ಕನ್ನಡ ವಾರ್ತೆಗಳು

ರೋಗನಿರೋಧಕ ಶಕ್ತಿ ವರ್ಧನೆಗಾಗಿ ರಾಜ್ಯಾದ್ಯಂತ ‘ಇಂದ್ರಧನುಷ್ ನೂತನ ಯೋಜನೆ ಜಾರಿಗೆ : ಯು.ಟಿ.ಖಾದರ್.

Pinterest LinkedIn Tumblr

puls_polio_drops_1

ಮಂಗಳೂರು, ಫೆ.23  : ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ‘ಇಂದ್ರಧನುಷ್’ ಯೋಜನೆಗೆ ರಾಜ್ಯದಲ್ಲಿ ಮಾರ್ಚ್‌ನಿಂದ ಚಾಲನೆ ದೊರೆಯಲಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. 2ನೆ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ  ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

puls_polio_drops_3 puls_polio_drops_2

ರೋಗನಿರೋಧಕ ಶಕ್ತಿ ರಾಜ್ಯದಲ್ಲಿ ಕಡಿಮೆಯಾಗಿ ಕಂಡುಬಂದಿರುವ ಹೈದರಾಬಾದ್ ಕರ್ನಾಟಕದ ಬೀದರ್ ಹೊರತುಪಡಿಸಿ ಉಳಿದ ಐದು ಜಿಲ್ಲೆಗಳು ಹಾಗೂ ಬಿಬಿಎಂಪಿಯನ್ನು ಒಳಗೊಂಡು ಬೆಂಗಳೂರು ನಗರದಲ್ಲಿ ವ್ಯವಸ್ಥಿತವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಬಳಿಕ ರಾಜ್ಯದ ಉಳಿದ ಜಿಲ್ಲೆಗಳಿಗೆ ವಿಸ್ತರಿಸ ಲಾಗುವುದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಬಿಸಿಜಿ, ಪೆಟ್ಸ್ ವಾಯ್ಲೆಂಟ್, ವಿಟಮಿನ್ ಎ ಸೇರಿದಂತೆ ಒಟ್ಟು ಏಳು ರೋಗಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಇದಾಗಿದ್ದು, ಮಾರ್ಚ್, ಎಪ್ರಿಲ್, ಮೇ ಹಾಗೂ ಜೂನ್ ಕೊನೆಯ ವಾರದಲ್ಲಿ ಈ ಕಾರ್ಯವನ್ನು ಪೋಲಿಯೊ ಲಸಿಕೆ ನೀಡುವ ಮಾದರಿಯಲ್ಲೇ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಮೂಲಕ ನೆರವೇರಿಸಲಾಗು ವುದು ಎಂದು ಸಚಿವರು ತಿಳಿಸಿದರು.

puls_polio_drops_5 puls_polio_drops_4

ಕಾರ್ಮಿಕರ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಕುರಿತಂತೆ ಗುತ್ತಿಗೆ ವಹಿಸಿಕೊಂಡವರು, ಗುತ್ತಿಗೆದಾರರೇ ಕಾಳಜಿವಹಿಸುವಂತೆ ಎಚ್ಚರಿಕೆ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ರಾಜ್ಯದಲ್ಲಿ 2ನೆ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 75 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 32,628 ಬೂತ್‌ಗಳಲ್ಲಿ 51,558 ತಂಡಗಳಲ್ಲಿ 1,03,440 ಲಸಿಕಾ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಸ್ವಯಂ ಸೇವಕರು ಮನೆ ಭೇಟಿ ನೀಡಿ ಎಲ್ಲಾ ಮಕ್ಕಳು ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುತ್ತಾರೆ ಎಂದು ಸಚಿವ ಖಾದರ್ ಹೇಳಿದರು.

ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮದ ಸಂದರ್ಭ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಮೊಯ್ದಿನ್ ಬಾವ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ. ಶಕುಂತಳಾ, ಡಾ. ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

Write A Comment