ಕನ್ನಡ ವಾರ್ತೆಗಳು

ದ್ವಿಚಕ್ರ ವಾಹನ ಕಳ್ಳರಿಬ್ಬರ ಬಂಧನ: ಮೂರು ವಾಹನ ವಶಕ್ಕೆ

Pinterest LinkedIn Tumblr

ಉಡುಪಿ: ದ್ವಿಚಕ್ರ ವಾಹನಗಳ ಕಳ್ಳರನ್ನು ಬಂಧಿಸಿರುವ ಉಡುಪಿ ಪೊಲೀಸರು ಅವರು ಕಳವುಗೈದಿದ್ದ 2 ದ್ವಿಚಕ್ರ ವಾಹನ, ದಾಖಲೆ ಇಲ್ಲದ ಇನ್ನೊಂದು ಬೈಕ್‌ ಸೇರಿ ಮೂರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಡೆಕಾರಿನ ಬಾಡಿಗೆ ಮನೆ ನಿವಾಸಿ ಮೂಲತಃ ಬಾಗಲಕೋಟೆ ಹುನಗುಂದದ ರಮೇಶ (23) ಮತ್ತು ಮಂಗಳೂರು ಜೆಪ್ಪು ಮಾರ್ನಮಿಕಟ್ಟೆಯ ವಾಮನ ನಾಯಕ್‌ ಫ್ಯಾಕ್ಟರಿ ಹಿಂಬದಿ ನಿವಾಸಿ ಸಂದೀಪ (29) ಬಂಧಿತರು.
Baik_theaft_arrest

ಹಲವೆಡೆ ಕಳವು: ನಗರ ಠಾಣೆಯ ಕ್ರೈಂ ಎಸ್‌ಐ ರಾಜಗೋಪಾಲ್‌ ಅವರು ಸಿಬಂದಿಯೊಂದಿಗೆ ಫೆ. 20ರಂದು ಉಡುಪಿ ಬೀಡಿನಗುಡ್ಡೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ನೀಲಿ ಬಣ್ಣದ ಆಕ್ಟಿವಾ ಹೋಂಡಾದಲ್ಲಿ ಹೋಗುತ್ತಿದ್ದ ರಮೇಶನನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ವಾಹನದ ದಾಖಲೆ ಇರಲಿಲ್ಲ. ವಿಚಾರಣೆ ನಡೆಸಿದಾಗ ಗೆಳೆಯ ಸಂದೀಪನ ಜೊತೆಗೂಡಿ 2013ರಲ್ಲಿ ಕಾವೂರು ಪಂಜಿಮೊಗರು ಎನ್ನುವಲ್ಲಿ ಕಳವುಗೈದಿದ್ದ ವಾಹನ ಇದಾಗಿದೆ ಎಂದು ತಿಳಿಸಿದ್ದ.

ಹಿಂದಿನಿಂದ ಕಪ್ಪು ಬಣ್ಣದ ಬಜಾಜ್‌ ಪಲ್ಸಾರ್‌ ವಾಹನದಲ್ಲಿ ಬರುತ್ತಿದ್ದ ಸಂದೀಪನನ್ನು ಕೂಡ ಪೊಲೀಸರು ತಡೆದು ನಿಲ್ಲಿಸಿದಾಗ ಆತ ಚಲಾಯಿಸುತ್ತಿದ್ದ ವಾಹನಕ್ಕೂ ಯಾವುದೇ ದಾಖಲೆ ಇರಲಿಲ್ಲ. ಕೂಲಂಕಷವಾಗಿ ವಿಚಾರಣೆ ನಡೆಸಿದಾಗ 2014ನೇ ಮೇ ತಿಂಗಳಿನಲ್ಲಿ ಮಂಗಳೂರಿನ ಅತ್ತಾವರ ಕಟ್ಟೆಯ ಬಳಿ ಕಳವು ನಡೆಸಿದ್ದ ನೀಲಿ ಬಣ್ಣದ ಪಲ್ಸರ್‌ ಬೈಕನ್ನು ರಮೇಶನ ಕಡೆಕಾರಿನ ಮನೆಯಲ್ಲಿ ಇರಿಸಿರುವುದಾಗಿ ಬಾಯ್ಬಿಟ್ಟಿದ್ದ.

ಎಸ್‌ಪಿ ಅಣ್ಣಾಮಲೈ ಕೆ. ನಿರ್ದೇಶನ, ಎಎಸ್‌ಪಿ ಸಂತೋಷ್‌ ಕುಮಾರ್‌, ಡಿವೈಎಸ್‌ಪಿ ಕೆ.ಎಂ. ಚಂದ್ರಶೇಖರ್‌, ಸಿಪಿಐ ಶ್ರೀಕಾಂತ್‌ ಕೆ. ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ವಿಚಾರಣೆ ನಡೆಸಿ ಮೂರು ಬೈಕ್‌ಗಳನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಾಜ್‌ಗೊಪಾಲ್‌ ನೇತೃತ್ವದ ತಂಡದಲ್ಲಿ ಸಿಬಂದಿ ಪ್ರಕಾಶ್‌, ಲಕ್ಷ್ಮಣ, ಮೋಹನ್‌ ಕೊತ್ವಾಲ್‌, ಸುಧಾಕರ ಭಂಡಾರಿ, ಪ್ರಸನ್ನ, ನಾಗರಾಜ್‌, ಶಂಕರ, ಹರ್ಷ ಕೆ.ಎಲ್‌., ವಿಶ್ವನಾಥ ಮತ್ತು ಚಾಲಕ ಸುಧಾಕರ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

Write A Comment