಾಲಯದಲ್ಲಿ ನ್ಯಾಯ ದೊರಕಿ ಅವರು ದೋಷಮುಕ್ತರಾಗುತ್ತಾರೆಂದು ಭಕ್ತರ ನಂಬಿಕೆ. ಇದರ ಮಧ್ಯೆ ಸರಕಾರದ ಮಧ್ಯಪ್ರವೇಶ ಯಾಕೆ? ಬೆಂಗಳೂರಿನ ಸಭೆಗೂ, ಶಿವಮೊಗ್ಗದ ಸಭೆಗೆ ಸರಕಾರ ಭಿನ್ನಧೋರಣೆ ಯಾಕೆ? ನ್ಯಾಯದೇವತೆ ಎಲ್ಲಾ ಮತೀಯರಿಗೂ ಒಂದೇ ಆಗಿದೆ. ಸರಕಾರ ಈ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸದೆ ಎಲ್ಲಾ ಪ್ರಕರಣದಂತೆ ವರ್ತಿಸಲಿ ಎಂದು ಹರಿಕೃಷ್ಣ ಪುನರೂರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
_ನರೇಂದ್ರ ಕೆರೆಕಾಡ್