ಕನ್ನಡ ವಾರ್ತೆಗಳು

ವಿದ್ಯುತ್ ದರ ಯುನಿಟ್‌ಗೆ 80 ಪೈಸೆ ಏರಿಕೆ ಪ್ರಸ್ತಾಪ : ಬಳಕೆದಾರರಿಂದ ತೀವ್ರ ವಿರೋಧ

Pinterest LinkedIn Tumblr

dc_offcec_pressmeet_2

ಮಂಗಳೂರು, ಫೆ. 11: ಮೆಸ್ಕಾಂಗೆ ಯುನಿಟ್‌ವೊಂದಕ್ಕೆ ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ 95 ಪೈಸೆ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ದರವನ್ನು ಯುನಿಟ್‌ಗೆ 80 ಪೈಸೆ ಏರಿಕೆ ಮಾಡಬೇಕೆಂಬ ಪ್ರಸ್ತಾಪವನ್ನು ಮೆಸ್ಕಾಂ ವ್ಯಾಪ್ತಿಯ ಸಾರ್ವಜನಿಕ ಬಳಕೆದಾರರು ತೀವ್ರವಾಗಿ ವಿರೋಧಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ವಿದ್ಯುತ್ ದರ ಪರಿಷ್ಕರಣೆ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ದ.ಕ. ಜಿಲ್ಲೆಗಳನ್ನೊಳಗೊಂಡ ಮೆಸ್ಕಾಂ ವಾಪ್ತಿಯ ಸಾರ್ವಜನಿಕ ದೂರುಗಳ ಅರ್ಜಿ ವಿಚಾರಣೆಯನ್ನು ನಡೆಸಿದ ಸಂದರ್ಭ ಈ ವಿರೋಧ ವ್ಯಕ್ತವಾಯಿತು.

dc_offcec_pressmeet_1

ರೈತ ಸಂಘಟನೆಗಳು, ಬಳಕೆದಾರರ ವೇದಿಕೆ ಸೇರಿದಂತೆ ಸಾರ್ವಜನಿಕ ವಲಯ ಹಾಗೂ ಕೈಗಾರಿಕಾ ವಲಯದ ಮುಖ್ಯಸ್ಥರಿಂದಲೂ ವಿದ್ಯುತ್ ದರ ಏರಿಕೆಗೆ ಆಕ್ಷೇಪ ಕೇಳಿ ಬಂತು. ಬಳಕೆದಾರರ ವೇದಿಕೆಯ ವೆಂಕಟಗಿರಿ ಭಟ್ ಮಾತನಾಡಿ, ಎಸ್ಕಾಂಗೆ 2006ರಿಂದಲೇ ಒಟ್ಟು 393 ಕೋ.ರೂ. ವಿವಿಧ ಮೂಲಗಳಿಂದ ಬಾಕಿ ಇವೆ. ಆ ಬಾಕಿ ವಸೂಲಾದಲ್ಲಿ ನಷ್ಟದ ಪ್ರಶ್ನೆಯೇ ಇಲ್ಲ. ವಿದ್ಯುತ್ ದರವನ್ನು ನಾಲ್ಕೂವರೆ ಪೈಸೆ ಇಳಿಕೆ ಮಾಡಬೇಕಾಗುತ್ತದೆ. ಮಾತ್ರವಲ್ಲದೆ ಮೆಸ್ಕಾಂ ವ್ಯಾಪ್ತಿಯಲ್ಲಿ ಶೇ. 98ರಷ್ಟು ವಿದ್ಯುತ್ ದರ ಪಾವತಿಯಾಗುತ್ತಿದೆ. ಹಾಗಾಗಿ ಮೊದಲು ಬಾಕಿಯನ್ನು ವಸೂಲು ಮಾಡುವಲ್ಲಿ ಕ್ರಮವಾಗಲಿ ಎಂದು ಆಗ್ರಹಿಸಿದರು.

ಸಾರ್ವಜನಿಕರ ಉಪಯೋಗಕ್ಕಾಗಿ ರಚಿಸಲಾದ ಸೌಜನ್ಯ ಕೌಂಟರ್‌ನಲ್ಲಿ ಏನೂ ಮಾಹಿತಿಯೂ ಸಿಗುವುದಿಲ್ಲ. ಹಾಗಾಗಿ ವಿದ್ಯುತ್ ಇಲಾಖೆಯಲ್ಲಿನ ನ್ಯೂನ್ಯತೆಗಳನ್ನು ಮೊದಲು ಸರಿಪಡಿಸಿ ಎಂದು ವೆಂಕಟಗಿರಿ ಸಲಹೆ ನೀಡಿದರು.

dc_offcec_pressmeet_3

ಭಾರತೀಯ ಕಿಸಾನ್ ಸಂಘದ ಸತ್ಯನಾರಾಯಣ ಉಡುಪ ಅವರು ವಿದ್ಯುತ್ ದರ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾ, ನಿರಂತರ ಜ್ಯೋತಿ ಯೋಜನೆ ಜಾರಿಗೊಳಿಸುವ ಮೊದಲು ವಿದ್ಯುತ್ ಕಳ್ಳತನ, ಅಕ್ರಮವನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದರು. ಭಾರತೀಯ ಕಿಸಾನ್ ಸಂಘದ ಪರಮೇಶ್ವರಪ್ಪ ರವರು ಮಾತನಾಡಿ, ಚಿಕ್ಕಮಗಳೂರಿನಲ್ಲಿ ಟ್ರಾನ್ಸ್ ಫಾರ್ಮರ್‌ಗಾಗಿ ಹೋರಾಟ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಟ್ರಾನ್ಸ್ ಫಾರ್ಮರ್ ಅಳವಡಿಕೆಗಾಗಿ 2-3 ತಿಂಗಳು ವ್ಯಯಿಸಿರುವ ಬಗ್ಗೆ ತಮ್ಮಲ್ಲಿ ದಾಖಲೆಗಳಿರುವುದಾಗಿ ಸಭೆಯಲ್ಲಿ ಪ್ರಸ್ತುತ ಪಡಿಸಿದರು.

ವಿಭಾಗೀಯ ಕಚೇರಿಗಳಲ್ಲಿ ಸೂಚನಾ ಫಲಕ ಅಳವಡಿಕೆ :

ಅರ್ಜಿ ಬಂದ ಏಳು ದಿನಗಳಲ್ಲಿ ಟ್ರಾನ್ಸ್ ಫಾರ್ಮರ್ ಹಾಕಬೇಕೆಂಬ ನಿಯಮವೇ ಇದೆ. ಹಾಗಿದ್ದರೂ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ. ಹಾಗಾಗಿ ಮೆಸ್ಕಾಂನಿಂದ ಸಾರ್ವಜನಿಕರಿಗೆ ಒದಗಿಸಲಾಗುವ ವಿವಿಧ ರೀತಿಯ ಸೌಲಭ್ಯಗಳ ನಿಗದಿತ ಅವಧಿಯ ಕುರಿತು ಪ್ರತಿಯೊಂದು ವಿಭಾಗೀಯ ಕಚೇರಿಗಳಲ್ಲಿಯೂ ಬೋರ್ಡ್ ಅಳವಡಿಸಲು ಸೂಚಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸ ಮೂರ್ತಿ ತಿಳಿಸಿದರು.

ಸಭೆಯ ಆರಂಭದಲ್ಲಿ ದರ ಹೆಚ್ಚಳದ ಪ್ರಸ್ತಾಪವನ್ನಿತ್ತ ಮೆಸ್ಕಾಂ ಆಡಳಿತ ನಿರ್ದೇಶಕ ಚಿಕ್ಕನಂಜಪ್ಪ, ಯುನಿಟ್ ಒಂದಕ್ಕೆ 5.06 ರೂ. ಆದಾಯ ಬರುತ್ತಿದ್ದು, 5.91 ರೂ.ದರದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಯುನಿಟ್ ಒಂದಕ್ಕೆ 85 ಪೈಸೆ ಕೊರತೆಯನ್ನು ಮೆಸ್ಕಾಂ ಅನುಭವಿಸುತ್ತಿದೆ. ಮಾತ್ರವಲ್ಲದೆ ವಿದ್ಯುತ್ ಖರೀದಿಯಲ್ಲಿ ಹೆಚ್ಚಳ ಮತ್ತು ಖರೀದಿ ವೆಚ್ಚದಲ್ಲಿ ಹೆಚ್ಚಳ ಹಾಗೂ ಬಡ್ಡಿ ಮತ್ತು ಇತರ ಹಣಕಾಸು ವೆಚ್ಚದಲ್ಲಿನ ಹೆಚ್ಚಳದಿಂದಾಗಿ ದರ ಏರಿಕೆ ಅನಿವಾರ್ಯ ಎಂದು ಹೇಳಿದರು.

ಮಂಜುಗಡ್ಡೆ ಸ್ಥಾವರಗಳಿಗೆ ವಿಶೇಷ ದರ ನಿಗದಿಗೆ ಆಗ್ರಹ:

ಮೆಸ್ಕಾಂ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಮಂಜುಗಡ್ಡೆ ಸ್ಥಾವರಗಳು ಕಾರ್ಯ ನಿರ್ವಹಿ ಸುತ್ತಿದ್ದು, ಇದೀಗ ನಷ್ಟದಿಂದಾಗಿ 25ಕ್ಕೂ ಅಧಿಕ ಸ್ಥಾವರಗಳು ಮುಚ್ಚುಗಡೆಯಾಗಿವೆ. ಈ ಸ್ಥಾವರಗಳಿಗೆ ವಿದ್ಯುತ್ ಪ್ರಮುಖ ಮೂಲಭೂತ ಸೌಲಭ್ಯವಾಗಿದ್ದು, ಮೀನುಗಾರಿಕೆ ಕೃಷಿಯನ್ನು ಇದು ಅವಲಂಬಿಸಿರುತ್ತದೆ. ಮಳೆಗಾಲದಲ್ಲಿ ಮೂರು ತಿಂಗಳ ಕಾಲ ಮೀನುಗಾರಿಕೆ ಸ್ಥಗಿತಗೊಳ್ಳುವು ದರಿಂದ ಮಂಜುಗಡ್ಡೆ ಬೇಡಿಕೆ ಇಲ್ಲದೆ ಕನಿಷ್ಠ ವಿದ್ಯುತ್ ದರವನ್ನು ಪಾವತಿಸಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಘಟಕಗಳು ನಷ್ಟ ಅನುಭವಿಸಬೇಕಾಗುತ್ತದೆ. ಕೇರಳದಲ್ಲಿ ಇಂತಹ ಘಟಕಗಳಿಗೆ ಯುನಿಟ್ ಒಂದಕ್ಕೆ 5.20 ರೂ., ಗೋವಾದಲ್ಲಿ 3.20 ರೂ.ಗಳಿದ್ದು ನಮ್ಮಲ್ಲಿ 5.65 ರೂ. ಇದೆ. ಈ ಹಿನ್ನೆಲೆಯಲ್ಲಿ ಈ ಘಟಕಗಳಿಗೆ ವಿಶೇಷ ದರ ನಿಗದಿಪಡಿಸಬೇಕು ಎಂದು ಕರ್ನಾಟಕ ಮಂಜುಗಡ್ಡೆ ಘಟಕಗಳ ಸಂಘಟನೆಯ ಕಾನೂನು ಸಲಹೆಗಾರ ದೇವದಾಸ್ ಆಗ್ರಹಿಸಿದರು.

ಆಟೋರಿಕ್ಲೋಶರ್ ಕಾರ್ಯನಿರ್ವಹಿಸುತ್ತಿಲ್ಲ

ತೀರ್ಥಹಳ್ಳಿ ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಮಾತನಾಡಿ, ಕೋಣಂದೂರಿನಲ್ಲಿ ಸಬ್ ಸ್ಟೇಷನ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ತಲಾ 50 ಲಕ್ಷ ರೂ. ವೆಚ್ಚದಲ್ಲಿ ಹಾಕಲಾಗಿರುವ ಒಂಬತ್ತು ಆಟೋ ರಿಕ್ಲೋಶರ್‌ಗಳಲ್ಲಿ ನಾಲ್ಕು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅವುಗಳ ನಿರ್ವಹಣೆಯನ್ನು ನೋಡಲಾಗುತ್ತಿಲ್ಲ ಎಂದು ದೂರಿದರು.

ಸಭೆಯಲ್ಲಿ ಎಂಎಸ್‌ಇಝಡ್ ಪರವಾಗಿ ಮಾತನಾಡಿದ ರಾಜೀವ್ ಬಾಂಗ, 16,000 ಕೋಟಿ ರೂ.ಗಳ ಸೆಝ್ ಯೋಜನೆಗಾಗಿ ಈಗಾಗಲೇ 11,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಹಾಗಾಗಿ ಎಸ್‌ಇಝೆಡನ್ನು ಬೃಹತ್ ಪ್ರಮಾಣದ ವಿದ್ಯುತ್ ಬಳಕೆದಾರ ಘಟಕವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಕೆಸಿಸಿಐ ಪರವಾಗಿ ನಿಗಮ್ ವಸಾನಿ, ರಾಮಚಂದ್ರ ಭಟ್ ಹಾಗೂ ಸಾರ್ವಜನಿಕರ ಪರವಾಗಿ ಕುದಿ ಶ್ರೀನಿವಾಸ್ ಭಟ್, ಕೃಷ್ಣಮೂರ್ತಿ ಭಟಂ, ಎಂ.ಜಿ. ಭರತ್ ಮೊದಲಾದವರು ವಿದ್ಯುತ್ ದರ ಹೆಚ್ಚಳವನ್ನು ವಿರೋಧಿಸಿದರು. ಸಭೆಯಲ್ಲಿ ಆಯೋಗದ ಸದಸ್ಯರಾದ ಡಿ.ಬಿ. ಮಣಿವೆಲ್ ರಾಜು, ಎಚ್.ಡಿ. ಅರುಣ್ ಕುಮಾರ್ ಉಪಸ್ಥಿತರಿದ್ದರು.

ಮಾ.31ರೊಳಗೆ ವರದಿ

ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿ ರಾಜ್ಯದ ಎಲ್ಲಾ ವಿದ್ಯುತ್ ಘಟಕಗಳ ವ್ಯಾಪ್ತಿ ಯಲ್ಲಿ ಸಾರ್ವಜನಿಕ ದೂರು ಅರ್ಜಿಗಳನ್ನು ವಿಚಾರಣೆ ನಡೆಸಿ ಮಾರ್ಚ್ 31ರೊಳಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಒಟ್ಟು ಎಸ್ಕಾಂ ವ್ಯಾಪ್ತಿಯಿಂದ 2015 ಅರ್ಜಿಗಳು ಆಯೋಗಕ್ಕೆ ಬಂದಿದ್ದು, ಇದರಲ್ಲಿ ಮೆಸ್ಕಾಂ ವ್ಯಾಪ್ತಿಯಲ್ಲೇ 1,900 ಅರ್ಜಿಗಳು ಸ್ವೀಕೃತವಾಗಿವೆ. ಎಸ್ಕಾಂಗೆ ಒಟ್ಟು 393 ಕೋಟಿ ರೂ. ಹೊರಬಾಕಿ ಇದ್ದು, ಈ ಬಗ್ಗೆ ಸರಕಾರಕ್ಕೆ ಬರೆಯಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಅಧ್ಯಕ್ಷ ಎಂ.ಆರ್.ಶ್ರೀನಿವಾಸ ಮೂರ್ತಿ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ವರದಿ ಕೃಪೆ : ವಾಭಾ

Write A Comment