ಕನ್ನಡ ವಾರ್ತೆಗಳು

ಹಾಲ್ ಟಿಕೆಟ್ ನಿರಾಕರಣೆ ಆರೋಪ :ಅಲೋಶಿಯಸ್ ಕಾಲೇಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

allouse_college_photo

ಮಂಗಳೂರು : ನಗರದ ಸಂತ ಅಲೋಶಿಯಸ್ ಪಿ.ಯು. ಕಾಲೇಜು ಪ್ರಥಮ ಪಿ.ಯು. ವಾರ್ಷಿಕ ಪರೀಕ್ಷೆ ದಿನಾಂಕ 18-02-15ರಂದು ಆರಂಭವಾಗಿದ್ದು, ಸುಮಾರು 22 ವಿದ್ಯಾರ್ಥಿಗಳಿಗೆ ಹಾಜರಾತಿಯ ಕೊರತೆಯ ನೆಪವೊಡ್ಡಿ ಪ್ರವೇಶ ಪತ್ರ ನಿರಾಕರಿಸಲಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ .

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರಿಗೆ ದೂರು ನೀಡಲಾಗಿದ್ದು, ಸ್ವತಃ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪರ್ದೇಶಕರು ದಾಖಲೆಗಳನ್ನು ಪರಿಶೀಲಿಸಿದ್ದು ,ದಿನಾಂಕ ೧೯-೦೨-೨೦೧೫ ರಂದು ಬೆಳಿಗ್ಗೆ ೮ ಗಂಟೆಗೆ ಖುದ್ದು ಕಾಲೇಜಿಗೆ ಬೇಟಿ ನೀಡಿ , ಹಾಲ್ ಟಿಕೆಟ್ ನೀಡುವಂತೆ ಲಿಖಿತ ಆದೇಶ ನೀಡಿದ್ದಾರೆ. ಆದರೆ ಈ ಆದೇಶವನ್ನು ಉಲ್ಲಂಘಿಸಿದ ಕಾಲೇಜು ಪ್ರಾಂಶುಪಾಲರು ದೂರು ನೀಡಿದ ವಿದ್ಯಾರ್ಥಿಗಳನ್ನು ತಮ್ಮ ಕೊಠಡಿಯಲ್ಲಿ ಕುಳ್ಳಿರಿಸಿ, ಐದಾರು ಉಪನ್ಯಾಸಕರು ಜೊತೆಗೂಡಿ ಮಾನಸಿಕವಾಗಿ ಕಿರುಕುಳ ನೀಡಿದ್ದು ಮಾತ್ರವಲ್ಲದೆ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರನ್ನು ಕೂಡಾ ಮಾತನಾಡಲು ಸಮ್ಮತಿಸಲಿಲ್ಲ. ವಿದ್ಯಾರ್ಥಿಗಳಿಂದ ಬಲವಂತವಾಗಿ ಕಾಲೇಜಿಗೆ ಅನುಕೂಲಕರವಾಗುವ ರೀತಿಯಲ್ಲಿ ಪತ್ರವನ್ನು ಬರೆಸಲಾಗಿದೆ. ಮಾತ್ರವಲ್ಲದೆ ವಿದ್ಯಾರ್ಥಿಗಳ ಪೋಷಕರನ್ನು ಕೂಡಾ ಭೇಟಿಯಾಗದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಎಂದು ಹಾಲ್ ಟಿಕೆಟ್ ಸಿಗದಿರುವ ವಿದ್ಯಾರ್ಥಿಗಳ ಪರವಾಗಿ ಕ್ಯಾಂಪಸ್ ಫ್ರಂಟ್‌ನ ಸದಸ್ಯರು ಆರೋಪ ಮಾಡಿದ್ದಾರೆ.

ಈಗಾಗಲೇ ಎರಡು ವಿಷಯಗಳ ಪರೀಕ್ಷೆಗಳು ಮುಗಿದಿದ್ದು , ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ವಿದ್ಯಾರ್ಥಿ ಮತ್ತು ಪೋಷಕರು ಆತಂಕಕ್ಕೀಡಾಗಿದ್ದಾರೆ. ಅದೂ ಅಲ್ಲದೆ, ಕೆಲವು ವಿದ್ಯಾರ್ಥಿಗಳಿಗೆ ನಿರ್ಧಿಷ್ಟ ವಿಷಯದ ಉಪನ್ಯಾಸಕರು ಉದ್ದೇಶಪೂರ್ವಕವಾಗಿ ಹಾಜರಾತಿ ನೀಡದಿರುವುದು ಕೂಡಾ ಕಂಡು ಬಂದಿದೆ. ಇದರ ವಿರುದ್ಧ ವಿದ್ಯಾರ್ಥಿ ಮತ್ತು ಪೋಷಕರ ಪ್ರತಿಭಟನೆಯು ಎರಡನೇ ದಿನವಾದ ಇಂದು ಕೂಡ ಮುಂದುವರಿದಿದೆ ಎಂದು ಕ್ಯಾಂಪಸ್ ಫ್ರಂಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಅಳಲನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು. ಇದಕ್ಕೆ ಕ್ಯಾಂಪಸ್ ಫ್ರಂಟ್‌ನ ರಾಜ್ಯ ಉಪಾದ್ಯಕ್ಷರಾದ ತಫ್ಸೀರ್ ಬೆಂಬಲವನ್ನು ಸೂಚಿಸಿ ಪ್ರಾಂಶುಪಾಲರ ಈ ಕ್ರಮವನ್ನು ಖಂಡಿಸಿ , ನೊಂದ ವಿದ್ಯಾರ್ಥಿಗಳಿಗೆ ಸೂಕ್ತವಾದ ಪರ್‍ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಇರ್ಷಾದ್ ಬಜ್ಪೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಝ್ ಮಂಜನಾಡಿ ಹಾಜರಿದ್ದರು.

Write A Comment