ಕನ್ನಡ ವಾರ್ತೆಗಳು

ಫೆ.21: ವಿಶ್ವ ಕೊಂಕಣಿ ಸ್ಕಾಲರ್‌ಶಿಪ್ ಅಲ್ಯುಮ್ನಿ ಸಂಘದಿಂದ ಪ್ರೇರಣಾ – ಯುವಜನರಿಗಾಗಿ ವಿಶಿಷ್ಟ ಕಾರ್ಯಕ್ರಮ.

Pinterest LinkedIn Tumblr

prerana_aulumin_day_1

ಮಂಗಳೂರು,ಫೆ.18 ವಿಶ್ವ ಕೊಂಕಣಿ ಕೇಂದ್ರದಿಂದ ಪ್ರವರ್ತಿತ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ಅಲ್ಯುಮ್ನಿ ಸಂಘವು ಸ್ಥಳೀಯ ವಿದ್ಯಾರ್ಥಿಗಳ ಹಾಗೂ ಯುವಜನರ ಪ್ರಯೋಜನಕ್ಕಾಗಿ ಪ್ರೇರಣಾ ಎಂಬ ಒಂದು ದಿನದ ಸಮಾವೇಶವನ್ನು ಫೆಬ್ರುವರಿ 21 ರಂದು ಮಂಗಳೂರಿನ ಟಿ.ವಿ.ರಮಣ ಪೈ ಸಭಾಭವನದಲ್ಲಿ ಆಯೋಜಿಸಿದೆ. ವಿಶ್ವ ಕೊಂಕಣಿ ಕೇಂದ್ರದ ವಿಶನ್ ಟಿ.ವಿ.ಎಮ್ ಕಾರ್ಯಕ್ರಮದ ಅಂಗವಾಗಿರುವ ಈ ಸಮಾವೇಶವನ್ನು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈಯವರ ಉಪಸ್ಥಿತಿಯಲ್ಲಿ ಚಿಂತಕ, ಪದ್ಮಶ್ರೀ ಪುರಸ್ಕೃತ ಶ್ರೀ ಟಿ.ವಿ.ಮೋಹನದಾಸ ಪೈಯವರು ಉದ್ಘಾಟಿಸಲಿರುವರು. ಹಾಗೂ ವಿ.ಎ.ಎ. ಇದರ ಅಧ್ಯಕ್ಷೆ ಕು. ಲೆನಿಟಾ ಜೆನಿಫರ್ ಮೆನೆಜಸ್ ರವರು ಸ್ವಾಗತ ಭಾಷಣ ಮಾಡಲಿರುವರು.

ಒಂದು ವಾರ್ಷಿಕ ಸಮಾವೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿರುವ ಪ್ರೇರಣಾದ ಈ ಆವೃತ್ತಿಯಲ್ಲಿ ವಿವಿಧರಂಗಗಳಲ್ಲಿ ಸಾಧನೆಯನ್ನು ಮಾಡಿರುವ ಆರು ಜನ ಸಾಧಕರು ತಮ್ಮ ಸಾಧನೆಯ ಹಾದಿಯಲ್ಲಿನ ಅನುಭವಗಳನ್ನು ವಿದ್ಯಾರ್ಥಿ ಹಾಗೂ ಯುವಜನರೊಂದಿಗೆ ಹಂಚಿಕೊಳ್ಳಲಿರುವರು. ಇಂಡೊಕೊ ರೆಮೆಡೀಸ್ ನ ಸಹ ಆಡಳಿತ ನಿರ್ದೇಶಕ ಸಂದೀಪ್ ಬಾಂಬೋಲ್ಕರ್, ಮಾಧ್ಯಮ ಹಾಗೂ ಬ್ರಾಂಡಿಂಗ್ ಪರಿಣತ ಮುದರ್ ಪತೇರ್ಯಾ, ಶಿಕ್ಷಣ ಹಾಗೂ ಸಾಮಾಜಿಕ ರಂಗದ ಚಿಂತಕ ಟಿ.ವಿ.ಮೋಹನದಾಸ ಪೈ, ಝೀರೋಧಾ ಡೊಟ್ ಕೊಮ್ ಖ್ಯಾತಿಯ ಯುವ ಉದ್ಯಮಿ ನಿತಿನ್ ಕಾಮತ್, ಸಿ‌ಎನ್‌ಬಿಸಿ ಟಿವಿ ಉದ್ಘೋಷಕಿ ಸೋನಿಯಾ ಶೆಣೈ, ಹಾಗೂ ಮೈಂಡ್ ರೀಡರ್ ಎಂಬ ಖ್ಯಾತಿಯ ಜಾದೂಗಾರ ನಕುಲ್ ಶೆಣೈ ಈ ವರ್ಷದ ಪ್ರೇರಣಾದಲ್ಲಿ ಮಾತನಾಡಲಿರುವ ಸಾಧಕರು.

prerana_aulumin_day_2

ಪ್ರೇರಣಾದಲ್ಲಿ ಮಾತನಾಡಲಿರುವ ಸಾಧಕರು :ಸಂದೀಪ್ ಬಾಂಬೋಲ್ಕರ್,ಮುದರ್ ಪತೇರ್ಯಾ,ನಿತಿನ್ ಕಾಮತ್:, ಸೋನಿಯಾ ಶೆಣೈ, ನಕುಲ್ ಶೆಣೈ,ಮೋಹನ್ ದಾಸ್ ಪೈ.

ಪ್ರೇರಣಾದ ಪ್ರಯೋಜನವನ್ನು ಎಲ್ಲಾ ಸ್ಥಳೀಯ ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ವಿದ್ಯಾರ್ಥಿಗಳೂ ಭಾಗವಹಿಸಲು ಅನುವು ಮಾಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಉಚಿತ ಪ್ರವೇಶ ಪತ್ರಗಳಿಗಾಗಿ ಆಯೋಜಕರನ್ನು ಸಂಪರ್ಕಿಸಬಹುದು. ಈ ಕಾರ್ಯಕ್ರಮವನ್ನು ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಹಾಗೂ ವಿಶ್ವ ಕೊಂಕಣಿ ಕೇಂದ್ರವು ಆಯೋಜಿಸುತ್ತಿದೆ. ತಾವು ಪಡೆದುದನ್ನು ಸಮಾಜಕ್ಕೆ ಮತ್ತೆ ನೀಡುವ ಆಶಯದಿಂದ ಪ್ರೇರೇಪಿತವಾಗಿರುವ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿ.ಕೆ.ಎಸ್.ಎಸ್.ಎಫ಼್. ಅಲ್ಯುಮ್ನಿ ಅಸೋಸಿಯೇಶನ್‌ನ ಸದಸ್ಯರು ಇಂದು ವಿಶ್ವದಾದ್ಯಂತ ಅನೇಕ ಕಾರ್ಪೋರೇಟ್ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊಂಕಣಿ ಭಾಷಿಕ ಸಮುದಾಯವು ಈ ಪ್ರಾಂತ್ಯದ ಸರ್ವತೋನ್ಮುಖ ಅಭಿವೃದ್ಧಿಗೆ ಕಳೆದ ಶತಮಾನದಲ್ಲಿ ವಹಿಸಿದ ಪಾತ್ರದ ಪರಂಪರೆಯನ್ನು ಮುಂದುವರೆಸುತ್ತಾ, ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಈ ಪ್ರಾಂತ್ಯದ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ನಾವಿನ್ಯಶೀಲತೆಯನ್ನು ಪ್ರೇರೇಪಿಸುವ ಸಲುವಾಗಿ ಒಂದು ವೇದಿಕೆಯನ್ನು ರೂಪಿಸುವ ನಿಟ್ಟಿನಲ್ಲಿ ಪ್ರೇರಣಾ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ.

Write A Comment