ಮೈಸೂರು,ಫೆ.21: ಮೈಸೂರು ಮೃಗಾಲಯಕ್ಕೆ ಪ್ರತಿ ವರ್ಷ 32 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಮೈಸೂರಿನಲ್ಲಿ ವನ್ಯಜೀವಿ ಸಫಾರಿಗೆ ಪ್ರಾರಂಭಿಸಿದರೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದ್ದು ಈಗ ಪ್ರಾರಂಭಿಸುತ್ತಿರುವ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಕೆಂದ್ರದಲ್ಲಿ ವನ್ಯಜೀವಿ ಸಫಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಿಎಂ ಸಿದ್ದಾರಾಮಯ್ಯ ಅವರು ಶುಕ್ರವಾರ ಕೂರ್ಗಳ್ಳಿಯಲ್ಲಿ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ವನ್ಯಜೀವಿ ಕೇಂದ್ರವನ್ನು ಪ್ರಾರಂಭಿಸಲು 2012ರಲ್ಲಿ 113 ಎಕೆರೆ 21 ಕುಂಟೆ ಪ್ರದೇಶವನ್ನು ಅರಣ್ಯ ಇಲಾಖೆಯವರು ಮೈಸೂರು ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ. ಈ ಕೇಂದ್ರದಲ್ಲಿ ವನ್ಯ ಜೀವಿಗಳನ್ನು ಸಂರಕ್ಷಿಸಲಾಗುವುದು. ಇದರ ಜೊತೆಗೆ ಇನ್ನು 80 ಎಕೆರೆ ಪ್ರದೇಶವನ್ನು ಅರಣ್ಯ ಇಲಾಖೆಯವರು ಹಸ್ತಾಂತರಿಸಿದರೆ ವನ್ಯಜೀವಿ ಸಫಾರಿ ಪ್ರಾರಂಭಿಸಬಹುದಾಗಿದೆ ಎಂದರು.
ಪ್ರಾಣಿ ರಕ್ಷಣೆ ನಮ್ಮ ಕರ್ತವ್ಯ : ಕರ್ನಾಟಕದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚು ಇದ್ದು 6,000 ಆನೆ ಹಾಗೂ 400 ಹುಲಿಗಳಿವೆ ವನ್ಯಜೀವಿಗಳನ್ನು ಸಂರಕ್ಷಿಸಲು ಹಾಗೂ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸುವ ಉದ್ದೇಶದಿಂದ ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಮೈಸೂರು ಚಾಮರಾಜೇಂದ್ರ ಮೃಗಾಲಯವನ್ನು 1892 ರಲ್ಲಿ ಪ್ರಾರಂಭವಾಗಿದ್ದು ಇಡೀ ಏಷ್ಯ ಖಂಡದಲ್ಲೇ 3ನೇ ಸ್ಥಾನ ಹಾಗೂ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದರು.
ಕಾಡಿನಲ್ಲಿ ವನ್ಯಜೀವಿಗಳಿಗೆ ಆಹಾರ ಮತ್ತು ನೀರಿನ ಕೊರತೆ ಉಂಟಾದರೆ ಅವು ನಾಡಿಗೆ ಬರುತ್ತವೆ ಅರಣ್ಯ ಅಧಿಕಾರಿಗಳು ವನ್ಯಜೀವಿಗಳಿಗೆ ಅವಶ್ಯಕವಿರುವ ಆಹಾರ ಮತ್ತು ನೀರನ್ನು ಒದಗಿಸಿ ಅವು ನಾಡಿಗೆ ಬರದಂತೆ ಎಚ್ಚರ ವಹಿಸಬೇಕು. ವನ್ಯಜೀವಿಗಳ ಸಂರಕ್ಷಣೆಗೆ ಬೇಕಾಗುವ ಆರ್ಥಿಕ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದರು.
ನೀರಿನ ಸಮಸ್ಯೆ: 16 ರಿಂದ 17 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇಲವಾಲ, ಕೂರ್ಗಳ್ಳಿ, ಬೀರಿಹುಂಡಿಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಾಲ್ಕಾನ್ ಕಾರ್ಖಾನೆಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲು ಕಾರ್ಮಿಕ ಸಚಿವರಿಗೆ ತಿಳಿಸಲಾಗುವುದು ಎಂದರು.
