ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ `ಹಣಬು'(ಕಾಮನ ಹಬ್ಬ) ಆಚರಣೆ: ಶಿವರಾತ್ರಿ ಸಂಭ್ರಮಕ್ಕೆ ವಿಭಿನ್ನ ಸಂಪ್ರದಾಯ

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಶಿವರಾತ್ರಿ ಪ್ರಯುಕ್ತ ವಿವಿದೆಡೆ ಹಲವು ವಿಶಿಷ್ಟ ಆಚರಣೆಗಳು ನಡೆಯುವುದು ಸಾಮಾನ್ಯ. ಹಾಗೆಯೇ ಕುಂದಾಪುರ ತಾಲೂಕಿನ ಹಲವೆಡೆಗಳಲ್ಲಿ ಹಣಬು(ಹಣ್ಬು, ಕಾಮನಹಬ್ಬ) ಎಂಬ ಪುರಾತನ ಹಾಗೂ ವಿಶಿಷ್ಟ ಸಂಪ್ರದಾಯದ ಆಚರಣೆ ನಡೆಯುತ್ತದೆ.

OLYMPUS DIGITAL CAMERA OLYMPUS DIGITAL CAMERA OLYMPUS DIGITAL CAMERA OLYMPUS DIGITAL CAMERA OLYMPUS DIGITAL CAMERA OLYMPUS DIGITAL CAMERA

(ಸಾಂದರ್ಭಿಕ ಚಿತ್ರಗಳು)

ಏನಿದು ಆಚರಣೆ?: ಶಿವರಾತ್ರಿಯ ದಿನ ಅಂದರೆ ಜಾಗರಣೆ ಹಾಗೂ ಉಪವಾಸ ನಡೆಯುವ ದಿನ ಬೋಗಿ ಮರದ ಕೊಂಬೆಯನ್ನು ಕತ್ತರಿಸಿ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ.ಮರುದಿನದ ಅಮವಾಸ್ಯೆ  ರಾತ್ರಿ ಆ ಮರಕ್ಕೆ ಬೆಂಕಿ ಹಾಕಿ ಪೂಜೆ ಸಲ್ಲಿಸುವ ಮೂಲಕ ಪದ್ದತಿ ಆಚರಿಸುವ ನಾಗರೀಕರು ಮರಕ್ಕೆ ಸುತ್ತು ಹಾಕಿ ವಿಶಿಷ್ಟವಾದ ಹಾಡುಗಳನ್ನು ಹಾಡುತ್ತಾ  ಊರಿನ ಮನೆ ಮನೆಗೆ ತೆರಳಿ ಹಣಬಿನ ಹಾಡು ಹಾಡುತ್ತಾರೆ.ಮನೆಯವರು ಅವರಿಗೆ ಅಕ್ಕಿ ಕಾಯಿ ಹಾಗೂ ವಿಳ್ಯೆದೆಲೆಯೊಂದಿಗೆ ಯಥಾನುಶಕ್ತಿ ಹಣ ನೀಡಿ ಕಳುಹಿಸುತ್ತಾರೆ. ಹೀಗೆ ತಂಡ ಕಟ್ಟಿಕೊಂಡು ಊರಿನ ಅಷ್ಟು ಮನೆಗಳಿಗೆ ತೆರಳುವ ಅವರು ಬೆಳಿಗ್ಗಿನ ಜಾವದವರೆಗೆ ಪದ್ಧತಿ ಆಚರಿಸುತ್ತಾರೆ. ಕೊನೆಯಲ್ಲಿ ಒಟ್ಟಾಗುವ ಹಣವನ್ನು ಕೆಲಭಾಗ ದೇವರಿಗೆ ಸಮರ್ಪಿಸಿ ತಾವೂ ಹಂಚಿಕೊಳ್ಳುತ್ತಾರೆ.

ಪದ್ದತಿ ಆಚರಿಸುವ ಊರಿನ ಪ್ರಮುಖ ವ್ಯಕ್ತಿ ಅಥವಾ ಹಿರಿಯ ಮನೆತನದವರ ಮುಖ್ಯಸ್ಥಿಕೆಯಲ್ಲಿ ಹಣಬು ಸುಡುವ ಪದ್ದತಿಯೆಂಬ ಹೆಸರಿನಲ್ಲಿ ಗದ್ದೆಯಲ್ಲಿ ನೆಟ್ಟ ಮರಕ್ಕೆ ಬೆಂಕಿ ನೀಡಲಾಗುತ್ತದೆ. ಈ ಪ್ರಕ್ರಿಯೆ ಬಳಿಕ ಮನೆ ಮನೆಗೆ ತೆರಳುವ ಇವರು ಬೆಳಿಗ್ಗಿನ ಜಾವದವರೆಗೂ ಊರಿನ ಮನೆ-ಮನೆಗೆ ತೆರಳುತ್ತಾರೆ.

OLYMPUS DIGITAL CAMERA Kundapura_Kama Dahana_Hanabu (1) Kundapura_Kama Dahana_Hanabu (2) OLYMPUS DIGITAL CAMERA OLYMPUS DIGITAL CAMERA OLYMPUS DIGITAL CAMERA OLYMPUS DIGITAL CAMERA

(ಸಾಂದರ್ಭಿಕ ಚಿತ್ರಗಳು)

ಹಾಡುಗಾರಿಕೆಗೆ ಪ್ರಾಮುಖ್ಯತೆ: ಈ ಆಚರಣೆಯಲ್ಲಿ ಹಾಡುಗಾರಿಕೆ(ಪದ ಹೇಳುವುದು)ಗೆ ಬಹಳಷ್ಟು ಪ್ರಾಮುಖ್ಯವಿದೆ. ವಿಶಿಷ್ಟ ರೀತಿಯಲ್ಲಿ ಪದ ಹೇಳುವ ಇವರು ಊರಿನ ಜನರನ್ನು ಕೆಲಕಾಲ ರಂಜಿಸುತ್ತಾರೆ.

ದಿಂ ಸಾಲ್ ಎನಿರೋ…ದಿಮ್ ಕುಟಿಕಾ ಕುಣಿರೋ…ಕಾಮೋ ಭೀಮೋ ಹೋಗೊವಾಗೆ ಬಾಮೋ….ಕಾಮಣ್ಣನ ಮಕ್ಕಳೋ ಮಹಾ ಪುಂಡಗಾರರೋ…ಮಾಹಾ ಪುಂಡಗಾರರಾಗಿ ಊರಿಗೆನೇ ಮಾಡಿರೋ….? ಊರಿಗೆನೇ ಮಾಡಿದೋರು ಕೇರಿಗೇನೆ ಮಾಡಿರೋ..? ಕೇರಿಗೇನೆ ಮಾಡದೋರು ಬೀದಿಗೇನೆ ಮಾಡಿರೋ…

ಇಂದಿಷ್ಟೊತ್ತಿಗೆ ಬಹುದೊಡ್ಡ ಹಬ್ಬವೋ…ನಾಳಿಷ್ಟೊತ್ತಿಗೆ ಬಟ್ಟೆಂಬ ಬಯಲೋ…?  ಎಂದು ಹಾಡಿನ ಚರಣ ಆರಂಭಿಸುತ್ತಾರೆ.

ಇದ್ ನಮ್ಮ ದಣಿಗಳ ಮನೆಯೋ..ಇದ್ ನಮ್ಮ ದಣಿಗಳು ಒರಗುವಾ ಮಂಚವೋ….ಎಂಬುದಾಗಿ ಊರ ಪ್ರಮುಖ ದಣಿಗಳ ಮನೆ ಸದಾ ಹಸನಾಗಿರುತ್ತದೆ ಮತ್ತು ಇರಬೇಕು ಎಂಬುದಾಗಿ ಹೇಳುತ್ತಾರೆ.

ರಾತ್ರಿಯ ಸುತ್ತಾಟದ ಬಳಿಕ ಮರುದಿನ ಬೆಳಿಗ್ಗೆ ಕೆಲವಾರು ಮನೆಗಳಿಗೆ ತೆರಳುವ ಇವರು ಪುನಃ ಹಿಂದಿನ ದಿನ ಮರ ನೆಟ್ಟ ಗದ್ದೆಗೆ ತೆರಳಿ ಅಲ್ಲಿ ಕೆಲವು ವಿಶಿಷ್ಟ ಆಚರಣೆಗಳನ್ನು ನಡೆಸುತ್ತಾರೆ. ಕಾಯಿ ಒಡೆಯುವುದು, ಹಿಡಿಗಾಯಿ ಆಟ ಮೊದಲಾದ ಪ್ರಮುಖ ಆಚರಣೆಗಳು ಈ ಸಂದರ್ಭದಲ್ಲಿ ನಡೆಯುತ್ತದೆ. ಇದಾದ ಬಳಿಕ ನೆಟ್ಟ ಮರವನ್ನು ಸಂಪೂರ್ಣ ಸುಟ್ಟು ಕಾಮನನ್ನು ದಹಿಸುವ ಪ್ರಕ್ರಿಯೆ ನಡೆಸುತ್ತಾರೆ.

ಹಬ್ಬದ ಪ್ರಮುಖ ಉದ್ದೇಶ ಕಾಮ(ಮನ್ಮಥ)ನನ್ನು ಊರಿನಿಂದ ಹೊರ ಕಳುಹಿಸಲಾಗುತ್ತದೆ.ಮತ್ತು ಇದರಿಂದ ಊರ ಜನರಿಗೆ ಒಳ್ಳೆದಾಗುತ್ತದೆ ಎಂಬುದಾಗಿದೆ.

ಇತ್ತೀಚೆಗೆ ಹಣಬು ಆಚರಣೆಯ ಪದ್ಧತಿ ಬಗ್ಗೆ ಯುವ ಜನಾಂಗ ಆಸಕ್ತಿ ಕಳೆದುಕೊಂದಿದ್ದು ರಾತ್ರಿ ನಾವು ತೆರಳುವ ಹಲವು ಮನೆಗಳಲ್ಲಿ ಈ ಆಚರಣೆಯ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಅವರೆಲ್ಲಾ ರಾತ್ರಿ ನಾವು ತೆರಳಿ ಹಾಡು ಹಾಡುವುದನ್ನು ಕಂಡು ಆಶ್ಚರ್ಯ ಪಡುವುದು ಉಂಟು ಎಂದು ಅಣ್ಣಪ್ಪ ಬೆಟ್ಟಿನಮನೆ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

 ಈ ಆಚರಣೆಯಲ್ಲಿ ಹಾಡುಗಾರಿಕೆ ಅತೀ ಮುಖ್ಯವಾಗಿದ್ದು ಇದು ಮೊದಲಿನಿಂದಲೂ ನಡೆದು ಬಂದ ಪದ್ದತಿಯಾಗಿದೆ. ಇತ್ತೀಚೆಗೆ ಹಾಡುಗಾರರ ಸಂಖ್ಯೆಯೂ ಕಡಿಮೆ ಇದ್ದು ಕೆಲವೆಡೆ ಉಮೇದುದಾರರ ಆಸಕ್ತಿ ಕಡಿಮೆಯಾಗಿ ಪುರಾತನವಾದ ಈ ಆಚರಣೆ ಅವನತಿಯತ್ತ ಸಾಗುತ್ತಿದೆ, ಎನ್ನುತ್ತಾರೆ ಬಾಬು ಬೀಜಾಡಿ.

 ಬಹಳ ಹಿಂದಿನಿಂದಲೂ ನಡೆದು ಬಂದ ಆಚರಣೆ ಇದಾಗಿದ್ದು ಬಹಳ ಸಂಪ್ರದಾಯಬದ್ದವಾಗಿ ಹಾಗೂ ನಿಯಮದಿಂದ ಆಚರಿಸಬೇಕು. ಹಾಗಾದಾಗ ಮಾತ್ರ ಒಳಿತಾಗುತ್ತದೆ.ಆಚರಣೆಯಲ್ಲಿ ಲೋಪ-ದೋಷಗಳಾದಲ್ಲಿ ಅಪಾಯ ಖಂಡಿತ ಎನ್ನುತ್ತಾರೆ ಬೀಜಾಡಿಯ ಆನಂದ್ .

 

 

Write A Comment