ಕನ್ನಡ ವಾರ್ತೆಗಳು

ನ್ಯಾಯಾಧೀಶರ ಸಹಿ ಮತ್ತು ಸೀಲುಗಳ ಪೋರ್ಜರಿ ಪ್ರಕರಣ : ಆರೋಪಿ ವಕೀಲ ಎ.ಸಿ.ಜಯರಾಜ್ ನ್ಯಾಯಾಲಯಕ್ಕೆ ಶರಣು

Pinterest LinkedIn Tumblr

Ac_jayaraj_arest

ಮಂಗಳೂರು: ಮಂಗಳೂರು ಸೆಷನ್ಸ್ ನ್ಯಾಯಾಧೀಶರ ಸಹಿ ಮತ್ತು ಸೀಲುಗಳನ್ನು ಪೋರ್ಜರಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಂಕನಾಡಿ ದೇನಾ ಬ್ಯಾಂಕ್‌ಗೆ ನೀಡಿ ವಿಮಾ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದ ನಗರದ ವಕೀಲ ಎ.ಸಿ.ಜಯರಾಜ್ ಮಂಗಳವಾರ ನಗರದ ಎರಡನೇ ಸಿಜೆಎಂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ನ್ಯಾಯಾಧೀಶರಾದ ಬಿ.ವಿ.ಪ್ರಕಾಶ್ ಮತ್ತು ಚೌದಾಪುರ್ಕರ್ ಅವರ ಸೀಲುಗಳನ್ನು ಪೋರ್ಜರಿ ಮಾಡಿದ ಆರೋಪ ಇದ್ದು, ಸೆಷನ್ಸ್ ನ್ಯಾಯಾಲಯದ ಅಧಿಕಾರಿ ಈ ಬಗ್ಗೆ ಬಂದರು ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ನ್ಯಾಯಾಲಯದ ಸೀಲು ಮತ್ತು ಸಹಿಯನ್ನೇ ನಕಲಿಯಾಗಿ ತಯಾರಿಸಿರುವ ಪ್ರಕರಣ ಗಂಭೀರವಾಗಿದ್ದು, ಈ ಬಗ್ಗೆ ಬಂಧನ ಭೀತಿಯಿಂದ ಜಯರಾಜ್ ತಲೆಮರೆಸಿಕೊಂಡಿದ್ದರು. ಅಲ್ಲದೆ ಸ್ಥಳೀಯ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲೂ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.

Ac_jayaraj_arest2

ಕಳೆದ ವರ್ಷದ ಮೇ ತಿಂಗಳಿನಲ್ಲಿ ಪ್ರಕರಣ ನಡೆದಿದ್ದು, ಜೂನ್ ತಿಂಗಳಲ್ಲಿ ಬೆಳಕಿಗೆ ಬಂದು ದೂರು ದಾಖಲಾಗಿತ್ತು. ಅಲ್ಲಿಂದ ಜಯರಾಜ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಇದೀಗ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ವಕೀಲ ವಿಕ್ರಮ್ ಹೆಗ್ಡೆ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಫೆ.28ರಂದು ನ್ಯಾಯಾಲಯದ ಮುಂದೆ ಬರಲಿದೆ.

ಎ.ಸಿ.ಜಯರಾಜ್ ವಾಹನ ಅಪಘಾತದಲ್ಲಿ ವಿಮಾ ಹಣ ದೊರಕಿಸಿ ಕೊಡುವ ಕೇಸುಗಳಲ್ಲಿ ಹೆಚ್ಚಾಗಿ ಕಾನೂನು ನೆರವು ನೀಡುತ್ತಿದ್ದರು. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯ ವಿಮಾ ಹಣವನ್ನು ಬ್ಯಾಂಕ್‌ಗಳಲ್ಲಿ ಗಾಯಾಳುಗಳ ಹೆಸರಲ್ಲಿ ಫಿಕ್ಸೃ್ಡ್ ಡಿಪಾಸಿಟ್ ಇಡುತ್ತದೆ. ಅವಧಿ ಮುಗಿದೊಡನೆ ನ್ಯಾಯಾಲಯ ಸಂಬಂಧಪಟ್ಟ ದಾಖಲೆಗಳನ್ನು ಬ್ಯಾಂಕ್‌ಗೆ ಕಳುಹಿಸಿ ವಿಮಾ ಹಣವನ್ನು ಗಾಯಾಳುವಿಗೆ ಬಿಡುಗಡೆ ಮಾಡಲು ಆದೇಶಿಸಿದಾಗ ಹಣ ಗಾಯಾಳುವಿಗೆ ಸಿಗುತ್ತದೆ.

ಅದೇ ರೀತಿ ನಗರದ ಕಂಕನಾಡಿಯ ಬ್ಯಾಂಕ್‌ಗೆ ವಕೀಲ ಎ.ಸಿ.ಜಯರಾಜ್ ಕಚೇರಿಯಿಂದ ನೀಡಲಾದ ದಾಖಲೆಗಳಲ್ಲಿ ನ್ಯಾಯಾಧೀಶರ ನಕಲಿ ಸಹಿ ಮತ್ತು ಸೀಲುಗಳು ಕಂಡುಬಂದಿತ್ತು. ಬ್ಯಾಂಕ್ ಮ್ಯಾನೇಜರ್ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಸ್ವತಃ ನ್ಯಾಯಾಲಯದ ಅಧಿಕಾರಿ ಮೂಲಕವೇ ವಕೀಲ ಎ.ಸಿ.ಜಯರಾಜ್ ಮತ್ತು ಇದಕ್ಕೆ ಸಹಕರಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿತ್ತು.

Write A Comment