ಕನ್ನಡ ವಾರ್ತೆಗಳು

ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ 2015

Pinterest LinkedIn Tumblr

national_sprtmeet_photo_1

ಮಂಗಳೂರು, ಫೆ. 23 : ರಾಜ್ಯದಲ್ಲಿ ಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ಫೆಡರೇಶನ್ ಕಪ್ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ದ.ಕ. ಜಿಲ್ಲೆಗೆ ಲಭ್ಯವಾಗಿದ್ದು, ರಾಷ್ಟ್ರ ಮಟ್ಟದ ಅಥ್ಲೆಟ್‌ಗಳಿಗೆ ಸಕಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಅತ್ಯುತ್ತಮ ಕ್ರೀಡಾಕೂಟವನ್ನಾಗಿ ರೂಪಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಅಥ್ಲ್ಲಿಟಿಕ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಪರಮೇಶ್ವರ್ ಭರವಸೆ ನೀಡಿದ್ದಾರೆ.

ಅಖಿಲ ಭಾರತ ಅಥ್ಲೆಟಿಕ್ ಫೆಡರೇಶನ್ ಅಧ್ಯಕ್ಷ ಆದಿಲ್ ಸುಮರಿವಾಲ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟದ ಕುರಿತು ಜನಪ್ರತಿನಿಧಿಗಳು, ಕ್ರೀಡಾಪ್ರೇಮಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ಪ್ರಥಮ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮಂಗಳಾ ಕ್ರೀಡಾಂಗಣದಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರೀಡಾ ಸಚಿವರನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೋರುವುದಾಗಿ ಅವರು ಹೇಳಿದರು. ಕ್ರೀಡಾಕೂಟವು ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್‌ನಿಂದ ನಡೆಯ ಬೇಕಾಗಿರುವುದರಿಂದ ಸರಕಾರದಿಂದ ವಿಶೇಷ ಸಹಾಯಹಸ್ತಕ್ಕಾಗಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗುವುದು. ಆತಿಥ್ಯದಲ್ಲಿ ದ.ಕ. ಜಿಲ್ಲೆಯು ರಾಷ್ಟ್ರಕ್ಕೆ ಪ್ರತಿಷ್ಠಿತರಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಕ್ರೀಡಾಕೂಟ ಅತ್ಯುತ್ತಮವಾಗಿ ಮೂಡಿ ಬರುವುದರಲ್ಲಿ ಸಂಶಯವಿಲ್ಲ. ಜಿಲ್ಲೆಯವರೇ ಆದ ಕ್ರೀಡಾ ಸಚಿವರು, ಜಿಲ್ಲಾಡಳಿತ ಕ್ರೀಡಾಕೂಟವನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಗೊಳಿಸಲಿದೆ. ಮಾತ್ರವಲ್ಲ ದ.ಕ. ಜಿಲ್ಲೆಗೆ ಹೃದಯ ಶ್ರೀಮಂತಿಕೆ ಇದೆ. 1987ರಲ್ಲಿ ಮುಕ್ತ ಫೆಡರೇಶನ್ ಕಪ್ ಮಂಗಳೂರಿನಲ್ಲಿ ನಡೆದಿತ್ತು.

national_sprtmeet_photo_3 national_sprtmeet_photo_2

ಅಥ್ಲೆಟಿಕ್ ಫೆಡರೇಶನ್ ಕಪ್ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು. ಕ್ರೀಡಾಕೂಟದಲ್ಲಿ ಭಾಗವಹಿಸುವ ರಾಷ್ಟ್ರ ಮಟ್ಟದ ಅಥ್ಲೆಟ್‌ಗಳಿಗೆ ಸಮರ್ಪಕ ತಂಗುವ ವ್ಯವಸ್ಥೆ, ಆಹಾರ ಹಾಗೂ ಇನ್ನಿತರ ಅಗತ್ಯ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅದಕ್ಕಾಗಿ ಸೂಕ್ತ ಬಜೆಟ್ ಹಾಗೂ ಕ್ರೀಡಾಕೂಟದ ರೂಪುರೇಷೆಯ ಬಗ್ಗೆ ಶೀಘ್ರದಲ್ಲೇ ಸಂಘಟನಾ ಸಮಿತಿ ರಚಿಸಲಾಗುವುದು. ಕ್ರೀಡಾಕೂಟಕ್ಕೆ ಬರುವ 1,000ದಿಂದ 1,200ರಷ್ಟು ಅಥ್ಲ್ಲೆಟ್‌ಗಳಿಗೆ ನಗರದಲ್ಲಿ ಲಭ್ಯವಿರುವ ವಸತಿ ಸೌಲಭ್ಯದ ಬಗ್ಗೆ ಮುಂಚಿತವಾಗಿಯೇ ಗಮನಹರಿಸಬೇಕು ಎಂದು ಹೇಳಿದರು.

national_sprtmeet_photo_4

ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್-ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ಅಥ್ಲ್ಲೆಟ್‌ಗಳ ಆಯ್ಕೆ:
ದ.ಕ. ಜಿಲ್ಲೆಯ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಅಥ್ಲೆಟಿಕ್ ಫೆಡರೇಶನ್ ಕಪ್ ಚೀನಾದ ಹುಹಾನ್‌ನಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಹಾಗೂ ಬಿಂಜ್‌ನಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ರಾಷ್ಟ್ರೀಯ ಅಥ್ಲ್ಲ್ಲೆಟ್‌ಗಳ ಸೆಲೆಕ್ಷನ್ ಟ್ರಾಯಲ್ ಕೂಡಾ ಇದಾಗಿದೆ ಎಂದು ಅಖಿಲ ಭಾರತ ಅಥ್ಲೆಟಿಕ್ ಫೆಡರೇಶನ್ ಅಧ್ಯಕ್ಷ ಆದಿಲ್ ಸುಮರಿವಾಲ ತಿಳಿಸಿದರು. ಲಾಂಗ್ ಜಂಪ್, ಹೈಜಂಪ್, ಓಟ, ಎಸೆತ ಸೇರಿದಂತೆ 47 ವಿವಿಧ ಕ್ರೀಡೆಗಳು ಈ ಕ್ರೀಡಾಕೂಟದಲ್ಲಿ ನಡೆಯಲಿದ್ದು, ದೇಶದ ಎಲ್ಲಾ ರಾಜ್ಯಗಳ 700ಕ್ಕೂ ಅಧಿಕ ಅಥ್ಲೆಟ್‌ಗಳು ಭಾಗವಹಿಸಲಿದ್ದಾರೆ. ರೈಲ್ವೆ, ಒಎನ್‌ಜಿಸಿ, ಎಲ್‌ಐಸಿ ಮೊದಲಾದ ಘಟಕಗಳ ಅಥ್ಲೆಟ್‌ಗಳು ಕೂಡಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಹೊನಲು ಬೆಳಕಿನ ಕ್ರೀಡಾಕೂಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ನುಡಿದರು.

ಸುದ್ದಿಗೋಷ್ಠಿಯಲ್ಲಿ ಐವನ್ ಡಿಸೋಜ, ಜೆ.ಆರ್. ಲೋಬೊ, ಮೇಯರ್ ಮಹಾಬಲ ಮಾರ್ಲ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ದ.ಕ. ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಮಂಜುನಾಥ ಭಂಡಾರಿ, ದಯಾನಂದ ಪೈ, ಪಿ.ವಿ.ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

Write A Comment