ಕನ್ನಡ ವಾರ್ತೆಗಳು

ಮಾದಕ ವ್ಯಸನಗಳ ವಿರುದ್ಧ ಜಾಗೃತಿ: ವಿದ್ಯಾರ್ಥಿ ಸಂಘಟನೆಗಳಿಗೆ ಕರೆ

Pinterest LinkedIn Tumblr

kavoor_drugs_news

ಮಂಗಳೂರು, ಫೆ.16 : ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘಟನೆಗಳೂ ಇದರ ವಿರುದ್ಧ ಹೆಚ್ಚು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಮೇಲ್ವಿಚಾರಕ ಜಯರಾಂ ಪೂಜಾರಿ ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತ ಆಶ್ರಯದಲ್ಲಿ  ನಡೆದ ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಹದಿಹರೆಯದ ಆರೋಗ್ಯ ಸಮಸ್ಯೆಗಳ ಕುರಿತು ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಉತ್ತಮ ಭವಿಷ್ಯದ ಅರಿವಿಲ್ಲದೆ, ವಿದ್ಯಾರ್ಥಿಗಳು ಚಟಗಳಿಗೆ ಬಲಿ ಬೀಳುತ್ತಿರುವ ವಿದ್ಯ,ಮಾನ ಅಪಾಯಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳು ವಿವಿಧ ರೂಪಗಳಲ್ಲಿ ಹದಿಹರೆಯದವರ ಕೈಗೆ ತಲುಪುವಂತಹ ವಾತಾವರಣ ಉಂಟಾಗುತ್ತಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ದೈನಂದಿನ ಜೀವನದಲ್ಲಿ ಬಳಕೆಯಾಗುವ ವಿವಿಧ ವಸ್ತುಗಳ ಮೂಲಕ ಅಮಲು ಪದಾರ್ಥಗಳನ್ನು ಸೇವಿಸುವಂತಹ ಪ್ರಕರಣಗಳು ವರದಿಯಾಗುತ್ತಿವೆ. ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬೇಕಾದ ಎಳೆಯ ಜೀವಗಳು ಆರಂಭದಲ್ಲೇ ಅಡ್ಡದಾರಿ ಹಿಡಿದು ಕಮರಿ ಹೋಗುವಂತಾಗುವುದು ಕಳವಳಕರಿಯಾಗಿದೆ. ಸ್ಥಿಮಿತ ಕಳೆದುಕೊಂಡ ವ್ಯಕ್ತಿಯು ಎಂತಹದ್ದೇ ಕೃತ್ಯ ಮಾಡಲು ಹಿಂಜರಿಯುವುದಿಲ್ಲ. ಇದು ಸಮಾಜದಲ್ಲೂ ಅಶಾಂತಿಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು. ದುಶ್ಚಟಗಳಿಗೆ ಸಂಪಾದನೆಯು ಹರಿದು ಹೋಗುತ್ತಿರುವುದರಿಂದ ಬಡತನವು ಹಾಗೆಯೇ ಮುಂದುವರಿಯುತ್ತಿದೆ. ಇದರಿಂದ ದೇಶದ ಆರ್ಥಿಕತೆಗೂ ಹೊಡೆತವಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ತಾರಾ ರಾವ್, ಹದಿಹರೆಯದಲ್ಲಿ ಪ್ರತಿಯೊಂದು ಹೊಸ ವಸ್ತುಗಳು ಆಕರ್ಷಣೆಯಾಗಿ ಕಂಡು, ಚಟಗಳಿಗೆ ಹಾದಿಯಾಗುತ್ತದೆ. ಪ್ರತಿಭಾವಂತ ಮತ್ತು ಆರೋಗ್ಯವಂತ ಯುವಜನತೆ ದೇಶಕ್ಕೆ ಆಸ್ತಿಯಾಗಿದೆ. ದೇಶ ಬಲಿಷ್ಠವಾಗಬೇಕಾದರೆ ನಾವು ಯಾವುದೇ ಸವಾಲುಗಳನ್ನೆದುರಿಸಲು ಸಿದ್ಧರಾಗಬೇಕು. ದೇಶವನ್ನು ಮಾದಕ ವಸ್ತು ಮುಕ್ತ ಮಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಾಸ್ತಾವಿವಾಗಿ ಮಾತನಾಡಿದರು. ಕಾವೂರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅಮೃತಾಕ್ಷಿ ಜಿ. ಸ್ವಾಗತಿಸಿದರು. ಕು. ಗೀತಾಂಜಲಿ ಕಾರ್ಯಕ್ರಮ ನಿರೂಪಿಸಿ, ಕು. ಅಮೃತವಾಣಿ ವಂದಿಸಿದರು.

Write A Comment