ವರದಿ / ಚಿತ್ರ :ಸತೀಶ್ ಕಾಪಿಕಾಡ್
ಮಂಗಳೂರು ,ಫೆ.10 : ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ವಿಧ್ಯಾರ್ಥಿಗಳ ಸಂಘದ 5ನೇ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 13 ರಂದು ಶುಕ್ರವಾರ ಸಂಜೆ 5 ಗಂಟೆಗೆ ಕಾಲೇಜಿನ ಪ್ರಾಂಗಣದಲ್ಲಿ ಜರಗಲಿದೆ ಎಂದು ಸಂಘದ ಅಧ್ಯಕ್ಷ ನವೀನ್ ಚಂದ್ರ.ಬಿ ತಿಳಿಸಿದ್ದಾರೆ.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ವಿಧ್ಯಾರ್ಥಿಗಳ ಸಂಘ ಸಕ್ರಿಯವಾಗಿ ಕಳೆದ 4 ವರ್ಷಗಳಿಂದ ಯಶಸ್ವಿಯಾಗಿ ವಾರ್ಷಿಕ ದಿನವನ್ನು ಆಚರಿಸಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಚಿರ ನೆನೆಪಿನಲ್ಲಿ ಉಳಿಯುವ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವೆಂಕಟೇಶ್ ಶಿವ ಭಕ್ತಿ ಯೋಗ ಸಂಘದ ಅಧ್ಯಕ್ಷಕರಾದ ಬಿ.ದೇವದಾಸ್ ವಹಿಸಲಿರುವರು. ಹಳೆ ವಿಧ್ಯಾರ್ಥಿಗಳಾದ ಡಾ. ಲೆನೊರ್ಡ್ ಮಾಚಡೋ, ಮನಪಾದ ವಿರೋಧ ಪಕ್ಷದ ನಾಯಕ ಪೇಮನಂದ ಶೆಟ್ಟಿ, ಕಾಲೇಜಿನ ಸಂಚಾಲಕ ಎಸ್. ಜಯವಿಕ್ರಮ, ಲೆಕ್ಕ ಪರಿಶೋಧಕ ಸಿ.ಎ ನಂದಗೋಪಾಲ್ ಶೆಣೈ ಮುಂತಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಡಾ ನರಸಿಂಹ ಮೂರ್ತಿ, ಡಾ. ಜಯಪ್ರಕಾಶ್ ರಾವ್, ಕಾಲೇಜಿನ ಮಾಜಿ ವಿಧ್ಯಾರ್ಥಿ (ಹಳೆ ವಿಧ್ಯಾರ್ಥಿ) ಗಳಾದ ಶ್ರೀಮತಿ ಯೋಗ್ಯ ರೈ, ಸದಾಶಿವ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಳೆದ ಶೈಕ್ಷಣಿಕ ವರ್ಷ ಹಾಗೂ ಈ ವರ್ಷ ಸಂಘದ ವತಿಯಿಂದ ಕಾಲೇಜಿನ ವಿಧ್ಯಾರ್ಥಿಗಳಿಗೆ ನಾಯಕತ್ವ ತರಬೇತಿ, ವ್ಯಕ್ತಿತ್ವ ವಿಕಸನ ಶಿಬಿರ, ಇನ್ನಿತರ ಚಟುವಟಿಕೆಗಳನ್ನು ನಡೆಸಿಕೊಂಡು ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಸಂಘ ಬದ್ಧವಾಗಿದೆ.
ಸಂಘದ ಉಪಾಧ್ಯಕ್ಷರಾದ ಶ್ರೀ ನಂದಗೋಪಾಲ್ ಶೆಣೈ ಅವರ ನಿಧಿಯಿಂದ ಪ್ರತಿ ವರ್ಷವೂ ಬಡ ಆರ್ಹ ಮಕ್ಕಳಿಗೆ ವಿಧ್ಯಾರ್ಥಿ ವೇತನವನ್ನು ನೀಡಲಾಗುತ್ತಾ ಬಂದಿದ್ದು, ಈ ವರ್ಷ ಕೂಡ ಶ್ರೀಯುತರು ಸುಮಾರು 10 ವಿಧ್ಯಾರ್ಥಿಗಳಿಗೆ ರೂ. 1 ಲಕ್ಷ 20 ಸಾವಿರ ವಿಧ್ಯಾರ್ಥಿ ವೇತನವನ್ನು ನೀಡಲಿರುವರು. ಮಾತ್ರವಲ್ಲದೇ ನಮ್ಮ ಸಂಘದ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ಅವರು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದು ನವೀನ್ ಚಂದ್ರ ವಿವರಿಸಿದರು.
ಈ ಕಾಲೇಜಿನಲ್ಲಿ ಕಲಿತು ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರಲ್ಲಿ ಅರ್ಹರನ್ನು ಸಂಪರ್ಕಿಸಿ ಅವರನ್ನು ಸನ್ಮಾನಿಸಿ ಗುರುತಿಸುವಂತಹ ಮಹತ್ತರ ಕಾರ್ಯವನ್ನು ಸಂಘವು ಮಾಡುತ್ತ್ತಾಬಂದಿದೆ. ಮಾತ್ರವಲ್ಲದೇ ಕಾಲೇಜಿನಲ್ಲಿ ನಿವೃತ್ತ ಉಪನ್ಯಾಸಕರಾಗಿದ್ದವರನ್ನು ಮತ್ತೆ ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸುವಂತಹ ಉತ್ತಮ ಕಾರ್ಯವೂ ಕೂಡಾ ವರುಷಗಳಿಂದ ಸಂಘದ ವತಿಯಿಂದ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತೀ ವರ್ಷ ಕ್ರೀಡಾಕೂಟ ಆಯೋಜಿಸುವ ಮೂಲಕ ಎಲ್ಲರನ್ನೂ ಒಂದೇ ಕಡೆ ಒಟ್ಟು ಸೇರಿಸುವ ಹಾಗೂ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಕಾರ್ಯವನ್ನು ಸಂಘ ಮಾಡುತ್ತಿದೆ. ಒಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಘವು ಉತ್ತಮ ಚಟುವಟಿಕೆಗಳ ಮೂಲಕ ಸಾಮಾಜಿಕ ಚಿಂತನೆಗಳೊಂದಿಗೆ ಮುಂದಡಿ ಇಡುತ್ತಿದೆ ಎಂದು ಸಂಘದ ಕಾರ್ಯದರ್ಶಿ ಸುನೀಲ್ ದತ್ತ್ ಪೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ನಂದಗೋಪಾಲ್ ಶೆಣೈ, ಕೋಶಾಧಿಕಾರಿ ಧನಂಜಯ ನಾಯಕ್, ಸದಸ್ಯರಾದ ರಾಜೇಶ್ ಉಪಸ್ಥಿತರಿದ್ದರು.




