ಕನ್ನಡ ವಾರ್ತೆಗಳು

ಮಗು ಅಪಹರಿಸಿ ರೂ.80 ಸಾವಿರಕ್ಕೆ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಸೇರಿ ನಾಲ್ವರ ಬಂಧನ.

Pinterest LinkedIn Tumblr

child_kidnap_cought_police

ಬೆಂಗಳೂರು,ಫೆ.16 : ಒಂದೂವರೆ ವರ್ಷದ ಮಗುವನ್ನು ಅಪಹರಿಸಿ ರು.80 ಸಾವಿರಕ್ಕೆ ಮಾರಾಟ ಮಾಡಿದ ಪ್ರಕರಣ ಸಂಬಂಧ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ತಿಲಕ ನಗರ ಪೊಲೀಸರು ಮಗುವನ್ನು ರಕ್ಷಿಸಿ ಪಾಲಕರ ಮಡಿಲಿಗೆ ಒಪ್ಪಿಸಿದ್ದಾರೆ.

ಕನಕಪುರ ರಸ್ತೆ ಆವಲಹಳ್ಳಿ ನಿವಾಸಿ ಅನ್ಸರ್ ಪಾಷಾ(38) ಈತನ ಪತ್ನಿ ಫಿರ್ದೂಸ್, ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿಯ ಮಧ್ಯವರ್ತಿ ಆದಿಲ್(35), ಮಗು ಖರೀದಿಸಿದ್ದ ಸೈಯ್ಯದ್ ರಿಜ್ವಾನ್(52) ಬಂಧಿತರು. ಜೆ.ಪಿ ನಗರ ಜೆ.ಡಿ ಮರ ಸಮೀಪದ ಕೊಳೆಗೇರಿ ನಿವಾಸಿಗಳಾದ ರಹೀಂ ಖಾನ್ ಹಾಗೂ ಆಯೇಷಾ ದಂಪತಿ ಪುತ್ರ ಸುಭಾನ್ ಖಾನ್ ರಕ್ಷಣೆಗೊಂಡ ಬಾಲಕ.  ಪ್ರಕರಣದಲ್ಲಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ಪ್ರಮುಖ ಆರೋಪಿ ಮೀನಿನ ಅಂಗಡಿಯಲ್ಲಿ ಸಹಾಯಕನಾಗಿದ್ದ ಗೌಸ್ ಪೀರ್, ಆಟೊ ಚಾಲಕರಾದ ಹಸನ್ ಹಾಗೂ ಬಾಬಾ ಜಾನ್ ಎಂಬುವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವರ: ವಾಂತಿ ಭೇದಿಯಿಂದ ಬಳಲುತ್ತಿದ್ದ ಬಾಲಕ ಸುಭಾನ್‍ನನ್ನು ಪಾಲಕರು ಫೆ.6ರಂದು ಮಧ್ಯಾಹ್ನ ಜಯನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದರು. ಪರಿಚಿತನಾಗಿದ್ದ ಆರೋಪಿ ಗೌಸ್ ಪೀರ್, ಪೂರ್ವಯೋಜಿತ ಸಂಚಿನಂತೆ ಬಾಲಕನನ್ನು ಮಾತನಾಡಿಸಿ ಬಿಸ್ಕತ್ ಕೊಡಿಸುವುದಾಗಿ ಪಾಲಕರಿಗೆ ಹೇಳಿ ಕರೆದುಕೊಂಡು ಹೋಗಿದ್ದ. ಈತನಿಗಾಗಿ ವಾಹನ ಸಿದ್ಧಪಡಿಸಿಕೊಂಡು ಹಸನ್ ಹಾಗೂ ಬಾಬಾಜಾನ್ ಕಾಯುತ್ತಿದ್ದರು. ಮೂವರು ಸೇರಿ ಬಾಲಕನನ್ನು ಅಪಹರಿಸಿಕೊಂಡು ಆಂಧ್ರಪ್ರದೇಶದ ಮದನಪಲ್ಲಿಗೆ ತೆರಳಿದ್ದರು.

ಇತ್ತ ಬಿಸ್ಕತ್ ಕೊಡಿಸಲೆಂದು ಕರೆದುಕೊಂಡು ಹೋಗಿದ್ದ ಗೌಸ್ ಪೀರ್ ವಾಪಸ್ ಬಂದಿರಲಿಲ್ಲ. ಹೀಗಾಗಿ, ಪಾಲಕರು ರಾತ್ರಿವರೆಗೂ ಹುಡುಕಾಡಿ ಸಂಜೆ 8 ಗಂಟೆಗೆ ತಿಲಕ್ ನಗರ
ಠಾಣೆಗೆ ದೂರು ನೀಡಿದ್ದರು.

ಗ್ರಾಹಕರ ಹುಡುಕಾಟ : 
ಆಂಧ್ರ ಪ್ರದೇಶದ ಮದನಪಲ್ಲಿ ನಿವಾಸಿ ಆದಿಲ್ ಎಂಬಾತನ ಮೂಲಕ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿ ಸೈಯ್ಯದ್ ರಿಜ್ವಾನ್‍ಗೆ ಮಗುವನ್ನು ರು.80 ಸಾವಿರಕ್ಕೆ ಆರೋಪಿಗಳು ಮಾರಿದ್ದರು. ಮಗು ಖರೀದಿಸಿದ್ದ ರಿಜ್ವಾನ್, ಮಕ್ಕಳಾಗಲಿಲ್ಲ ಎಂಬ ಕಾರಣ ಮೂರು ಮದುವೆಯಾಗಿದ್ದ. ಆರೋಪಿಗಳಾದ ಗೌಸ್ ಪೀರ್, ಹಸನ್ ಹಾಗೂ ಬಾಬಾ ಜಾನ್, ಮಗುವನ್ನು ಕಳ್ಳಸಾಗಣೆ ಮಾಡಿರುವುದಲ್ಲದ್ದೇ ಪಾಲಕರೇ ಮಾರಾಟ ಮಾಡುತ್ತಿದ್ದಾರೆ ಎಂದು ನಂಬಿಸಿ ಮಾರಿದ್ದರು.

ಪಾಲಕರ ಸೃಷ್ಟಿ:
ಅಸಲಿ ಪಾಲಕರಿಂದಲೇ ಮಗು ಮಾರಾಟವಾಗುತ್ತಿದೆ ಎಂದು ಬಿಂಬಿಸಲು ನಕಲಿ ತಂದೆ ತಾಯಿ ಸೃಷ್ಟಿಸಿದ್ದರು. ಬೆಂಗಳೂರಿನ ಫಿರ್ದೊಸ್ ಹಾಗೂ ಅನ್ಸರ್ ಪಾಷಾ ದಂಪತಿಯೇ ಸುಭಾನ್ ತಂದೆ ತಾಯಿ ಎಂದು ಉದ್ಯಮಿ ಸೈಯ್ಯದ್ ರಿಜ್ವಾನ್‍ಗೆ ಸುಳ್ಳು ಹೇಳಿದ್ದರು. ಮಗು ಮಾರಾಟ ಮಾಡಿ ಬಂದ ಹಣದಲ್ಲಿ ರು.10 ಸಾವಿರ ನಕಲಿ ದಂಪತಿಗೆ ನೀಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದಾಗ ಮೊದಲು ಪ್ರಮುಖ ಆರೋಪಿ ಗೌಸ್ ಖಾನ್ ಬಗ್ಗೆ ಶೋಧ ಆರಂಭಿಸಿದರು. ಅದಕ್ಕಾಗಿ ಆತನ ಮೂವರು ಪತ್ನಿಯರ ಬಳಿ ಮಾಹಿತಿ ಕಲೆ ಹಾಕಲು ಮುಂದಾದರು. ಮೊದಲನೇ ಪತ್ನಿಗೆ ಮಗುವಿನ ಅಪಹರಣದ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಎರಡನೇ ಪತ್ನಿಗೂ ಮಾಹಿತಿ ಇರಲಿಲ್ಲ. ಕೊನೆಗೆ ಮೂರನೇ ಪತ್ನಿ ಸಲ್ಮಾ ಎಂಬುವರನ್ನು ಕೇಳಿದಾಗ ಮಗುವಿನ ಬಗ್ಗೆ ಮಾತನಾಡುತ್ತಿದ್ದ ಎಂದು ಸುಳಿವು ನೀಡಿದಳು.

ಈ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಫೋನ್ ನಂಬರ್ ಬೆನ್ನತ್ತಿ ಮದನಪಲ್ಲಿಯಲ್ಲಿ ಮಧ್ಯವರ್ತಿ ಆದಿಲ್‍ನನ್ನು ಬಂಧಿಸಿದರು. ಆತ ನೀಡಿದ ಮಾಹಿತಿ ಮೇರೆಗೆ ಮಗು ಕೊಂಡಿದ್ದ ರಿಜ್ವಾನ್‍ನನು ಬಂಧಿಸಿದರು. ಆದರೆ ರಿಜ್ವಾನ್‍ರ ಪತ್ನಿ ಮಗುವಿನ ಜತೆ ಸಂಬಂಧಿಕರ ಭೇಟಿ ಮಾಡಲು ಕೊಲ್ಹಾಪುರಕ್ಕೆ ತೆರಳಿದ್ದರು.ಹೀಗಾಗಿ, ಪೊಲೀಸರ ತಂಡ ಕೊಲ್ಹಾಪುರಕ್ಕೆ ತೆರಳಿ ಮಗುವನ್ನು ರಕ್ಷಿಸಿ ಬೆಂಗಳೂರಿಗೆ ಕರೆತಂದು ನಕಲಿ ತಂದೆ ತಾಯಿ, ಮಧ್ಯವರ್ತಿಯನ್ನು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Write A Comment