ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ನಗರದ ಬಂಟ್ಸ್ ಹಾಸ್ಟೇಲ್ ಸಮೀಪದಲ್ಲಿರುವ ನ್ಯೂಸ್ಟಾರ್ ಕಿಡ್ಸ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ ತಾರೀಕು 21-02-2015ನೇ ಶನಿವಾರ ಮಣ್ಣಗುಡ್ಡೆಯ ರೋಟಾರಿ ಬಾಲಭವನದಲ್ಲಿ ಜರಗಿತು.
ಮಂಗಳೂರು ಮೇಯರ್ ಶ್ರೀ ಮಹಾಬಲ ಮಾರ್ಲಾ ಅವರು ಸಮಾರಂಭವನ್ನು ಉದ್ಘಾಟಿಸಿ, ಮಕ್ಕಳನ್ನು ವಿದ್ಯಾಭ್ಯಾಸದ ಜೊತೆಜೊತೆಗೆ ಪಾಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸುವ ಮೂಲಕ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದು, ಹಾಗೇಯೇ ಮಕ್ಕಳನ್ನು ವಿದ್ಯಾವಂತರನ್ನಾಗಿ, ಬುದ್ಧಿವಂತರನ್ನಾಗಿ ಮಾಡುವುದರ ಜೊತೆಗೆ ಆರೋಗ್ಯವಂತ ಮಕ್ಕಳನ್ನು ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶುಚಿತ್ವ ಕಾಪಾಡುವುದು ಪಾಲಿಕೆಯ ಜವಾಬ್ದಾರಿ ಮಾತ್ರವಲ್ಲ. ನಮ್ಮ ನಗರದ ಶುಚಿತ್ವಕ್ಕೆ ಕೈಜೋಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದೇ ರೀತಿ ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ಕೊಡುವ ಜವಾಬ್ದಾರಿ ಕೂಡ ಹೆತ್ತವರ ಪಾಲಿಗಿದೆ. ನಗರದ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಮನಪಾದೊಂದಿಗೆ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ಮೇಯರ್ ಕರೆ ನೀಡಿದರು.
ಶ್ರೀಮತಿ ಮಮತಾ ಮಾರ್ಲ ಅವರು ಮುಖ್ಯ ಅತಿಥಿಗಳಾಗಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೀನ ಸುಭಾಷ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಶರೋನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪೂಜಾ ಕಾಮಾತ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪುಟಾಣಿ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.






















