ಕನ್ನಡ ವಾರ್ತೆಗಳು

ಔಷಧಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ; 1.70ಲಕ್ಷ ಮೌಲ್ಯದ ನಗ-ನಗದು ವಶ

Pinterest LinkedIn Tumblr

robbary

ಉಡುಪಿ: ಔಷಧಿ ಕೇಳುವ ನೆಪದಲ್ಲಿ ಮಧ್ಯರಾತ್ರಿ ಮನೆ ಬಾಗಿಲು ಬಡಿದು ಒಳ ನುಗ್ಗಿದ ತಂಡವೊಂದು 1.70ಲಕ್ಷ ರೂ. ಮೌಲ್ಯದ ನಗದು, ನಗ ದೋಚಿದ್ದಾರೆ. ಉಡುಪಿ ತಾಲೂಕು ಆರೂರು ಗ್ರಾಮದ ಶಿವ ನಗರ ಕಂಬಳ ಗದ್ದೆ ಕ್ರಾಸ್‌ನ ಸಂದೇಶ ಎನ್ನುವವರ ಮನೆಯಲ್ಲಿ ಭಾನುವಾರ ರಾತ್ರಿ 11.30 ಕ್ಕೆ ಘಟನೆ ನಡೆದಿದೆ.

ಈ ಹಿಂದೆ ಔಷಧಕ್ಕಾಗಿ ಬಂದಿದ್ದ ವ್ಯಕ್ತಿ ಮನೆಯ ಬಾಗಿಲು ಬಡಿದು ಸಂದೇಶ ಕಿಟಕಿಯಲ್ಲಿ ನೋಡಿ ವಿಚಾರಿಸಿದಾಗ ಔಷಧಿ ಬೇಕೆಂದು ಕೇಳಿದ್ಧಾನೆ. ಔಷಧಿ ಬೆಳಗ್ಗೆ ಕೊಡುವುದಾಗಿ ಹೇಳಿದಾಗ ತಾನಿಲ್ಲೇ ಮಲಗಲು ಜಾಗ ಕೊಡಿ ಎಂದಿದ್ದಾನೆ.  ಮನೆ ಪಕ್ಕದ ಹಾಲ್‌ನ ಶೆಟರ್ ಬಾಗಿಲು ತೆಗೆಯುವ ನಿಟ್ಟಿನಲ್ಲಿ ಮನೆ ಬಾಗಿಲು ತೆಗೆದು ಹೊರಗಡೆ ಬಂದಾಗ ಮನೆ ಬಳಿ ಇದ್ದ ಆರೋಪಿಗಳು ರಾಡ್ ಮತ್ತು ಮಚ್ಚು ಹಿಡಿದು ಬಂದು ಸಂದೇಶನ ಬೆನ್ನಿಗೆ ಹೊಡೆದರು.

ಮಚ್ಚಿನಿಂದ ಕಡಿಯಲು ಬಂದಾಗ ಅದು ತಪ್ಪಿ ಕಂಬಕ್ಕೆ ತಾಗಿದೆ. ಸಂದೇಶ್ ಬೊಬ್ಬೆ ಹಾಕದಂತೆ ಮನೆಯೊಳಗೆ ತಳ್ಳಿಕೊಂಡು ಹೋಗಿ ವಿದ್ಯುತ್ ಮೈನ್ ಸ್ವಿಚ್ಚ್ ಆಫ್ ಮಾಡಿಸಿ, ಸಂದೇಶ್ ಅವರ ಮಡದಿಯ ಬಾಯಿ ಒತ್ತಿ ಹಿಡಿದು ಸಂದೇಶ್ ಮತ್ತು ಅವರ ಮಡದಿಯ ಮೊಬೈಲ್ ಫೋನ್ ಕಸಿದರು. ಚಿನ್ನ, ಹಣ ಎಲ್ಲಿದೆ ಎಂದು ತೋರಿಸದಿದ್ರೆ ನಿಮ್ಮನ್ನು, ಮಗುವನ್ನು ಸಾಯಿಸುವುದಾಗಿ ಬೆದರಿಸಿದ ಆರೋಪಿಗಳು ಮೊಬೈಲ್ ಫೋನಿನ ಬೆಳಕಲ್ಲಿ ಬೆಡ್‌ರೂಮಿಗೆ ಎಳೆದೊಯ್ದು , ಬಲವಂತವಾಗಿ ಕಪಾಟಿನ ಬೀಗ ತೆಗೆಸಿ, ನಗದು 18,000 ರೂ. ಮತ್ತು ಚಿನ್ನಾಭರಣ ದೋಚಿದರು.

ಸಂದೇಶ್ ಅವರ ಮಡದಿಯನ್ನು ಬೆದರಿಸಿ 5 ಪವನ್ ತೂಕದ ಕರಿಮಣಿ ಸರ, ಕಿವಿ ಬೆಂಡೋಲೆಯನ್ನೂ ಬಿಡದೆ ಕಸಿದರು. ಸಂದೇಶ್ ಅವರನ್ನು ಕೋಣೆಗೆ ಕರೆದೊಯ್ದು ಲ್ಯಾಪ್‌ಟಾಪ್, ಕರೆಂಟ್ ಸ್ಟೌವ್ ಒಯ್ದಿದ್ದಾರೆ. ಕೊನೆಯಲ್ಲಿ ಸಂದೇಶ್, ಅವರ ಪತ್ನಿ ಮತ್ತು ಮಗುವನ್ನು ಪ್ಲೈವುಡ್ ಬಾಗಿಲ ಕೋಣೆಯೊಳಗೆ ತಳ್ಳಿ ಚಿಲಕ ಹಾಕಿ, ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಸಿ ಮನೆಯ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ತೆರಳಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment