ಕನ್ನಡ ವಾರ್ತೆಗಳು

ರಾಮಕೃಷ್ಣ ಹೆಗಡೆ ಪುತ್ರ ಭರತ್ ವಿಧಿವಶ.

Pinterest LinkedIn Tumblr

ramahrshna_son_died

ಬೆಂಗಳೂರು,ಫೆ.14 : ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಪುತ್ರ ಭರತ್ ಹೆಗಡೆ (60) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಸಾಯಂಕಾಲ 4.30 ಕ್ಕೆ ಮೃತಪಟ್ಟಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿ ದುಡಿ ಯುತ್ತಿದ್ದ ಭರತ್ ಹೆಗಡೆ ರಾಜಕಾರಣದಿಂದ ದೂರವಿದ್ದರು. ತಮ್ಮ ತಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಅವರು ರಾಜಕಾರಣದ ಪಡಸಾಲೆಯಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಭರತ್ ಹೆಗಡೆ ಅವರಿಗೆ ತಾಯಿ ಶಕುಂತಲಾ ಹೆಗಡೆ, ಸೋದರಿಯರಾದ ಮಮತಾ ಮತ್ತು ಸಮತಾ, ಪತ್ನಿ ಸುನೈನಾ ಮಕ್ಕಳಾದ ಇಶಾ ಮತ್ತು ಅವನೀಶ್ ಇದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಸದಾಶಿವನಗರದಲ್ಲಿರುವ ಹೆಗಡೆಯವರ ನಿವಾಸ ಕೃತಿಕಾದಲ್ಲಿ ಇಡಲಾಗಿದ್ದು, ಶುಕ್ರವಾರ ಬೆಳಗ್ಗೆ 12 ಗಂಟೆಗೆ ಹೆಬ್ಬಾಳದಲ್ಲಿರುವ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಗೊಳಿಸಲಾಗುತ್ತದೆ ಎಂದು ಹೆಗಡೆ ಕುಟುಂಬದ ಆಪ್ತ, ಮಾಜಿ ಸಚಿವ ಡಾ. ಎಂ.ಪಿ.ನಾಡಗೌಡ `ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಸಿಎಂ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ರಾಮಕೃಷ್ಣ ಹೆಗಡೆ ಅವರ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಭರತ್ ಹೆಗಡೆ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಅಗಲಿಕೆಯ ನೋವನ್ನು ಸಹಿಸಿಕೊಳ್ಳುವಂತೆ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಭರತ್ ಹೆಗಡೆ ಸಾವಿಗೆ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಭರತ್ ಬಗ್ಗೆ ಬಾಲ್ಯದಿಂದಲೂ ನಾನು ಬಲ್ಲೆ. ತಂದೆ ಮುಖ್ಯಮಂತ್ರಿಯಾಗಿದ್ದರೂ ಯಾವುದೇ ದರ್ಪ ಮತ್ತು ಪ್ರಭಾವ ಪ್ರದರ್ಶನ ಮಾಡದ ಭರತ್ ರಾಜಕಾರಣದಿಂದ ದೂರವೇ ಉಳಿದಿದ್ದರು. ಅವರ ಅಗಲಿಕೆಯಿಂದ ಉತ್ತಮ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ. ಮಾಜಿ ಸಚಿವಎಂ.ಸಿ.ನಾಣಯ್ಯ ಅವರೂ ಭರತ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜಕಾರಣದಿಂದ ದೂರ : ತಂದೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಭರತ್ ಹೆಗಡೆ ರಾಜಕಾರಣಕ್ಕೆ ಪ್ರವೇಶಿಸಿರಲಿಲ್ಲ. ಕುಟುಂಬ ರಾಜಕಾರಣ ಸಲ್ಲ ಎಂಬ ಹೆಗಡೆಯವರ ವಾದಕ್ಕೆ ಭರತ್ ಪೂರಕವಾಗಿ ನಡೆದುಕೊಂಡಿದ್ದರು. ಹೀಗಾಗಿ ಅವರು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೆಲ ವರ್ಷದ ಹಿಂದೆ ಅವರು ಸಕ್ರಿಯ
ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಾರೆ. ರಾಷ್ಟ್ರೀಯ ಪಕ್ಷಕ್ಕೆ ಸೇರುತ್ತಾರೆಂಬ ಸುದ್ದಿಗಳು ಇದ್ದರೂ ಅದು ನಿಜವಾಗಲಿಲ್ಲ. ಆ ಮಟ್ಟಿಗೆ ಭರತ್ ತಂದೆಯ ಆದರ್ಶವನ್ನು ಕೊನೆಯವರೆಗೆ ಪಾಲಿಸಿದ್ದರು.

Write A Comment